ಶಿಕಾರಿಪುರದಲ್ಲಿ ಬೀದಿ ನಾಯಿಗಳನ್ನು ಸೆರೆಹಿಡಿಯುತ್ತಿರುವುದು.
ಶಿಕಾರಿಪುರ: ಪಟ್ಟಣದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿ ಜನರು ಕೆಲವು ಕಾಲನಿ, ಕೇರಿಗಳಲ್ಲಿ ಒಬ್ಬಂಟಿಯಾಗಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವುದೇ ದುಸ್ತರವಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಇದೀಗ ಶಿಕಾರಿಪುರ ಪುರಸಭೆ ಬೀದಿ ನಾಯಿಗಳ ಸೆರೆಗೆ ಕ್ರಮ ಕೈಗೊಂಡಿದೆ.
ಮೇ 21ರಂದು ಶಿಕಾರಿಪುರದ ಚನ್ನಕೇಶವ ನಗರದ 6ನೇ ಕ್ರಾಸ್ ಹಾಗೂ ವಿನಾಯಕನಗರದ 8ನೇ ಕ್ರಾಸ್‌ನಲ್ಲಿ ಇಬ್ಬರು ಮಕ್ಕಳಿಗೆ ಬೀದಿನಾಯಿ ಕಚ್ಚಿದ ಪ್ರಕರಣ ನಡೆದ ಹಿನ್ನೆಲೆಯಲ್ಲಿ ಪುರಸಭೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಎಲ್ಲೆಂದರಲ್ಲಿ ಬೀದಿನಾಯಿಗಳು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವು. ಇತ್ತೀಚೆಗೆ ಮಕ್ಕಳಿಗೆ ನಾಯಿ ಕಚ್ಚುವುದು ಹೆಚ್ಚಾಗಿ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು. ಬೀದಿನಾಯಿ ಹಾಗೂ ಹುಚ್ಚು ನಾಯಿ ಯಾವುದು ಎಂದು ತಿಳಿಯದ ಕಾರಣ ಜನರಲ್ಲಿ ಸಹಜವಾಗಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಪಟ್ಟಣದಲ್ಲಿ ಬೀದಿ ನಾಯಿಗಳ ನಿಯಂತ್ರಣ ಹಾಗೂ ಇತ್ತೀಚೆಗೆ ನಡೆದ ನಾಯಿ ಕಡಿತದ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಹಾಗೂ ಸರ್ಕಾರದ ಆದೇಶದಂತೆ ಬೀದಿ ನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿ, ಆರೈಕೆ ಮಾಡಿದ ನಂತರ ಅವುಗಳನ್ನು ಯಾವ ಸ್ಥಳದಿಂದ ಹಿಡಿಯಲಾಗಿತ್ತೋ ಅದೇ ಸ್ಥಳಕ್ಕೆ ಮರಳಿ ಬಿಡಲು ನಿಯಮಗಳನ್ನು ರೂಪಿಸಿದೆ.
ಟೆಂಡರ್ ಪ್ರಕ್ರಿಯೆ ಪೂರ್ಣ: ಶಿಕಾರಿಪುರ ಪುರಸಭೆಯಿಂದ 2024-25ರಲ್ಲಿ 711 ಬೀದಿ ನಾಯಿಗಳಿಗೆ ಹಾಗೂ 2025-26ರಲ್ಲಿ 110 ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. 2026-27ರಲ್ಲೂ ಶಸ್ತ್ರಚಿಕಿತ್ಸೆ ಮಾಡಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎನ್ನುತ್ತಾರೆ ಪುರಸಭೆ ವ್ಯವಸ್ಥಾಪಕ ರಾಜಕುಮಾರ್.