ಶಿವಮೊಗ್ಗದ ಗೋವರ್ಧನ ಟ್ರಸ್ಟ್‌ನ ಅಂಬುಲೆನ್ಸ್ ಸಮರ್ಪಣೆ, ಸಾವಯವ ಕೃಷಿಕರ ಟ್ರಸ್ಟ್ ಉದ್ಘಾಟನೆಯನ್ನು ಸುರೇಂದ್ರ ಕುಮಾರ್ ನೆರವೇರಿಸಿದರು. ಕೆ.ಎಸ್.ಈಶ್ವರಪ್ಪ, ಕೆ.ಇ.ಕಾಂತೇಶ್, ಉಮೇಶ್ ಆರಾಧ್ಯ, ಕೆ.ಸಿ.ನಟರಾಜ ಭಾಗವತ್, ಉಮಾಪತಿ ಇದ್ದರು. 
ಶಿವಮೊಗ್ಗ

ಗೋಪೂಜೆ, ಗೋದಾನಕ್ಕೆ ವಿಶೇಷ ಸ್ಥಾನ I gopooje special

ಪ್ರಮುಖ ಮುಖ್ಯಾಂಶಗಳು

  • ಎಸ್‌ಡಿಎಂ ಎಜುಕೇಷನ್ ಟ್ರಸ್ಟ್‌ನ ಉಪಾಧ್ಯಕ್ಷ ಸುರೇಂದ್ರಕುಮಾರ್ ಹೇಳಿಕೆ
  • ಗೋವುಗಳ ಸೇವೆಗೆ ವಿಶೇಷ ಆಂಬುಲೆನ್ಸ್ ಸಮರ್ಪಣೆ
ಶಿವಮೊಗ್ಗ: ಸನಾತನ ಧರ್ಮ, ನಮ್ಮ ಸಂಸ್ಕೃತಿಯಲ್ಲಿ ಗೋಮಾತೆ, ಗೋಪೂಜೆ (gopooje) ಗೋದಾನಕ್ಕೆ ವಿಶೇಷ ಸ್ಥಾನವಿದೆ.ಇಂತಹ ಗೋವಿನ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಧರ್ಮಸ್ಥಳ (dharmastala)ಗ್ರಾಮೀಣಾಭಿವೃದ್ಧಿ ಯೋಜನೆಯ ಟ್ರಸ್ಟಿ, ಎಸ್‌ಡಿಎಂ (sdm) ಎಜುಕೇಷನ್ ಟ್ರಸ್ಟ್‌ನ ಉಪಾಧ್ಯಕ್ಷ ಸುರೇಂದ್ರಕುಮಾರ್ ಹೇಳಿದರು.
ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಗೋವರ್ಧನ ಟ್ರಸ್ಟ್‌ನಿಂದ ಗೋವುಗಳ ಸೇವೆಗೆ ವಿಶೇಷ ಆಂಬುಲೆನ್ಸ್ ಸಮರ್ಪಣೆ, ಗೋಶಾಲೆ, ಸಾವಯವ ಕೃಷಿಕರ ಟ್ರಸ್ಟ್ ಉದ್ಘಾಟನೆ, ಗೋಸೇವಾ ಹಿತೈಷಿಗಳಿಗೆ ಗೌರವಾರ್ಪಣೆ, 11 ಎಕರೆಯಲ್ಲಿ ಗೋವಿಗಾಗಿ ಮೇವು ಬಿತ್ತನೆ ಕಾರ್ಯದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕೇವಲ 4 ತಿಂಗಳಲ್ಲಿ ಶಿವಮೊಗ್ಗದ ಗೋವರ್ಧನ ಟ್ರಸ್ಟ್ ಅತ್ಯುತ್ತಮ ಕೆಲಸ ಮಾಡಿದೆ. ಶಿವಮೊಗ್ಗದ ಮೂರು ಗೋಶಾಲೆಗಳಿಗೆ ಮೂಲ ಸೌಲಭ್ಯ, ಮೇವು ವಿತರಣೆ, ಆಂಬುಲೆನ್ಸ್ ಸೇವೆ ಮಾತ್ರವಲ್ಲದೇ 5 ಸಾವಿರಕ್ಕೂ ಅಧಿಕ ಗೋಕಾರ್ಯಕರ್ತರನ್ನು ಸಂಘಟಿಸಿರುವುದು ಸಣ್ಣ ವಿಷಯವಲ್ಲ ಎಂದರು.
ಗೋಕಾರ್ಯಕರ್ತರ ಪ್ರತಿ ಮನೆಯಿಂದ ಪ್ರತಿ ತಿಂಗಳು ಗೋವಿನ ಪಾಲನೆಗಾಗಿ ಹಣ ಸಂಗ್ರಹಿಸಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗುತ್ತಿದೆ. ಇದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪನಂತವರಿಗೆ ಮಾತ್ರ ಸಾಧ್ಯ. ಈಶ್ವರಪ್ಪ ಹಾಗೂ ಅವರ ಪುತ್ರ ಕೆ.ಇ.ಕಾಂತೇಶ್ ನಿರಂತರವಾಗಿ ಹಿಂದೂ ಧರ್ಮದ ರಕ್ಷಣೆಗೆ ಟೊಂಕಕಟ್ಟಿ ನಿಂತಿದ್ದಾರೆ. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆದಾಗ ಈಶ್ವರಪ್ಪ ಷಡ್ಯಂತ್ರದ ವಿರುದ್ಧ ಹೋರಾಡಿದ್ದರು ಎಂದು ಸುರೇಂದ್ರ ಕುಮಾರ್ ಸ್ಮರಿಸಿದರು.
ಕೆ.ಎಸ್.ಈಶ್ವರಪ್ಪನವರ ನೇತೃತ್ವದಲ್ಲಿ ಗೋವರ್ಧನ ಟ್ರಸ್ಟ್ ಮಾಡುತ್ತಿರುವ ಕಾರ್ಯಕ್ಕೆ ಧರ್ಮಸ್ಥಳ ದೇವಾಲಯದ ವತಿಯಿಂದ ಐದು ಲಕ್ಷ ರೂ. ನೆರವನ್ನು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಸೂಚನೆಯಂತೆ ನೀಡಲಾಗುತ್ತಿದೆ ಎಂದು ಘೋಷಿಸಿದರು.
ಮಾಜಿ ಡಿಸಿಎಂ, ಗೋವರ್ಧನ ಟ್ರಸ್ಟ್ ಮಹಾಪೋಷಕ ಕೆ.ಎಸ್.ಈಶ್ವರಪ್ಪ, ಟ್ರಸ್ಟ್‌ನ ಅಧ್ಯಕ್ಷ ಕೆ.ಇ.ಕಾಂತೇಶ್, ಪ್ರಧಾನ ಕಾರ್ಯದರ್ಶಿ ಉಮೇಶ್ ಆರಾಧ್ಯ, ಕಾರ್ಯದರ್ಶಿ ಎಂ.ನಾಗೇಶ್, ಕಾರ್ಯದರ್ಶಿ ರಮೇಶ್‌ಬಾಬು, ಸುರಬಿ ಗೋಶಾಲೆ ಪ್ರಮುಖರಾದ ಕೆ.ಸಿ.ನಟರಾಜ ಭಾಗವತ್ ಮುಂತಾದವರು ಉಪಸ್ಥಿತರಿದ್ದರು.

