ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶತಾವಧಾನಿ ಡಾ. ಆರ್.ಗಣೇಶ್ ಅವರಿಗೆ ಹಸೂಡಿ ವೆಂಕಟಶಾಸ್ತ್ರಿ ದತ್ತಿನಿಧಿ ಪುರಸ್ಕಾರ ಪ್ರದಾನ ಮಾಡಲಾಯಿತು. ಕೆ.ಸಿ.ನಟರಾಜ ಭಾಗವತ್, ಪ್ರೊ. ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ, ಎಚ್.ಡಿ.ಉದಯಶಂಕರ ಶಾಸ್ತ್ರಿ, ವಾಸುದೇವ ಜೋಯಿಸ್ ಉಪಸ್ಥಿತರಿದ್ದರು.
- ಸತ್ಕಾರ್ಯಗಳಿಂದ ಪುಣ್ಯ ಪ್ರಾಪ್ತಿ
- ಶತಾವಧಾನಿ ಡಾ. ಆರ್.ಗಣೇಶ್ ಅಭಿಮತ
- ಹಸೂಡಿ ವೆಂಕಟಶಾಸ್ತ್ರಿ ದತ್ತಿನಿಧಿ ಪ್ರಶಸ್ತಿ ಪ್ರದಾನ
ಶಿವಮೊಗ್ಗ: ಕಾಲಾಂತರದಲ್ಲಿ ವೀರ, ಶೂರರು, ಜ್ಞಾನಿಗಳನ್ನು ಜನರು ಮರೆಯಬಹುದು. ಆದರೆ ಸಮಾಜಕ್ಕೆ (society) ಉತ್ತಮ ಕೊಡುಗೆ ನೀಡಿದ ನಿಸ್ವಾರ್ಥಿಗಳು ಚಿರಸ್ಥಾಯಿ ಆಗಿರುತ್ತಾರೆ. ಇಂತಹ ನಿತ್ಯ ಸ್ಮರಣೀಯರ ಸಾಲಿನಲ್ಲಿ ಹಸೂಡಿ ವೆಂಕಟಶಾಸ್ತ್ರಿಗಳೂ ಇದ್ದಾರೆ ಎಂದು ಪದ್ಮಭೂಷಣ (padmabhushana) ಪುರಸ್ಕೃತ ಶತಾವಧಾನಿ ಡಾ. ಆರ್.ಗಣೇಶ್ (ganesh) ಅಭಿಪ್ರಾಯಪಟ್ಟರು.
ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಹಾಗೂ ಹಸೂಡಿ ವೆಂಕಟಶಾಸ್ತ್ರಿ ಕುಟುಂಬದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದತ್ತಿನಿಧಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು, ದಶಕಗಳ ಬಳಿಕವೂ ಹಸೂಡಿ ವೆಂಕಟಶಾಸ್ತ್ರಿ ಅವರನ್ನು ನೆನಪಿನಲ್ಲಿಟ್ಟುಕೊಂಡು ಇಷ್ಟೊಂದು ಮಂದಿ ಭಾಗವಹಿಸಿರುವುದು ಅವರ ಸತ್ಕಾರ್ಯಕ್ಕೆ ನಿದರ್ಶನ ಎಂದರು.
ಅಪಾರ ಜ್ಞಾನವಂತರು ಕಾಲಕ್ರಮೇಣ ತಾವು ಕಲಿತದ್ದನ್ನು ಮರೆಯುತ್ತಾರೆ. ಆಳವಾಗಿ ಬೇರೂರಿ ನಿಂತ ಮರವೂ ಒಂದು ದಿನ ನೆಲಕ್ಕುರುಳಬಹುದು. ತುಂಬಿ ಹರಿಯುವ ನದಿಯೂ ಒಂದು ಸಂದರ್ಭದಲ್ಲಿ ಬತ್ತಿ ಹೋಗಬಹುದು. ಸತ್ಕಾರ್ಯ, ದಾನ, ಸಮಾಜದ ಸೇವೆ ಎಂದಿಗೂ ಜನಮಾನಸದಿಂದ ದೂರವಾಗುವುದಿಲ್ಲ ಎಂದು ಹೇಳಿದರು.
