ಶಿವಮೊಗ್ಗ ಪಾರ್ಕ್ ಬಡಾವಣೆಯ ಕನ್ಸರ್‌ವೆನ್ಸಿಯನ್ನು ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಪರಿಶೀಲಿಸಿದರು. ಸಿಪಿಐ ಟಿ.ವಿ.ದೇವರಾಜ್, ಸ್ವಪ್ನ, ಅಕ್ಬರ್ ಮುಲ್ಲಾ, ಶಿವಣ್ಣನವರ್ ಇದ್ದರು.
- ಪಾರ್ಕ್ ಬಡಾವಣೆ ಮುಖ್ಯರಸ್ತೆ, ನೆಹರು ರಸ್ತೆಯಲ್ಲಿ ಪರಿಶೀಲನೆ
- ಪಾರ್ಕಿಂಗ್‌ಗೆ ಬಳಸಿಕೊಳ್ಳುವಂತೆ ಸಾರ್ವಜನಿಕರು, ವರ್ತಕರು
- ಸಂಚಾರ ಪೊಲೀಸರು, ಪಾಲಿಕೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ
ಶಿವಮೊಗ್ಗ: ಶಿವಮೊಗ್ಗ ಸ್ಮಾರ್ಟ್‌ಸಿಟಿ(smart city)ಯಿಂದ ವಾಹನಗಳ ನಿಲುಗಡೆ(Parking)ಗೆ ಅಭಿವೃದ್ಧಿಪಡಿಸಿದ 21 ಕನ್ಸರ್‌ವೆನ್ಸಿಗಳನ್ನು ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಗುರುವಾರ ಪರಿಶೀಲಿಸಿದರು.
ಪಾರ್ಕ್ ಬಡಾವಣೆ ಮುಖ್ಯರಸ್ತೆ, ನೆಹರು ರಸ್ತೆಯ ಕನ್ಸರ್‌ವೆನ್ಸಿ(Conservancy)ಗಳಿಗೆ ತೆರಳಿದ ಅವರು, ಸಾರ್ವಜನಿಕರು, ವರ್ತಕರು, ವಿವಿಧ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರನ್ನು ಉದ್ದೇಶಿಸಿ ಕನ್ಸರ್‌ವೆನ್ಸಿ ರಸ್ತೆಗಳನ್ನು ವಾಹನಗಳ ಪಾರ್ಕಿಂಗ್‌ಗೆ ಬಳಸಿಕೊಳ್ಳುವಂತೆ ಸೂಚಿಸಿದರು.
ಸಾರ್ವಜನಿಕರು, ಸುತ್ತಮುತ್ತಲಿನ ಖಾಸಗಿ ಆಸ್ಪತ್ರೆಗಳಿಗೆ ಬರುವ ರೋಗಿಗಳು ಮತ್ತು ಅವರ ಸಂಬಂಧಿಕರು ತಮ್ಮ ವಾಹನಗಳನ್ನು ನಿಗದಿಪಡಿಸುವ ಕನ್ಸರ್‌ವೆನ್ಸಿಯ ನಿಲುಗಡೆ ಸ್ಥಳದಲ್ಲಿಯೇ ನಿಲುಗಡೆ ಮಾಡಬೇಕು. ಇದರಿಂದ ಪಾರ್ಕಿಂಗ್(Parking) ಸಮಸ್ಯೆ ನಿವಾರಣೆಗೆ ಅನುಕೂಲವಾಗಲಿದೆ. ಸಾರ್ವಜನಿಕರು ಇದನ್ನು ಬಳಸಿಕೊಂಡು ನಗರದ ಪ್ರಮುಖ ರಸ್ತೆಗಳಾದ ಪಾರ್ಕ್ ಬಡಾವಣೆ, ದುರ್ಗಿಗುಡಿ, ರಾಘವೇಂಧ್ರ ಸ್ವಾಮಿ ಮಠ ರಸ್ತೆಯ ಭಾಗದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸೂಚಿಸಿದರು.
ಸಂಚಾರ ಠಾಣೆ ಇನ್‌ಸ್ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ನಗರದ ಪಶ್ಚಿಮ ಸಂಚಾರ ಠಾಣೆ ಪೊಲೀಸರು ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಫುಟ್‌ಫಾತ್ ಒತ್ತುವರಿ ತೆರವು ಕಾರ್ಯಾಚರಣೆ, ವಾಹನಗಳನ್ನು ನಿಗದಿತ ಸ್ಥಳದಲ್ಲಿ ನಿಲುಗಡೆ ಮಾಡುವಂತೆ ಮತ್ತು ಕನ್ಸರ್‌ವೆನ್ಸಿ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಎಎಸ್‌ಪಿ ಎ.ಜಿ.ಕಾರಿಯಪ್ಪ, ಸಂಚಾರ ವೃತ್ತ ಸಿಪಿಐ ಟಿ.ವಿ.ದೇವರಾಜ್, ಸಂಚಾರ ಠಾಣೆ ಪಿಎಸ್‌ಐಗಳಾದ ಸ್ವಪ್ನ, ಬಿ.ಎಚ್.ಭಾರತಿ, ಅಕ್ಬರ್ ಮುಲ್ಲಾ, ಶಿವಣ್ಣನವರ್ ಮತ್ತು ಶಿವಮೊಗ್ಗ ನಗರ ಪಾಲಿಕೆ ಸಿಬ್ಬಂದಿ ಉಪಸ್ಥಿತರಿದ್ದರು.