ಶ್ರೀ ಹುಚ್ಚರಾಯಸ್ವಾಮಿ, ಬ್ರಹ್ಮರಥೋತ್ಸವಕ್ಕೆ ತಯಾರಾದ ಶ್ರೀ ಹುಚ್ಚರಾಯಸ್ವಾಮಿ ತೇರು. 
ಶಿವಮೊಗ್ಗ

2ರಂದು ಶ್ರೀ ಹುಚ್ಚರಾಯಸ್ವಾಮಿ ರಥೋತ್ಸವ | Festival

ಶಿಕಾರಿಪುರ: ಶ್ರೀ ಆಂಜನೇಯ ಜಯಂತಿ ಸಂಭ್ರಮದ ಜತೆಗೆ ಶಿಕಾರಿಪುರದ ಕ್ಷೇತ್ರದೇವರು ಶ್ರೀ ಹುಚ್ಚರಾಯಸ್ವಾಮಿ ಬ್ರಹ್ಮರಥೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆ ನಡೆಸಲಾಗಿದೆ. ನಾಡಿನಾದ್ಯಂತ ಇರುವ ಸಾವಿರಾರು ಭಕ್ತರು ಉತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.
ಕ್ರಿ.ಶ 12ನೇ ಶತಮಾನದ ಇತಿಹಾಸವಿರುವ ಶಿಕಾರಿಪುರದ ಶ್ರೀ ಹುಚ್ಚರಾಯಸ್ವಾಮಿಯು ಹುಚ್ಚಪ್ಪ ಎಂಬುವನಿಗೆ ಸ್ವಪ್ನದಲ್ಲಿ ಬಂದು ತನ್ನನ್ನು ಪ್ರತಿಷ್ಠಾಪಿಸುವಂತೆ ಸೂಚಿಸುತ್ತಾನೆ. ಅದರಂತೆ ಕೆರೆಯಲ್ಲಿ ಮಗುಚಿಬಿದ್ದಿದ್ದ ಆಂಜನೇಯನ ಮೂರ್ತಿಯನ್ನು ತಂದು ಸ್ಥಾಪಿಸಲಾಗುತ್ತದೆ. ಕಾಲಾಂತರದಲ್ಲಿ ಮೂರ್ತಿಯು ಭಿನ್ನವಾಗುತ್ತದೆ. ನಂತರ ವಿದ್ವಜ್ಜನರ ಸಲಹೆಯಂತೆ ಭಿನ್ನವಾದ ಮೂರ್ತಿಯನ್ನು ಪೂಜಿಸಬಾರದೆಂದು ನಿರ್ಧರಿಸಲಾಗುತ್ತದೆ.
ನಂತರ ಬೆಳಗಾವಿಯಿಂದ ಮೂಲಮೂರ್ತಿಯನ್ನು ಹೋಲುವಂತೆ ಶ್ರೀ ಹುಚ್ಚರಾಯಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ವಿಗ್ರಹದ ನಾಸಿಕ ಭಿನ್ನವಾಗಿದ್ದರಿಂದ ಶ್ರೀ ವ್ಯಾಸರಾಯರು ತಮ್ಮಲ್ಲಿದ್ದ ಸಾಲಿಗ್ರಾಮವನ್ನು ಮೂಗಿನ ಜಾಗದಲ್ಲಿ ಇಟ್ಟಾಗ ಸರಿಯಾಗಿ ಹೊಂದಿಕೆಯಾಗಿ ಪ್ರತಿಷ್ಠಾಪಿಸುತ್ತಾರೆ. ಹುಚ್ಚಪ್ಪನಿಂದ ‘ಹುಚ್ಚನೆಂದೂ’, ವ್ಯಾಸರಾಯರಿಂದ ‘ರಾಯ’ನೆಂದೂ, ಆಂಜನೇಯ ಸ್ವಾಮಿ ಎಂಬ ತನ್ನ ಹೆಸರಿನಿಂದ ‘ಸ್ವಾಮಿ’ ಎಂದು ಕರೆಯಲ್ಪಟ್ಟು ಶ್ರೀ ಹುಚ್ಚರಾಯಸ್ವಾಮಿ ಎಂದು ಪ್ರಸಿದ್ಧನಾಗಿದ್ದಾನೆ.
ಮರಾಠ ಸರದಾರ ದೋಂಡಿಯಾ ವಾಘನು ತಾನು ಶತ್ರುಗಳಿಂದ ಸಂಕಷ್ಟದಲ್ಲಿದ್ದಾಗ ತನ್ನನ್ನು ರಕ್ಷಿಸುವಂತೆ ಸ್ವಾಮಿಯನ್ನು ಪ್ರಾರ್ಥನೆ ಮಾಡುತ್ತಾನೆ. ಅದರಂತೆ ಸ್ವಾಮಿ ಅವನನ್ನು ರಕ್ಷಣೆ ಮಾಡಿದಾಗ, ಅವನು ಸ್ವಾಮಿಗೆ ತನ್ನ ಖಡ್ಗವನ್ನು ಅರ್ಪಿಸುತ್ತಾನೆ. ಆ ಖಡ್ಗವು ದೇವಸ್ಥಾನದಲ್ಲಿದೆ.

ಮೇಷ ಲಗ್ನದಲ್ಲಿ ರಥಾರೋಹಣ

ಬ್ರಹ್ಮರಥೋತ್ಸವದ ಅಂಗವಾಗಿ ದೇಗುಲದಲ್ಲಿ ಈಗಾಗಲೇ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿವೆ. ಏ.2ರಂದು ಚೈತ್ರ ಶುದ್ಧ ಪೂರ್ಣಿಮೆಯಂದು ಶ್ರೀ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ ಜರುಗಲಿದೆ. ಶ್ರೀ ಗಣಪತಿ ಪೂಜೆ, ಅಷ್ಟದಿಕ್ಪಾಲಕರ ಮಹಾಬಲಿ ಹಾಗೂ ವೇದ ಮಂತ್ರ ಘೋಷದೊಂದಿಗೆ ಬೆಳಗ್ಗೆ 7-05ರಿಂದ 7-15ರವರೆಗೆ ಮೇಷ ಲಗ್ನದಲ್ಲಿ ನಡೆಯಲಿದೆ. ಸಾಂಪ್ರದಾಯಿಕ ಪೂಜೆ, ಫಲಸಮರ್ಪಣೆ, ಮಹಾಮಂಗಳಾರತಿ ಸಕಲ ವಾದ್ಯಗೋಷ್ಠಿಗಳ ಸೇವೆಯೊಂದಿಗೆ ನೆರವೇರುವುದು. ಏ.4ರವರೆಗೆ ಧಾರ್ಮಿಕ ವಿಧಿಗಳು ನಡೆಯಲಿವೆ. ರಥೋತ್ಸವದ ದಿನ ಸಚಿವರಾದ ಮಧು ಬಂಗಾರಪ್ಪ, ಬಿ. ರಾಮಲಿಂಗಾ ರೆಡ್ಡಿ, ಶಾಸಕರಾದ ಬಿ.ವೈ.ವಿಜಯೇಂದ್ರ.ಬಿ.ಕೆ.ಸಂಗಮೇಶ್ವರ,  ಗೋಪಾಲಕೃಷ್ಣ ಬೇಳೂರು, ಸಂಸದ ಬಿ.ವೈ.ರಾಘವೇಂದ್ರ ಮತ್ತಿತರರು ಭಾಗವಹಿಸಿ ದರ್ಶನ ಪಡೆಯುವರು.