ತೀರ್ಥಂಕರರ ವಿಗ್ರಹವನ್ನು ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್, ಪಿಡಿಒ ನಾಗರಾಜ್ ಪರಿಶೀಲಿಸಿದರು.
ರಿಪ್ಪನ್‌ಪೇಟೆ: ಇತ್ತೀಚೆಗೆ ಪಟ್ಟಣದ ಗವಟೂರು ತಾವರೆಕೆರೆ ಹೂಳೆತ್ತುವ ಸಂದರ್ಭದಲ್ಲಿ ದೊರೆತ ಪುರಾತನ ಕಾಲದ ತೀರ್ಥಂಕರರ ವಿಗ್ರಹ ಹಾಗೂ ಪೀಠವನ್ನು ಶಿವಮೊಗ್ಗ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬುಧವಾರ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ಕೆರೆಯಲ್ಲಿ ಸಿಕ್ಕಿರುವುದು ಜೈನ ಪರಂಪರೆಗೆ ಸೇರಿದ ವಿಗ್ರಹ. ಕುರುಹುಗಳಿಗೆ ಇಂಬುನೀಡುವ ಶಾಸನ ಸ್ಥಳದಲ್ಲಿ ಲಭ್ಯವಿಲ್ಲದ ಕಾರಣ ಮೂರ್ತಿ ದೊರೆತ ಸ್ಥಳದ ಮಹತ್ವ, ವಿಗ್ರಹ ರಚನೆಗೆ ಬಳಸಿರುವ ಕಲ್ಲು ಹಾಗೂ ಕೆತ್ತನೆಯ ಶೈಲಿಯನ್ನು ಆಧರಿಸಿ ಅಧ್ಯಯನ ಮಾಡಬೇಕಾಗುತ್ತದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಜೈನ ಪರಂಪರೆಗೆ ಸೇರಿದ ಬಸದಿ, ಶಾಸನ ಹಾಗೂ ಗ್ರಂಥಗಳಲ್ಲಿ ಉಲ್ಲೇಖವಾದ ಮಾಹಿತಿ ಕಲೆಹಾಕಿ ಇಲಾಖೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡುತ್ತೇವೆ. ತಜ್ಞ ಸಂಶೋಧಕರ ಮುಂದಿನ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಐತಿಹಾಸಿಕ ಮಹತ್ವ ಹೊಂದಿರುವ ವಿಗ್ರಹವನ್ನು ಗ್ರಾಮ ಪಂಚಾಯಿತಿ ಅಥವಾ ಆಸಕ್ತಿ ಹೊಂದಿರುವ ಜವಾಬ್ದಾರಿಯುತ ಸಂಸ್ಥೆಗಳು ಇಲಾಖೆ ಅನುಮತಿಯೊಂದಿಗೆ ಸಂರಕ್ಷಿಸಿಡಲು ಅವಕಾಶವಿದೆ. ಇಲ್ಲದಿದ್ದಲ್ಲಿ ವಿಗ್ರಹವನ್ನು ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕೊಂಡೊಯ್ಯಲಾಗುವುದು ಎಂದರು. ಪಿಡಿಒ ನಾಗರಾಜ್ ಉಪಸ್ಥಿತರಿದ್ದರು.