ಸಾಗರದಲ್ಲಿ ಆಯೋಜಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ಗೀತ ಗಾಯನ ಕಾರ್ಯಕ್ರಮವನ್ನು ಹಾಡುವ ಮೂಲಕ ವಿದುಷಿ ವಸುಧಾ ಶರ್ಮ ಚಾಲನೆ ನೀಡಿದರು. ಶ್ರೀನಾಥ್, ಸಿ.ಟಿ.ಬ್ರಹ್ಮಾಚಾರ್, ಎಂ.ಎಸ್.ಚಂದ್ರಶೇಖರ್ ಇತರರಿದ್ದರು.
ಸಾಗರ: ವಿದ್ಯಾರ್ಥಿಗಳಲ್ಲಿ ಹೊಸ ಹುಮ್ಮಸ್ಸು ಮತ್ತು ಕಲಿಯುವ ಪ್ರವೃತ್ತಿ ಹೆಚ್ಚಿಸುವ ಉದ್ದೇಶದಿಂದ ವಿಶ್ವವಿದ್ಯಾಲಯದ ಹೊರಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಸಂಗೀತ, ನಾಟಕ ಪ್ರದರ್ಶನ ನೀಡಲಾಗುತ್ತಿದೆ. ಆಧುನೀಕರಣ ಪ್ರಭಾವದ ನಡುವೆ ವಿದ್ಯಾರ್ಥಿಗಳಲ್ಲಿ ಸಂಗೀತದ ಆಸಕ್ತಿ ಮೂಡಿಸಬೇಕಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ ಹೇಳಿದರು.
ಸಾಗರದ ಕುಡುಪಲಿ ಸದಾನಂದ ಸ್ವರಾಲಯದಲ್ಲಿ ನಮ್ಮ ರಂಗ ಸ್ವರೂಪ ಟ್ರಸ್ಟ್ ಮತ್ತು ಕುಡುಪಲಿ ಸದಾನಂದ ಸಂಗೀತ ಸೇವಾ ಟ್ರಸ್ಟ್‌ನಿಂದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ಗೀತ ಗಾಯನದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವವಿದ್ಯಾಲಯದಲ್ಲಿ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ ಅಪಾರ ಕಲಾ ಪ್ರತಿಭೆ ಅಡಗಿದೆ. ಎಲ್ಲೆಲ್ಲಿ ಅವಕಾಶವಿದೆಯೋ ಅಲ್ಲಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ನಾಟಕ ಪ್ರದರ್ಶನ ಮತ್ತು ಸಂಗೀತ ಕಾರ್ಯಕ್ರಮ ನೀಡಿ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳಲ್ಲಿ ಹುಮ್ಮಸ್ಸು ಮತ್ತು ಕಲಿಯುವ ಪ್ರವೃತ್ತಿ ಹೆಚ್ಚಿಸುವುದರಿಂದ ಅವಕಾಶಗಳು ತೆರೆದುಕೊಳ್ಳುತ್ತವೆ ಎಂದರು.
ಹಂಪಿ ವಿಶ್ವವಿದ್ಯಾಲಯಕ್ಕೂ ಸಾಗರಕ್ಕೂ ಅವಿನಾಭಾವ ಸಂಬಂಧವಿದೆ. ಇಲ್ಲಿ 25ಕ್ಕೂ ಹೆಚ್ಚು ಉದ್ಯೋಗಿಗಳು ಸಾಗರ ಸುತ್ತಮುತ್ತಲಿನ ಊರಿನವರು. ಹಿರಿಯರಾದ ಕಾಗೋಡು ತಿಮ್ಮಪ್ಪ, ಟಿ.ಪಿ.ಅಶೋಕ್, ಕಾಗೋಡು ಅಣ್ಣಾಜಿ, ಹುಚ್ಚಪ್ಪ ಮಾಸ್ತರ್, ನಾ. ಡಿಸೋಜ ಮುಂತಾದವರು ಈ ವಿಶ್ವವಿದ್ಯಾಲಯ ಮೊಳಕೆಯೊಡೆಯಲು ಕಾರಣೀಕರ್ತರು ಎಂದು ಸ್ಮರಿಸಿದರು.
ಹಂಪಿ ವಿಶ್ವವಿದ್ಯಾಲಯ ಸಂಗೀತ ವಿಭಾಗದ ವಿದ್ಯಾರ್ಥಿಗಳು ಗೀತ ಗಾಯನ ನಡೆಸಿಕೊಟ್ಟರು. ಹಿಂದೂಸ್ತಾನಿ ಗಾಯಕಿ ವಸುಧಾ ಶರ್ಮ ಗೀತ ಗಾಯನಕ್ಕೆ ಚಾಲನೆ ನೀಡಿದರು. ಕುಡುಪಲಿ ಸಂಗೀತ ಸೇವಾ ಟ್ರಸ್ಟ್‌ನ ಶ್ರೀನಾಥ್, ರಂಗ ನಿರ್ದೇಶಕ ಸಿ.ಟಿ.ಬ್ರಹ್ಮಾಚಾರ್, ಎಂ.ಎಸ್.ಚಂದ್ರಶೇಖರ್, ಶ್ರೀಧರ್ ಇತರರಿದ್ದರು.