ಸೊರಬದಲ್ಲಿ ಏರ್ಪಡಿಸಿದ್ದ ಮಾದಕ ವಸ್ತು ಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಸುವರ್ಣಾ ವಿಠ್ಠಲ್ ನಾಯ್ಕ ಮಾತನಾಡಿದರು. ಆರ್.ಪ್ರದೀಪ್, ಕೆ.ಜಿ.ಶಶಿಧರ್, ಆರ್.ಪುಷ್ಪಾ ಇತರರಿದ್ದರು. 
ಶಿವಮೊಗ್ಗ

ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರಿ

ಸೋಮಶೇಖರ ಎನ್

ಪ್ರಮುಖ ಮುಖ್ಯಾಂಶಗಳು

  • ಜೀವನದಲ್ಲಿ ಉತ್ತಮ ನಡವಳಿಕೆ ರೂಪಿಸಿಕೊಳ್ಳಿ
  • ನಶೆಮುಕ್ತ ಅಭಿಯಾನಕ್ಕೆ ಚಾಲನೆ
ಸೊರಬ: ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಲು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸುವರ್ಣಾ ವಿಠ್ಠಲ್ ನಾಯ್ಕ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ವಿಕಲಚೇತನ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆ, ಜಿಪಂ, ತಾಪಂ, ಶಿಕ್ಷಣ ಇಲಾಖೆ, ವಕೀಲರ ಸಂಘ ಮತ್ತಿತರ ಸಂಘಗಳಿಂದ ಪಟ್ಟಣದ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ನಶೆಮುಕ್ತ ಭಾರತ, ಮಾದಕ ವಸ್ತು ಮುಕ್ತ ಕರ್ನಾಟಕ ಅಭಿಯಾನದ ತಾಲೂಕು ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹದಿಹರೆಯದ ವಯಸ್ಸಿನಲ್ಲಿ ಮಕ್ಕಳ ಮನಸ್ಸು ಚಂಚಲವಾಗಿರುತ್ತದೆ. ಕುಟುಂಬ ಮತ್ತು ಶಾಲೆಗಳಲ್ಲಿ ಮಕ್ಕಳ ನಡವಳಿಕೆ ಬಗ್ಗೆ ಗಮನವಹಿಸಿ ಕೆಟ್ಟದಾರಿಗೆ ಹೋಗದಂತೆ ತಿಳಿವಳಿಕೆ ನೀಡಬೇಕು ಎಂದರು.
"

ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುವ ಜತೆಗೆ ಸಮಾಜಕ್ಕೆ ಮಾದರಿ ಆಗಬೇಕು. ಗುರುಹಿರಿಯರನ್ನು ಗೌರವಿಸಬೇಕು. ಕುಟುಂಬದ ಸದಸ್ಯರ ಜತೆ ಪ್ರತಿನಿತ್ಯದ ಸಂಗತಿಗಳನ್ನು ಹಂಚಿಕೊಳ್ಳಬೇಕು. ಪಾಲಕರ ಮಾರ್ಗದರ್ಶನದಲ್ಲಿ ನಮ್ಮ ಬದುಕು ಸುಂದರವಾಗಿ ನಿರ್ಮಾಣ ಆಗುತ್ತದೆ. ಸುವರ್ಣಾ ವಿಠ್ಠಲ್ ನಾಯ್ಕಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ

ಯುವಜನರು ಜೀವನದಲ್ಲಿ ದಾರಿ ತಪ್ಪಲು ಸ್ನೇಹಿತರು ಕಾರಣ ಎನ್ನುವ ಬದಲು ತನ್ನನ್ನು ತಾನು ಅರಿತು ನಡೆಯುವುದು ಒಳಿತು. ಪ್ರಸ್ತುತ ದಿನಗಳಲ್ಲಿ ಯುವಜನರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿ ಜೈಲಿನಲ್ಲಿರುವುದು ದುರದೃಷ್ಟಕರ. ಪಾಲಕರು ಮತ್ತು ಗುರುಗಳು ಸಮಾಜದಲ್ಲಿ ತಲೆತಗ್ಗಿಸಿ ನಡೆಯದಂತೆ ಮಕ್ಕಳು ನಡವಳಿಕೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಕೀಲ ಆರ್.ಪ್ರದೀಪ್ ಮಾತನಾಡಿ, ಸದೃಢ ದೇಹ ಹೊಂದಿದ, ಆರೋಗ್ಯವಂತ ವ್ಯಕ್ತಿ ನಿಜವಾದ ಶ್ರೀಮಂತ. ವಿದ್ಯಾರ್ಥಿಗಳು ಮಾದಕ ವ್ಯಸನದಿಂದ ದೂರ ಉಳಿದು ನೈತಿಕ ಶಿಕ್ಷಣ ಪಡೆಯಬೇಕು. ಕಾನೂನು ಅರಿವು ಹೊಂದಿರಬೇಕು ಎಂದು ತಿಳಿಸಿದರು.
ಭಾಷಣ ಮತ್ತು ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತಾಪಂ ಇಒ ಕೆ.ಜಿ.ಶಶಿಧರ್, ಬಿಇಒ ಆರ್.ಪುಷ್ಪಾ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಸುರೇಶಪ್ಪ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಕೆ.ನಾಗರಾಜ್, ಕಾರ್ಯದರ್ಶಿ ವಿನಯ್ ಪಾಟೀಲ್, ವಿಜಯ್‌ಕುಮಾರ್ ದಟ್ಟೇರ್, ರೇವಣಪ್ಪ, ಹರೀಶ್, ಶಬ್ಬೀರ್ ಖಾನ್, ವಿನಯ್ ಇತರರಿದ್ದರು.