ನಮ್ಮ ಸಂಸ್ಕೃತಿಯಲ್ಲಿ ಪುಣ್ಯ ಎಂಬುದಕ್ಕೆ ತುಂಬ ಮಹತ್ವವಿದೆ. ಧಾರ್ಮಿಕವಾಗಿಯೂ ಇದು ಪ್ರಮುಖವಾದುದು. ಸತ್ಕಾರ್ಯ ಹಾಗೂ ದಾನಗಳಿಂದ ಪುಣ್ಯಪ್ರಾಪ್ತಿಯಾಗುತ್ತದೆ ಎಂಬುದು ಅನಾದಿಕಾಲದಿಂದಲೂ ಇರುವ ನಂಬಿಕೆ. ನಮ್ಮ ಸಂಸ್ಕೃತಿಯಲ್ಲಿ ಗುರುಪೂರ್ಣಿಮೆಗೆ ಬಹಳಷ್ಟು ಪ್ರಾಶಸ್ತ್ಯ. ವೇದವ್ಯಾಸರು ರಚಿಸಿದ ಗ್ರಂಥಗಳು ನಮ್ಮ ಸಂಸ್ಕೃತಿಯ ಬೇರುಗಳಾಗಿವೆ. ಅವರು ತಾವು ಕಲಿತಿದ್ದ ನಾಲ್ಕು ವೇದಗಳನ್ನು ನಾಲ್ವರು ಶಿಷ್ಯರಿಗೆ ಕಲಿಸುವ ಮೂಲಕ ವೇದ ಪರಂಪರೆಯ ಬೆಳವಣಿಗೆಗೆ ಕಾರಣಕರ್ತರಾದರು ಅಂತಹ ವೇದವ್ಯಾಸರ ಜನ್ಮದಿನವೇ ಗುರುಪೂರ್ಣಿಮೆಯಾಗಿ ಆಚರಣೆಯಲ್ಲಿದೆ ಎಂದರು.
ವೇದದ ನಿರ್ಣಯ ಎನಿಸಿದ ವೇದಾಂತದ ನಿರ್ಮಾಪಕರು ವೇದವ್ಯಾಸರು. ಐತಿಹಾಸಿಕ ಗ್ರಂಥವಾದ ಮಹಾಭಾರತ ವ್ಯಾಸರ ರಚನೆಯಾಗಿದೆ. 18 ಪುರಾಣಗಳಿಗೂ ವೇದವ್ಯಾಸರೇ ಮೂಲ ಎಂಬುದು ಪೂರ್ವಿಕರ ನಂಬಿಕೆ. ಅಂತಹ ವೇದವ್ಯಾಸರ ಜಯಂತಿಯಂದೇ ಹಸೂಡಿ ವೆಂಕಟಶಾಸ್ತ್ರಿಗಳ ಹೆಸರಿನಲ್ಲಿ ನನಗೆ ಪುರಸ್ಕಾರ ನೀಡಿ ಗೌರವಿಸಿರುವುದು ನನ್ನ ಪೂರ್ವಜನ್ಮದ ಸುಕೃತ ಎಂದರು.
ಶೃಂಗೇರಿ ಶಾರದಾ ಪೀಠದ ಆಸ್ಥಾನ ಪಂಚಾಂಗಕರ್ತ ವೇ.ಬ್ರ.ಶ್ರೀ ತಟ್ಟುವಟ್ಟು ವಾಸುದೇವ ಜೋಯಿಸರು ಹಸೂಡಿ ವೆಂಕಟಶಾಸ್ತ್ರಿ ದತ್ತಿನಿಧಿಯನ್ನು ಉದ್ಘಾಟಿಸಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ, ಎಚ್.ಆರ್.ಸುಬ್ರಹ್ಮಣ್ಯ ಶಾಸ್ತ್ರಿ ಉಪಸ್ಥಿತರಿದ್ದರು.
