ಭದ್ರಾವತಿಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಬೀದಿ ನಾಟಕ ಪ್ರದರ್ಶನವನ್ನು ತಹಸೀಲ್ದಾರ್ ಪ್ರದೀಪ್ ದೇವಗಿರಿ ಡೋಲು ಬಾರಿಸಿ ಉದ್ಘಾಟಿಸಿದರು. ಕೆ.ಎನ್.ಹೇಮಂತ್, ಗಿರಿರಾಜ್, ಪ್ರಶಾಂತ್ ಇತರರಿದ್ದರು.
ಭದ್ರಾವತಿ: ಇಲ್ಲಿನ ಜನ್ನಾಪುರದ ಡಾ. ಬಿ.ಆರ್.ಅಂಬೇಡ್ಕರ್ ಜಾನಪದ ಕಲಾ ಸಂಘದ ಕಲಾವಿದರು ನಗರದ ರಂಗಪ್ಪ ವೃತ್ತ, ಮಾಧವಾಚಾರ್ ವೃತ್ತ ಹಾಗೂ ಅಂಡರ್‌ಬ್ರಿಡ್ಜ್ ವೃತ್ತಗಳಲ್ಲಿ ಬೀದಿ ನಾಟಕ ಪ್ರದರ್ಶನದ ಮೂಲಕ ಸಾರ್ವಜನಿಕರಿಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಕುರಿತು ಜಾಗೃತಿ ಮೂಡಿಸಿದರು.
ಬೀದಿ ನಾಟಕದಲ್ಲಿ ಕಲಾವಿದರು ಎಸ್‌ಐಆರ್ ಫಾರ್ಮ್ ಕೊಡುವ, ಭರ್ತಿ ಮಾಡುವ, ಅದನ್ನು ಹಿಂದಿರುಗಿಸುವ ಕ್ರಮ ಹಾಗೂ ಮತದಾನದಿಂದ ಆಗುವ ಪ್ರಯೋಜನವನ್ನು ನಾಟಕದ ಮೂಲಕ ತಿಳಿಸಿಕೊಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ಪ್ರದೀಪ್ ದೇವಗಿರಿ, ತಾಲೂಕು ಆಡಳಿತದಿಂದ ನೀಡಲಾಗಿರುವ ಎಸ್‌ಐಆರ್ ಗಣತಿ ಪ್ರತಿಯನ್ನು ಭರ್ತಿ ಮಾಡುವ ಮೂಲಕ ಪ್ರತಿಯೊಬ್ಬರೂ ಆಯಾ ಭಾಗದ ಬಿಎಲ್‌ಒಗಳಿಗೆ ಹಿಂದಿರುಗಿಸಬೇಕು. ಆ ಮೂಲಕ ಮತದಾನದ ಹಕ್ಕು ಪಡೆದುಕೊಳ್ಳಬೇಕು. ಅರ್ಹ ಮತದಾರರು ಮತದಾನ ಪ್ರಕ್ರಿಯೆಯಿಂದ ವಂಚಿತರಾಗಬಾರದು ಎಂಬುದು ಇದರ ಉದ್ದೇಶ ಎಂದರು.
ನಗರಸಭೆ ಆಯುಕ್ತ ಕೆ.ಎನ್.ಹೇಮಂತ್, ಚುನಾವಣಾ ಶಿರಸ್ತೇದಾರ್ ಗಿರಿರಾಜ್, ತಿಲಕ್, ರೆವಿನ್ಯೂ ಅಧಿಕಾರಿ ಪ್ರಶಾಂತ್, ಅಂಬೇಡ್ಕರ್ ಕಲಾಸಂಘದ ಪ್ರಧಾನ ಕಾರ್ಯದರ್ಶಿ ತಮಟೆ ಜಗದೀಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾನಾಯ್ಕ ಹಿರಿಯ ಕಲಾವಿದರಾದ ರವಿಕುಮಾರ್, ಎನ್.ಕದರಿ ನರಸಿಂಹಯ್ಯ, ಚಿದಾನಂದ್, ಮನೋಹರ, ಸುನೀತಾಬಾಯಿ, ಜಿ.ರವಿಕುಮಾರ್ ಇತರರಿದ್ದರು.