ಧರ್ಮ ವಿರೋಧಿಗಳು ಉದ್ಧಾರವಾಗಲ್ಲ

ಗೋರಕ್ಷಣೆ ಪುಣ್ಯದ ಕಾರ್ಯ. ಧರ್ಮ ಮತ್ತು ಗೋವಿಗೆ ಅನ್ಯಾಯ ಮಾಡಿದವರು ಸಂಕಷ್ಟ ಅನುಭವಿಸುತ್ತಾರೆ. ಧರ್ಮಸ್ಥಳದ ಬಗ್ಗೆ ಷಡ್ಯಂತ್ರ ಮಾಡಿದವರು ಜೈಲು ಪಾಲಾಗಿದ್ದಾರೆ. ಧರ್ಮವಿರೋಧಿ ಕೃತ್ಯ ಮಾಡಿದವರು ಯಾರೂ ಉದ್ಧಾರವಾಗುವುದಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಪ್ರತಿರೂಪವಾಗಿ ಸುರೇಂದ್ರಕುಮಾರ್ ನಮ್ಮ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ನಮ್ಮೆಲ್ಲರಿಗೂ ಸ್ಪೂರ್ತಿ ತುಂಬಿದೆ. ಧರ್ಮಸ್ಥಳ ಕ್ಷೇತ್ರದಿಂದ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಲಕ್ಷಾಂತರ ಮಹಿಳೆಯರಿಗೆ ಸುಮಾರು 21 ಸಾವಿರ ಕೋಟಿ ರೂ. ಸಾಲ ನೀಡಿರುವುದು ಸಣ್ಣ ಮಾತಲ್ಲ. ಇದರಿಂದ ಮತಾಂತರ ಕಡಿಮೆಯಾಗಿದೆ. ಧರ್ಮ ಜಾಗೃತಿ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.
"

ಕೇವಲ ನಾಲ್ಕು ತಿಂಗಳಲ್ಲಿ ಗೋವರ್ಧನ ಟ್ರಸ್ಟ್ ಬೃಹದಾಕಾರವಾಗಿ ಬೆಳೆದಿದೆ. ಶಿವಮೊಗ್ಗದಲ್ಲಿ ಮೂರು ಗೋಶಾಲೆಗಳಿಗೆ ಮೇವು ನೀಡುವ ಹಾಗೂ ಮೂಲ ಸೌಲಭ್ಯ ಕಲಿಸಲು ಮುಂದಾಗಿದೆ. ಅಪಘಾತದಲ್ಲಿ ಗಾಯಗೊಂಡ ಗೋವುಗಳ ರಕ್ಷಣೆಗೆ 25 ಲಕ್ಷ ರೂ. ವೆಚ್ಚದ ಆಂಬುಲೆನ್ಸ್ ಸೇವೆಗೆ ಇಂದ ಚಾಲನೆ ನೀಡಲಾಗಿದೆ.