ಕೋಣಂದೂರು ಸಮೀಪದ ಗ್ರಾಮದಲ್ಲಿ ದೊರೆತ ಎರಡು ವೀರಗಲ್ಲುಗಳು.  
ಶಿವಮೊಗ್ಗ

ಹೊಯ್ಸಳರ ಕಾಲದ ಜೋಡಿ ವೀರಗಲ್ಲು ಅಧ್ಯಯನ

ಪ್ರಮುಖ ಮುಖ್ಯಾಂಶಗಳು

  • ಹಲ್ಲುಸಾಲೆ ಗ್ರಾಮದಲ್ಲಿ ಎರಡು ವೀರಗಲ್ಲು
  • 6 ಅಡಿ ಎತ್ತರವಿದ್ದು, 5 ಅಂತಸ್ತು ಹೊಂದಿವೆ­­
  • ಹೊಯ್ಸಳರ ಕಾಲದ ಜೋಡಿ ವೀರಗಲ್ಲು ಅಧ್ಯಯನ
ತೀರ್ಥಹಳ್ಳಿ: ತಾಲೂಕಿನ ಕೋಣಂದೂರು ಸಮೀಪದ ಹಲ್ಲುಸಾಲೆ ಗ್ರಾಮದಲ್ಲಿ ಎರಡು ವೀರಗಲ್ಲುಗಳನ್ನು ಅಧ್ಯಯನ ಮಾಡಲಾಗಿದೆ. ಮೊದಲನೇ ವೀರಗಲ್ಲು ಕ್ರಿ.ಶ. 1172 ಹಾಗೂ ಎರಡನೇ ವೀರಗಲ್ಲು ಕ್ರಿ.ಶ 1251ರ ಇಸವಿಗೆ ಸೇರಿದವು.
ಹೊಯ್ಸಳರ ಕಾಲದ ಲಿಪಿಯಲ್ಲಿ ಬರೆಯಲ್ಪಟ್ಟಿರುವ ಮೊದಲನೇ ವೀರಗಲ್ಲು ಶಾಸನವು 6 ಅಡಿ ಎತ್ತರವಿದ್ದು, 5 ಅಂತಸ್ತುಗಳನ್ನು ಹೊಂದಿದೆ. 23 ಸಾಲುಗಳನ್ನು ಹೊಂದಿರುವ ಎರಡನೇ ವೀರಗಲ್ಲು 6 ಅಡಿ ಎತ್ತರವಿದ್ದು 5 ಅಂತಸ್ತುಗಳಿಂದ ಕೂಡಿದ್ದು 24 ಸಾಲುಗಳಲ್ಲಿ ಬರೆಯಲ್ಪಟ್ಟಿದೆ.
ಈ ವೀರಗಲ್ಲುಗಳಲ್ಲಿ ಯುದ್ಧದ ವರ್ಣನೆ ಹೊಂದಿದೆ. ಒಂದನೇ ವೀರಗಲ್ಲಿನಲ್ಲಿ ಸಿರಿಯಮ್ಮ ಹೆಗ್ಗಡೆ ಮತ್ತು ಹೊಯ್ಸಯ್ಯನು ಯುದ್ಧ ರಂಗದಲ್ಲಿ ಹೋರಾಡಿದ ವಿವರಣೆ ಇದೆ. ಸಗಡವಳ್ಳಿಯ ನಾಡಾಧಿಪತಿಯಾದ ಮಾಂಡಳಿಕ ಸಿರಿಯಮ್ಮ ಹೆಗ್ಗಡೆ ಹಾಗೂ ಹೆದ್ದೂರು ನಾಡಾಧಿಪತಿ ಅಣ್ಣಮ್ಮ ಹೆಗ್ಗಡೆ ನಡುವೆ ನಡೆದ ಕುದುರೆ ಕಾಳಗದಲ್ಲಿ ಸಿರಿಯಮ್ಮ ಹೆಗ್ಗಡೆ ಮತ್ತು ಮಾವನಾದ ಹೊಯ್ಸಯ್ಯ ವೀರಾವೇಶದಿಂದ ಹೋರಾಡುತ್ತಿರುವಾಗ ಮರಣ ಹೊಂದಿದವರ ಬಗ್ಗೆ ವಿವರಣೆ ಇದೆ. ಈ ಶಾಸನದಲ್ಲಿ ಹೊಯ್ಸಯ್ಯನ ಕಿರಿಯ ಸಹೋದರ ಜಕ್ಕಯ್ಯನಿಗೆ ಒಂದು ಸಲಿಗೆ ಭೂಮಿ ದಾನ ಮಾಡಿದ್ದರ ಬಗ್ಗೆ ಉಲ್ಲೆಖವಿದೆ.
