ಆನವೇರಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.  
ಶಿವಮೊಗ್ಗ

ವಸತಿ ಶಾಲೆ ಅವ್ಯವಸ್ಥೆಗೆ ವಿದ್ಯಾರ್ಥಿಗಳ ಆಕ್ರೋಶ

ಹೊಳೆಹೊನ್ನೂರು : ಸಮೀಪದ ಆನವೇರಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯರನ್ನು ಕೂಡಲೆ ಅಮಾನತು ಮಾಡಬೇಕೆಂದು 10ನೇ ತರಗತಿ ವಿದ್ಯಾರ್ಥಿಗಳು ಶನಿವಾರ ವಸತಿ ಶಾಲೆ ಮುಂಭಾಗ ಪ್ರತಿಭಟನೆ ನಡೆಸಿದರು.
ವಸತಿ ಶಾಲೆಯ ಅವ್ಯವಸ್ಥೆ ಕುರಿತಂತೆ ಇಲಾಖೆಯ ಜಿಲ್ಲಾಧಿಕಾರಿ ಶೋಭಾ ಶನಿವಾರ ಮಧ್ಯಾಹ್ನ ವಸತಿ ಶಾಲೆಗೆ ಭೆೇಟಿ ನೀಡಿ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಸರಿಪಡಿಸುವುದಾಗಿ ಭರವಸೆ ನೀಡಿ ಹೋದರು. ನಂತರ ಕೆಲ ವಿದ್ಯಾರ್ಥಿಗಳು ತಪ್ಪಿತಸ್ಥರ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ವಸತಿ ಶಾಲೆಯ ಮುಂಭಾಗ ಪ್ರತಿಭಟನೆ ಆರಂಭಿಸಿದರು. ಸ್ಥಳಕ್ಕೆ ಬಂದ ಗ್ರಾಮಸ್ಥರು ಮಕ್ಕಳ ಸಮಸ್ಯೆ ಕೇಳಿ ಪ್ರಾಚಾರ್ಯರನ್ನು ತರಾಟೆಗೆ ತೆಗೆದುಕೊಂಡು ಶಾಲೆಯ ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಕೆಲ ದಿನಗಳ ಹಿಂದೆ ಕಳಪೆ ಆಹಾರ ಸೇವಿಸಿ ನಮ್ಮ ತರಗತಿಯ ವಿದ್ಯಾರ್ಥಿನಿಯೊಬ್ಬಳು ಸಾವನಪ್ಪಿದ್ದಳು.  ವಿದ್ಯಾರ್ಥಿನಿಯ ಸಾವನ್ನು ಯಾವೊಬ್ಬ ಅಧಿಕಾರಿಯೂ ಪ್ರಶ್ನಿಸಲಿಲ್ಲ. ಮಕ್ಕಳಿಗೆ ಹೊಟ್ಟೆ ತುಂಬಾ ಊಟ ನೀಡುವುದಿಲ್ಲ. ಅವಧಿ ಮೀರಿದ ದಿನಸಿ ಬಳಸಿ ಅಡುಗೆ ಮಾಡುತ್ತಾರೆ ಎಂದು ಮಕ್ಕಳು ಗ್ರಾಮಸ್ಥರ ಬಳಿ ಕಣ್ಣಿರಿಟ್ಟರು. ವಸತಿ ಶಾಲೆಯಿಂದ ಪ್ರಾರ್ಚಾರ್ಯೆ ಹೋಗುವವರೆಗೂ ಯಾವುದೇ ಕಾರಣಕ್ಕೂ ಒಳ ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು. ಇಲಾಖೆಯ ಜಿಲ್ಲಾಧಿಕಾರಿ ಶೋಭಾ ರಾತ್ರಿ ಮತ್ತೊಮ್ಮೆ ವಸತಿ ನಿಯಲಕ್ಕೆ ಭೇಟಿ 3 ದಿನದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಸ್ಥಗಿತಗೊಳಿಸಿದರು.
ಗ್ರಾಮ ಮುಖಂಡ ತಿಪ್ಪೇಶ್, ಎಲ್.ಮಂಜುನಾಥ್, ಗಿರೀಶ್‌ರಾವ್, ಸಿದ್ದಪ್ಪ, ಬಸವರಾಜ್ ಪೂಜಾರ್, ರವಿ, ಪ್ರವೀಣ, ನಾಗರಾಜ್, ಶಿವುಕುಮಾರ್, ಎ.ಕೆ. ರಂಗಪ್ಪ, ಶ್ರೀನಿವಾಸ್ ರೆಡ್ಡಿ, ಪ್ರಸನ್ನ ಇತರರಿದ್ದರು.