ಹಾಜಿ ಷೇಕ್ ಅಹಮದ್ ಚಾರಿಟೆಬಲ್ ಟ್ರಸ್ಟ್‌ನಿಂದ ತೀರ್ಥಹಳ್ಳಿಯಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆದ ವಿದ್ಯಾರ್ಥಿನಿ ಅನಘಾ ಹಾಗೂ ಪಾಲಕರನ್ನು ಗೌರವಿಸಲಾಯಿತು. ಸಂಜೀವ್‌ಕುಮಾರ್, ಯೂಸೂಫ್ ಹೈದರ್ ಇತರರಿದ್ದರು.
ತೀರ್ಥಹಳ್ಳಿ: ದೇಶದ ಭವಿಷ್ಯ ರೂಪಿಸುವಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ ಹೊಣೆಗಾರಿಕೆ ನಿರ್ಣಾಯಕ. ಸತ್ಯ, ನಿಷ್ಠೆಯೊಂದಿಗೆ ಗುರಿ ತಲುಪುವ ಇಚ್ಛಾಶಕ್ತಿ ಬೆಳೆಸಿಕೊಳ್ಳಬೇಕು. ಸಕಾರಾತ್ಮಕ ಬದುಕು ರೂಪಿಸಿಕೊಳ್ಳಬೇಕು ಎಂದು ಕೆನರಾ ಬ್ಯಾಂಕ್ ವಲಯ ವ್ಯವಸ್ಥಾಪಕ ಸಂಜೀವ್‌ಕುಮಾರ್ ಹೇಳಿದರು.
ನ್ಯಾಷನಲ್ ಗೋಲ್ಡ್ ಆ್ಯಂಡ್ ಡೈಮಂಡ್ ಸಂಸ್ಥೆ ಮಾಲೀಕ ಹಾಜಿ ಷೇಕ್ ಅಹಮದ್ ಚಾರಿಟೆಬಲ್ ಟ್ರಸ್ಟ್‌ನಿಂದ ಪಟ್ಟಣದ ವಿದ್ಯಾಧಿರಾಜ ಸಭಾಭವನದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಶೈಕ್ಷಣಿಕ ಕಾಳಜಿಯೊಂದಿಗೆ ಪಾಲಕರನ್ನು ಪ್ರೀತಿಸುವ ಹಾಗೂ ನೆಲದ ಘನತೆ ಕಾಯ್ದುಕೊಳ್ಳುವ ಬದ್ಧತೆ ಅಗತ್ಯ. ಉತ್ತಮ ಸಮಾಜ ನಿರ್ಮಾಣದಲ್ಲಿ ಸಂಸ್ಥೆ ಚಿಂತನೆ ಅನುಕರಣೀಯ ಎಂದು ತಿಳಿಸಿದರು.
ಸಂಸ್ಥೆಯ ಪಾಲುದಾರ ಯೂಸೂಫ್ ಹೈದರ್ ಮಾತನಾಡಿ, ಭಾರತದಲ್ಲಿ ಮಾನವೀಯ ಸಮಾಜ ನಿರ್ಮಾಣ ಅನಿವಾರ್ಯ. ಮನುಷ್ಯನನ್ನು ಅಂಧಕಾರದಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಶಿಕ್ಷಣ ಅಗತ್ಯ. ಸಾಮಾಜಿಕ ಜಾಲತಾಣದ ನಕಾರಾತ್ಮಕ ವಿಚಾರ ಹಾಗೂ ಮಾದಕ ವ್ಯಸನಗಳ ಜಾಲ ಯುವಜನರ ಬದುಕಿಗೆ ಮಾರಕ. ಈ ಬಗ್ಗೆ ಎಚ್ಚರ ವಹಿಸುವ ಅಗತ್ಯವಿದೆ. ಸಂಸ್ಥೆಯಿಂದ ನಡೆದಿರುವ ಸಾಮಾಜಿಕ ಕಾರ್ಯಗಳಿಗೆ ಪಾಲಕರ ಆಶಯ ಮತ್ತು ಪ್ರೇರಣೆ ಕಾರಣ ಎಂದರು.
500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 16.75 ಲಕ್ಷ ರೂ. ಮೊತ್ತದ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದ ತಾಲೂಕಿನ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಂಸ್ಥೆ ಪಾಲುದಾರರಾದ ಹಾಜಿ ಇಬ್ರಾಹಿಂ ಷರೀಫ್, ಡಿ.ಎಸ್.ಅಬ್ದುಲ್ ರಹಮಾನ್, ಸುಲೇಮಾನ್, ಅಬ್ದುಲ್ ಕಲಾಂ, ಕಬೀರ್ ಹಾಗೂ ಮಂಜುನಾಥ ಮಲ್ಯಾ ಇತರರಿದ್ದರು.