ಈ ಶಾಸನವು ಮೊದಲಿಗೆ ನಮ@ಸ್ತುಂಗ ಶಿರಶ್ಚುಂಬಿ...ಎಂಬ ಶ್ಲೋಕದಿಂದ ಆರಂಭವಾಗುವುದು. ನಂತರದ ಸಾಲಿನಲ್ಲಿ ಸಿರಿಯಮ್ಮ ಹೆಗ್ಗಡೆಯ ಬಿರುದಾವಳಿಗಳು ಹಾಗೂ ದಿನಾಂಕದ ಉಲ್ಲೆಖವಿದೆ. 5 ಹಂತಗಳಲ್ಲೂ ಯುದ್ಧದ ವರ್ಣನೆ ಹಾಗೂ ದೃಶ್ಯಗಳಿವೆ. ಶತ್ರು ಸೈನ್ಯದ ಬಾಣಗಳಿಂದ ತಿವಿದಿದ್ದ ಹಾಗೂ ಕುದುರೆಗಳ ಉದ್ಧಟತನದಿಂದ ಸಿರಿಯಮ್ಮ ಹೆಗ್ಗಡೆಯೂ ರಣರಂಗದಲ್ಲಿ ಹತ್ಯೆಯಾಗಿ ಆತನ ಮಾವ ಹೊಯ್ಸಯ್ಯನು ಆತನ ಹೆಣವನ್ನು ಹೊತ್ತೊಯ್ಯುವಾಗ ಶತ್ರುಗಳ ಸೈನಿಕರು ಹೊಯ್ಸಯ್ಯನನ್ನು ಹತ್ಯೆ ಮಾಡುವರು. ಇಡೀ ಯುದ್ಧರಂಗವೇ ಹೆಣಗಳಿಂದ ಕೂಡಿರುವುದು. ಯುದ್ಧರಂಗದಲ್ಲಿ ಪ್ರಾಣಬಿಟ್ಟ ಸಿರಿಯಮ್ಮ ಹೆಗ್ಗಡೆಯನ್ನು ದೇವಲೋಕದ ಅಪ್ಸರೆಯರು ಸ್ವರ್ಗಕ್ಕೆ ಕೊಂಡೊಯ್ಯುವ ಬಗ್ಗೆ ಉಲ್ಲೇಖವಿದೆ.
ಎರಡನೇ ವೀರಗಲ್ಲಿನಲ್ಲಿ ಮಾಂಡಳಿಕನಾದ ಸಿರಿಯಮ್ಮ ಹೆಗ್ಗಡೆಯ ಬಿರುದಾವಳಿಗಳು, ಶಾಸನವನ್ನು ಅಚ್ಚು ಹಾಕಿಸಿದ ದಿನಾಂಕ, ನಂತರದ ಸಾಲುಗಳಲ್ಲಿ ಯುದ್ಧದ ವರ್ಣನೆ ಅತ್ಯಂತ ಸೊಗಸಾಗಿದೆ. ಅಂತ್ಯದಲ್ಲಿ ಶಾಪಾಶಯವನ್ನು ಉಲ್ಲೆಖಿಸಲಾಗಿದೆ. ಈ ಶಾಸನದ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಆಗಬೇಕೆಂದು ಶೃಂಗೇರಿಯ ಸಂಸತ ವಿಶ್ವವಿದ್ಯಾಲಯದ ಇತಿಹಾಸ ಸಹಾಯಕ ಪ್ರಾಧ್ಯಾಪಕ ಡಾ. ಎಂ.ಎ. ಪ್ರಭಾಕರ್​ ಅಭಿಪ್ರಾಯಪಟ್ಟಿದ್ದಾರೆ.