ಸೊರಬದಲ್ಲಿ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಜಯಶೀಲ ಗೌಡ ಉದ್ಘಾಟಿಸಿದರು. ರಾಜು, ಎಂ.ಡಿ.ಶೇಖರ್, ರಾಜಪ್ಪ ಮಾಸ್ಟರ್, ಕೆ.ಪುರಂದರ ಇತರರಿದ್ದರು. 
ಶಿವಮೊಗ್ಗ

ಹಿಂದುಳಿದವರ ಕಲ್ಯಾಣಕ್ಕೆ ಶ್ರಮ | Devaraj Urs birthday

ಸೊರಬ: ಉಳುವವನೇ ಹೊಲದೊಡೆಯ ಕಾನೂನು ಜಾರಿಗೆ ತಂದು ರೈತರ ಪಾಲಿಗೆ ಬೆಳಕಾದವರು ದೇವರಾಜ ಅರಸು ಎಂದು  ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಯಶೀಲ ಗೌಡ ಹೇಳಿದರು.
ಪಟ್ಟಣದ ರಂಗ ಮಂದಿರದಲ್ಲಿ ತಾಲೂಕು ಆಡಳಿತ, ಪುರಸಭೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಡ ಕುಟುಂಬದಲ್ಲಿ ಜನಿಸಿದ್ದ ಅವರಿಗೆ ತಳ ಸಮುದಾಯಗಳ, ಶೋಷಿತರ ಕಷ್ಟ ಕಾರ್ಪಣ್ಯಗಳ ಅರಿವು ಇತ್ತು. ಈ ಕಾರಣಕ್ಕೆ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದ್ದರು ಎಂದರು.
ಉಪನ್ಯಾಸ ನೀಡಿದ ಹೊಸನಗರ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ರಾಜು, ದೇವರಾಜ ಅರಸು ನೀಡಿದ ಯೋಜನೆಗಳಿಂದಾಗಿ ನಾವು ಇಂದು ಸ್ವಾಭಿಮಾನದ ಬದುಕು ನಡೆಸುತ್ತಿದ್ದೇವೆ. ಅವರು ಹಿಂದುಳಿದ ವರ್ಗಗಳಿಗೆ ದೊಡ್ಡ ಶಕ್ತಿಯಾಗಿದ್ದರು. ಅಭದ್ರತೆ, ಅನಾಥ ಪ್ರಜ್ಞೆ, ಅರಾಜಕತೆ ತಾಂಡವವಾಡುತ್ತಿದ್ದ ಅವಧಿಯಲ್ಲಿ ನಾಯಕತ್ವ ಹೊಂದಿ ಜನರಲ್ಲಿ ಆತ್ಮವಿಶ್ವಾಸ ತುಂಬಿದರು ಎಂದು ಬಣ್ಣಿಸಿದರು.
ಬಗರ್‌ಹುಕುಂ ಸಮಿತಿ ತಾಲೂಕು ಅಧ್ಯಕ್ಷ ಎಂ.ಡಿ.ಶೇಖರ್ ಮಾತನಾಡಿ, ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಪರಿಸ್ಥಿತಿ ಸುಧಾರಣೆಗೆ ಅರಸು ಅವರ ಕೈಗೊಂಡ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.
ಚಿಂತಕ ರಾಜಪ್ಪ ಮಾಸ್ಟರ್, ತಹಸೀಲ್ದಾರ್ ಕೆ.ಪುರಂದರ ಮಾತನಾಡಿದರು. ತಾಪಂ ಇಒ ಕೆ.ಜಿ.ಶಶಿಧರ, ಬಿಇಒ ಆರ್.ಪುಷ್ಪಾ, ತಾಲೂಕು ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಕೆ.ಅಜ್ಜಪ್ಪ, ಪ್ರಶಾಂತ್ ಮೇಸ್ತ್ರಿ, ಶ್ರೀಧರ್ ಶೇಟ್, ಫಯಾಜ್, ರೇವಣಪ್ಪ, ಉಮೇಶ್ ಎನ್. ಪಾಟೀಲ್, ಸುರೇಶ್, ದಯಾನಂದ ಗೌಡ, ಮೀನಾಕ್ಷಿ ಇತರರಿದ್ದರು.