ನಿಸ್ವಾರ್ಥ ದಾನಕ್ಕಿದೆ ಮಹತ್ವ
ಒಳ್ಳೆಯ ಉದ್ದೇಶದಿಂದ ಮಾಡುವ ದಾನಕ್ಕೆ ಸಾಕಷ್ಟು ಬೆಲೆಯಿದೆ. ಸೂರ್ಯ, ಚಂದ್ರ, ಭೂಮಿ, ನಮ್ಮ ಸುತ್ತಲಿನ ಪರಿಸರ ಎಲ್ಲವೂ ನಿಸ್ವಾರ್ಥವಾಗಿ ಕಾರ್ಯನಿರ್ವಹಿಸಿ ಎಲ್ಲ ಜೀವಿಗಳಿಗೆ ಒಳಿತು ಬಯಸುತ್ತವೆ. ಅದೇ ರೀತಿ ನಮ್ಮ ದೇಹದಲ್ಲಿ ಎಲ್ಲ ಅಂಗಾಂಗಗಳು ಪೂರಕವಾಗಿ ಕೆಲಸ ಮಾಡುವುದು ನಮ್ಮ ಹಿತದೃಷ್ಟಿಯಿಂದಲೇ. ಇದೇ ರೀತಿ ನಿಸ್ವಾರ್ಥ ದಾನದಿಂದಲೇ ಇಂದು ವೆಂಕಟಶಾಸ್ತ್ರಿಗಳು ಜನಜನಿತರಾಗಿದ್ದಾರೆ ಎಂದು ವೇ.ಬ್ರ.ಶ್ರೀ ತಟ್ಟುವಟ್ಟು ವಾಸುದೇವ ಜೋಯಿಸರು ಹೇಳಿದರು. ನಾವು ಗಳಿಸಿದ್ದರಲ್ಲಿ ಸ್ವಲ್ಪ ಪಾಲನ್ನು ಸಮಾಜಕ್ಕೆ ಮರಳಿಸಲೇಬೇಕು. ಇಲ್ಲವಾದಲ್ಲಿ ಅದನ್ನು ಭಗವಂತನೇ ಬೇರೆ ಮಾರ್ಗದಲ್ಲಿ ವಸೂಲಿ ಮಾಡಬಲ್ಲ. ಹೀಗಾಗಿ ನಿಸ್ವಾರ್ಥ ದಾನ ಬಹಳ ಮುಖ್ಯ ಎಂದರು.
ಬ್ರಾಹ್ಮಣ ಸಮಾಜಕ್ಕೆ ಕೊಡುಗೆ
ಗುರುಪೂರ್ಣಿಮೆಯಂದೇ ಹಸೂಡಿ ವೆಂಕಟಶಾಸ್ತ್ರಿಗಳ ಜನನವಾಗಿತ್ತು. ಈ ಹಿನ್ನೆಲೆಯಲ್ಲಿ ಗುರುಪೂರ್ಣಿಮೆಯಂದೇ ಅವರ ಹೆಸರಿನ ದತ್ತಿನಿಧಿ ಉದ್ಘಾಟನೆ ಹಾಗೂ ಮೊದಲ ಪುರಸ್ಕಾರ ನೀಡಲು ತೀರ್ಮಾನಿಸಲಾಯಿತು. ಬ್ರಾಹ್ಮಣ ಸಮಾಜಕ್ಕೆ ಶಾಸ್ತ್ರಿಗಳು ನೀಡಿದ ಕೊಡುಗೆ ಅನನ್ಯ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಸಿ.ನಟರಾಜ ಭಾಗವತ್ ಹೇಳಿದರು. ಬ್ರಾಹ್ಮಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ 12 ಸಾವಿರ ರೂ. ಸ್ವಂತ ಹಣದಿಂದ ಹಸೂಡಿ ವೆಂಕಟಶಾಸ್ತ್ರಿಗಳು ಖರೀದಿಸಿದ್ದ ಜಾಗದ ಇಂದಿನ ಮೌಲ್ಯ 180 ಕೋಟಿ ರೂ.ಗೂ ಹೆಚ್ಚು. ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಈ ಜಾಗದಲ್ಲಿ ಇಂದು ಸುಸಜ್ಜಿತ ಕಲ್ಯಾಣ ಮಂದಿರ ನಿರ್ಮಾಣವಾಗಿದೆ ಎಂದು ತಿಳಿಸಿದರು. ಶಾಸ್ತ್ರಿಗಳ ಕೊಡುಗೆಯನ್ನು ಈ ಸಮಾಜ ಸದಾ ಕಾಲ ಸ್ಮರಿಸಬೇಕೆಂಬ ಉದ್ದೇಶದಿಂದ ಅವರ ಹೆಸರಿನಲ್ಲಿ ಪುರಸ್ಕಾರವೊಂದನ್ನು ನೀಡುವ ವ್ಯವಸ್ಥೆಯಾಗಬೇಕೆಂದು ಬಹಳ ಕಾಲದಿಂದಲೂ ಚಿಂತನೆ ನಡೆದಿತ್ತು. ಇದೀಗ ಶಾಸ್ತ್ರಿಗಳ ಕುಟುಂಬದ ಕೆಲವರು ಹಾಗೂ ಜಿಲ್ಲಾ ಬ್ರಾಹ್ಮಣ ಸಂಘದ ಕೆಲ ಮಂದಿ ಸೇರಿಕೊಂಡು ಸಮಿತಿ ಮಾಡಿ ಆ ಮೂಲಕ ಪ್ರತಿವರ್ಷ ಪುರಸ್ಕಾರ ಪ್ರದಾನ ಮಾಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.