ಸಾಗರದ ಗಾಂಧಿಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಪರಿಶಿಷ್ಟ ವಿಭಾಗ ಆಯೋಜಿಸಿದ್ದ ಡಾ. ಅಂಬೇಡ್ಕರ್ ಜಯಂತಿಯಲ್ಲಿ ಬಿ.ಆರ್.ಜಯಂತ್, ಎನ್.ಲಲಿತಮ್ಮ, ಎಲ್.ಚಂದ್ರಪ್ಪ, ಡಿ.ದಿನೇಶ್ ಇತರರಿದ್ದರು.
ಸಾಗರ: ಧರ್ಮಗಳ ನಡುವೆ ಒಡಕು ಬಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಆರ್‌ಎಸ್‌ಎಸ್‌ನವರು ಪ್ರಯತ್ನಿಸುತ್ತಿದ್ದು, ಅವರಿಗೆ ಡಾ. ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯ ಅನುಷ್ಠಾನಗೊಳ್ಳಲು ಇಷ್ಟವಿಲ್ಲ ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್ ಹೇಳಿದರು.
ಸಾಗರದ ಗಾಂಧಿಮಂದಿರದಲ್ಲಿ ಮಂಗಳವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ಪರಿಶಿಷ್ಟ ವಿಭಾಗದಿಂದ ಏರ್ಪಡಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದ ಅವರು, ಜಾತಿ, ಧರ್ಮ, ದೇವರು, ದೇವಸ್ಥಾನ ಸೇರಿ ಧಾರ್ಮಿಕ ಭಾವನೆಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದೆ. ಇಂತಹ ಹೊತ್ತಿನಲ್ಲಿ ಅಂಬೇಡ್ಕರ್ ನೀಡಿದ ಸಂವಿಧಾನವನ್ನೂ ಸಹ ಕೆಲವರು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದರು.
ನಗರಸಭೆ ಮಾಜಿ ಅಧ್ಯಕ್ಷೆ ಎನ್.ಲಲಿತಮ್ಮ ಮಾತನಾಡಿ, ಮಹಿಳಾ ಸಮಾನತೆ ಎತ್ತಿ ಹಿಡಿಯುವ ಮೂಲಕ ಸ್ವಾಭಿಮಾನದ ಬದುಕು ನಡೆಸಲು ಸಂವಿಧಾನದ ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಅಧ್ಯಕ್ಷ ಎಲ್.ಚಂದ್ರಪ್ಪ ಮಾತನಾಡಿ, ಇಡೀ ಜಗತ್ತು ಅಂಬೇಡ್ಕರ್ ಅವರನ್ನು ಗೌರವಿಸುತ್ತದೆ. ಅವರು ರಚಿಸಿದ ಸಂವಿಧಾನ ವಿಶ್ವಮಾನ್ಯವಾಗಿದೆ. ಜಗತ್ತಿನಲ್ಲಿ ಭಾರತ ಅತ್ಯಂತ ಶ್ರೇಷ್ಠ ದೇಶವೆಂದು ಗೌರವಿಸಲ್ಪಡಲು ಅಂಬೇಡ್ಕರ್ ರಚಿಸಿದ ಸಂವಿಧಾನ ಕಾರಣ ಎಂದರು.
ಕಲಸೆ ಚಂದ್ರಪ್ಪ, ಐ.ಎನ್.ಸುರೇಶಬಾಬು, ಡಿ.ದಿನೇಶ್, ವಿಲ್ಸನ್ ಗೋನ್ಸಾಲ್ವಿಸ್, ರವಿಕುಮಾರ್, ಸೋಮಶೇಖರ, ಗಿರೀಶ್ ಕೋವಿ, ಗಣಪತಿ ಮಂಡಗಳಲೆ, ಸರಸ್ವತಿ ನಾಗರಾಜ್, ಕನ್ನಪ್ಪ ಇತರರಿದ್ದರು.