ಸೊರಬ ತಾಲೂಕಿನ ಹಾಯ ಗ್ರಾಮದಲ್ಲಿ ದೊರೆತ ಶಾಸನೋಕ್ತ ಗೋದಾನದ ಕಲ್ಲುಗಳನ್ನು ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕ ಡಾ. ಶೇಜೇಶ್ವರ, ಮಂಜಪ್ಪ ಪರಿಶೀಲಿಸುತ್ತಿರುವುದು. 
ಶಿವಮೊಗ್ಗ

10ನೇ ಶತಮಾನದ ಶಾಸನಗಳ ಅಧ್ಯಯನ | research

ಶಿವಕುಮಾರ ಎಸ್.ಪಿ.
ಸೊರಬ: ತಾಲೂಕಿನ ಹಾಯ ಗ್ರಾಮದ ಕಲ್ಲೇಶ್ವರ ದೇವಾಲಯದ ಬಳಿ ಶಾಸನೋಕ್ತ ಗೋದಾನದ ಕಲ್ಲುಗಳನ್ನು ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕ ಡಾ. ಶೇಜೇಶ್ವರ, ಇತಿಹಾಸ ಸಂಶೋಧಕ ರಮೇಶ ಹಿರೇಜಂಬೂರು ಮತ್ತು ಮಂಜಪ್ಪ ಚುರ್ಚಿಗುಂಡಿ ಅವರ ತಂಡ ಕ್ಷೇತ್ರಕಾರ್ಯ ಕೈಗೊಂಡಾಗ ಅಧ್ಯಯನ ಮಾಡಿದ್ದಾರೆ.
ಒಂದನೇ ಕಲ್ಲಿನಲ್ಲಿ ನಾಲ್ಕು ಸಾಲುಗಳ ಪಾಠವಿದೆ. ಸೂರ್ಯಗ್ರಹಣ ದಿನದಂದು ಚವಠಿಯ ಬಿನಾರದ ಬಡಿಯಣ್ಣ, ಪತ್ನಿ ನಾಲಬ್ಬೆಯು ದಕ್ಷಿಣೆ ಸಹಿತವಾಗಿ ಕುಪ್ಪಗಡೆಯ ಮಹಾಜನಗಳಿಗೆ ಹಾಯ ಗ್ರಾಮದಲ್ಲಿ ಗೋದಾನ ನೀಡಿದ ಮಾಹಿತಿ ಇದೆ. ಇಲ್ಲಿ ಉಲ್ಲೇಖವಾದ ಚಒಠಿ ಪ್ರದೇಶ ಈಗಿನ ಚವಟಿ ಗ್ರಾಮವಾಗಿರುವ ಸಾಧ್ಯತೆ ಇದೆ. ಜಕಯ್ಯ ಎಂಬುವವನು ಇದನ್ನು ಬರೆದಿದ್ದಾನೆ ಎಂದಿದೆ. ಈ ಜಕ್ಕಯ್ಯ ಉದ್ದರೆಯ ಚಾವುಂಡೋಜನ ಮಗನಾಗಿದ್ದಾನೆ.
ಎರಡನೇ ಕಲ್ಲಿನಲ್ಲಿ ಎಂಟು ಸಾಲಿನ ಶಾಸನ ಪಾಠವಿದೆ. ಕೊನೆಯ ಎರಡು ಸಾಲು ಅಳಿಸಿಹೋಗಿವೆ. ಹಾಯ ಗ್ರಾಮಾಡಳಿತ ನೋಡಿಕೊಳ್ಳುತ್ತಿದ್ದ ಚಂದ್ರಾದಿತ್ಯ ಮತ್ತು ಆತನ ತಾಯಿ ಬಲುಯಬ್ಬೆಯರು ಕುಪ್ಪಗಡ್ಡೆಯ ಮಹಾಜನಗಳಿಗೆ ದಕ್ಷಿಣೆ ಸಹಿತ ಗೋದಾನ ನೀಡಿದ್ದಾರೆ.
ಬೃಹತ್ ಸಂಖ್ಯೆಯಲ್ಲಿ ಗೋವುಗಳನ್ನು ದಾನ ನೀಡಿದಾಗ ಅದರ ಸಂಕೇತವಾಗಿ ಈ ರೀತಿಯ ಕಲ್ಲುಗಳನ್ನು ನೆಡಲಾಗುತ್ತಿತ್ತು. ಈ ಗೋಸಾಸ ಕಲ್ಲುಗಳಲ್ಲಿ ಕಾಲದ ಉಲ್ಲೇಖವಿಲ್ಲ. ಲಿಪಿ ವಿನ್ಯಾಸದ ಆಧಾರದಲ್ಲಿ ಇವುಗಳು 10ನೇ ಶತಮಾನದವು ಎಂಬುದು ಸ್ಪಷ್ಟ. ಗೋವುಗಳು ಕೃಷಿ ಸಂಪತ್ತಿನ ಸಂಕೇತಗಳಾಗಿವೆ. ಸೊರಬ ತಾಲೂಕಿನಲ್ಲಿ ಇಂತಹ ಅನೇಕ ಗೋದಾನ ಶಾಸನಗಳು ಕಂಡುಬರುತ್ತವೆ.