ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಅಂಗವಾಗಿ ಆನವಟ್ಟಿ ಪಟ್ಟಣದ ಪದವಿಪೂರ್ವ ಕಾಲೇಜಿನಲ್ಲಿ ಜಾಗೃತಿ ಮೂಡಿಸಲಾಯಿತು. ಟಿ.ಜಗದೀಶ, ಚಂದನ್‌ಕುಮಾರ್, ಡಾ. ಪೂಜಾ, ಎಚ್.ಟಿ.ಕರಿಬಸಪ್ಪ ಇತರರಿದ್ದರು. 
ಶಿವಮೊಗ್ಗ

ಮಾದಕ ವಸ್ತುಗಳಿಂದ ದೂರವಿರಿ | International Day against Drug

ಸೊರಬ: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಆನವಟ್ಟಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಟಿ.ಜಗದೀಶ ಹೇಳಿದರು.
ಆನವಟ್ಟಿ ಪಿಯು ಕಾಲೇಜಿನಲ್ಲಿ ಮಾದಕ ವಸ್ತುಗಳ ದುರ್ಬಳಕೆ ಮತ್ತು ಅಕ್ರಮ ಸಾಗಣೆ ವಿರೋಧಿ ಅಂತಾರಾಷ್ಟ್ರೀಯ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ‘ಜಾಗರೂಕ ವಿದ್ಯಾರ್ಥಿ ಜವಾಬ್ದಾರಿಯುತ ನಾಗರಿಕ’ ವಿಷಯ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಕಲಿಕೆ ಜತೆಗೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಪಠ್ಯದ ಜತೆಗೆ ಕಾಲೇಜಿನಲ್ಲಿ ನಡೆಯುವ ಕ್ರೀಡೆ, ಸಾಂಸ್ಕೃತಿಕ ಚಟವಟಕೆಗಳ ಕಡೆಗೂ ಗಮನ ಹರಿಸಬೇಕು. ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಿ ಸುಂದರ ಜೀವನ ಹಾಳು ಮಾಡಿಕೊಳ್ಳಬಾರದು. ಹಾಗಾಗಿ ಒಳ್ಳೆಯ ನಡವಳಿಕೆಗಳ ಮೂಲಕ ಸಮಾಜ ನಿಮ್ಮನ್ನು ಗುರುತಿಸುವಂತೆ ಆಗಬೇಕು ಎಂದು ಸಲಹೆ ನೀಡಿದರು.
ಆನವಟ್ಟಿ ಠಾಣೆ ಪಿಎಸ್‌ಐ ಚಂದನ್‌ಕುಮಾರ್ ಮಾತನಾಡಿ, ಯುವಜನರಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಬಳಕೆ, ಅಕ್ರಮ ಸಾಗಣೆ, ಸೈಬರ್ ಅಪರಾಧಗಳು, ಆನ್‌ಲೈನ್ ಬೆಟ್ಟಿಂಗ್, ರಸ್ತೆ ಸುರಕ್ಷತೆ, ಮಕ್ಕಳ ಮೇಲಿನ ದೌರ್ಜನ್ಯ, ಪೋಕ್ಸೋ ಕಾಯ್ದೆಯ ಕುರಿತು ಮಾಹಿತಿ ನೀಡಿದರು. ಮಾದಕ ವ್ಯಸನವು ವ್ಯಕ್ತಿಯ ಭವಿಷ್ಯವನ್ನು ಹಾಳುಮಾಡುವ ಜತೆಗೆ ಕುಟುಂಬ ಹಾಗೂ ಸಮಾಜದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.
ಆನವಟ್ಟಿ ಸಮುದಾಯ ಆಸ್ಪತ್ರೆಯ ವೈದ್ಯೆ ಪೂಜಾ ಮಾತನಾಡಿ, ಮಾದಕ ವಸ್ತುಗಳು, ಮದ್ಯಪಾನ ಮತ್ತು ಡೋಪಮೈನ್ ನಡುವಿನ ಸಂಬಂಧವನ್ನು ವಿವರಿಸಿ, ಅವು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಉಂಟುಮಾಡುವ ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ವಿದ್ಯಾರ್ಥಿಗಳಿಂದ ಯೂರಿನ್ ಮಾದರಿ ಸಂಗ್ರಹಿಸಿ, ಮಾದಕ ವಸ್ತುಗಳ ಸೇವನೆಯನ್ನು ಪತ್ತೆಹಚ್ಚುವ ಪರೀಕ್ಷಾ ಕಿಟ್‌ಗಳ ಕಾರ್ಯವಿಧಾನವನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಲಾಯಿತು. 
ಕಾರ್ಯಕ್ರಮದಲ್ಲಿ ಎಪಿಎಸ್‌ಐವಿಎಂ ಅಗಾಸಿ, ಉಪನ್ಯಾಸಕರಾದ ಎಚ್.ಟಿ.ಕರಿಬಸಪ್ಪ, ಅರುಣ್‌ಕುಮಾರ್, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಮುನೀರ್ ಖಾನ್ ಇತರರಿದ್ದರು.