ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿದ್ಯಾರ್ಥಿ ಸಂಕೇತ್ ಪಾಲಕರೊಂದಿಗೆ ಸಚಿವ ಮಧು ಬಂಗಾರಪ್ಪ.
- ಶಾಲೆಯಿಂದ ಬರುವಾಗ ವಿದ್ಯಾರ್ಥಿ ಹತ್ಯೆ ದುರದೃಷ್ಟಕರ
- ವಿದ್ಯಾರ್ಥಿ ಸಾವಿಗೆ ಪರಿಹಾರದ ಲೆಕ್ಕ ಹಾಕಬಾರದು
- ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾಹಿತಿ
ಶಿವಮೊಗ್ಗ: ವಿದ್ಯಾರ್ಥಿ ಸಾವಿಗೆ ಪರಿಹಾರದ ಲೆಕ್ಕ ಹಾಕಬಾರದು. ಸಾವಿಗೆ ಪರಿಹಾರ(Compensation) ಅಂತಿಮವಲ್ಲ. ಅಪ್ರಾಪ್ತರಿಂದ ಹತ್ಯೆಯಾದ ಸಂಕೇತ್(Sanketh) ಕುಟುಂಬಕ್ಕೆ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗ ವಿಮಾನ ನಿಲ್ದಾಣ(Airport)ದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿದ್ಯಾರ್ಥಿ ಸಂಕೇತ್ ಹತ್ಯೆ ವಿಚಾರ ತಿಳಿದ ತಕ್ಷಣ ನಾನು ಡಿಸಿ ಮತ್ತು ಎಸ್‌ಪಿಯಿಂದ ಮಾಹಿತಿ ಪಡೆದೆ. ನಂತರ ಸಿಎಂ ಸಿದ್ದರಾಮಯ್ಯ(CM Siddaramaiah) ಅವರನ್ನು ಭೇಟಿ ಮಾಡಿ ಹತ್ಯೆ ಮಾಹಿತಿ ನೀಡಿದ್ದೆ. ಯಾವುದೇ ಕಾರಣಕ್ಕೂ ಇಂತಹ ಘಟನೆಗಳು ಆಗಬಾರದು. ಶಾಲೆಯಿಂದ ಬರುವಾಗ ಕೃತ್ಯ ನಡೆದಿರುವುದು ದುರದೃಷ್ಟಕರ ಎಂದರು.
ಬಾಲಕನ ತಾಯಿ ನನ್ನ ಜತೆ ಮಾತನಾಡಿ ಕುಟುಂಬಕ್ಕೆ ಸಹಾಯ ಮಾಡುವಂತೆ ವಿನಂತಿಸಿಕೊಂಡಿದ್ದಾರೆ. ನಾನು ಅದಕ್ಕೆ ಸ್ಪಂದಿಸಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ಸ್ಥಳೀಯ ಮುಖಂಡರ ಜತೆಗೂಡಿ ಸಂಕೇತ್ ಪಾಲಕರ ಮನೆಗೆ ಭೇಟಿ ನೀಡಿ ಅವರ ಕುಟುಂಬದವರಿಗೆ ಸರ್ಕಾರ(Govt) ಮತ್ತು ವೈಯಕ್ತಿಕವಾಗಿ ಏನು ಸಹಕಾರ ನೀಡಬೇಕೋ ಅದನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.
ಊರುಗಡೂರು, ಸೂಳೇಬೈಲ್ ಶಿವಮೊಗ್ಗದ ಸೂಕ್ಷ್ಮ ಪ್ರದೇಶ(Sensitive area)ಗಳು. ಅಲ್ಲಿ ಶಾಂತಿ ನೆಲೆಸಲು ಎಲ್ಲ ಪಕ್ಷದವರು ಸಹಕಾರ ನೀಡಿದ್ದಾರೆ. ಗಾಂಜಾ ಹಾವಳಿ ಬಗ್ಗೆ ರಾಜಕೀಯವಾಗಿ ಈಗ ಮಾತನಾಡಬಾರದು. ಗಾಂಜಾದ ಬಗ್ಗೆ ಕೇಸ್ ದಾಖಲಿಸುವುದಲ್ಲದೆ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಇಂತಹ ದುರ್ಘಟನೆ ಮರುಕಳಿಸಬಾರದು ಎಂದರು.
ನಿರ್ದಿಷ್ಟ ಮಾಹಿತಿ ಲಭ್ಯವಿಲ್ಲ: ಇರಾನ್‌ನಲ್ಲಿ ನೆಲೆಸಿರುವವರ ಕುರಿತು ನಿರ್ದಿಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲಾಗುವುದು ಎಂದು ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಗೊಂದಲವಿಲ್ಲದೆ ಪರೀಕ್ಷೆ
ರಾಜ್ಯದಲ್ಲಿ ಪರೀಕ್ಷೆಗಳು ಗೊಂದಲವಿಲ್ಲದೆ ನಡೆಯುತ್ತಿದ್ದು, ಶಿಕ್ಷಣ ಇಲಾಖೆಯಿಂದ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಜಿಲ್ಲೆಗೆ ಹಾಗೂ ಇಲಾಖೆಗೆ ಬಜೆಟ್‌ನಲ್ಲಿ ಹೆಚ್ಚುವರಿ ಅನುದಾನ ಘೋಷಣೆ ಮಾಡುವ ನಿರೀಕ್ಷೆ ಇದೆ. ನಾನು ಸಹ ಸಿಎಂಗೆ ಅನೇಕ ವಿಚಾರಗಳ ಬಗ್ಗೆ ಮನವಿ ಮಾಡಿದ್ದೇನೆ. ಕಳೆದ ಬಜೆಟ್‌ನಲ್ಲಿ ಆಹಾರ ಸಂಸ್ಕರಣಾ ಘಟಕದ ಘೋಷಣೆ ಆಗಿತ್ತು. ಆದರೆ ಜಾಗದ ಸಮಸ್ಯೆ ಉಂಟಾಗಿರುವ ಕಾರಣಕ್ಕೆ ಜಾರಿ ಮಾಡಲು ಆಗಿಲ್ಲ. ಅಲ್ಲಿ ಜಾಗ ಒತ್ತುವರಿ ಆಗಿದ್ದು ಸರಿಪಡಿಸಲಾಗುವುದು ಎಂದರು.