- ಘರ್ ಸೋಪನ್ನು ಆನ್‌ಲೈನ್ ಮೂಲಕ ಆರ್ಡರ್
- ಗೋಗಲ್‌ನಲ್ಲಿ ಸಿಕ್ಕ ಕೋರಿಯರ್ ನಂಬರ್‌ಗೆ ಕರೆ
- ಮಗನ ಶಾಲಾ ಶುಲ್ಕ ಪಾವತಿಸಲು ತೆರಳಿದಾಗ ಗಮನಕ್ಕೆ
ಶಿವಮೊಗ್ಗ: ಸಾಮಾಜಿಕ ಜಾಲತಾಣ(Social Network)ದಲ್ಲಿ ಘರ್ ಸೋಪನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿದ್ದ ಎಲೆಕ್ಟ್ರಿಶಿಯನ್ 2.97 ಲಕ್ಷ ರೂ. ಕಳೆದುಕೊಂಡಿದ್ದಾರೆ. ಶಿವಮೊಗ್ಗ ಗಾಂಧಿಬಜಾರ್‌ನ 38 ವರ್ಷದ ಎಲೆಕ್ಟ್ರೀಶಿಯನ್ ಹಣ ಕಳೆದುಕೊಂಡವರು.
ಜು.7ರಂದು ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಂ(Instagram) ನೋಡುತ್ತಿದ್ದಾಗ ಘರ್ ಸೋಪಿನ ಜಾಹೀರಾತು ಕಂಡಿತ್ತು. ಆ ಸೋಪನ್ನು ಆರ್ಡರ್ ಮಾಡಿದ್ದರು. ಆರ್ಡರ್ ಮಾಡಿದ್ದ ಸೋಪು ಮನೆಗೆ ಬಾರದೇ ಇದ್ದಾಗ ಗೋಗಲ್‌ನಲ್ಲಿ ಸಿಕ್ಕ ಕೋರಿಯರ್ ನಂಬರ್(Courier Number)ಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ್ದ ವ್ಯಕ್ತಿ ತಾನು ಕಳುಹಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡುವಂತೆ ಸೂಚಿಸಿದ್ದ. ಅದರಂತೆ ಎಲೆಕ್ಟ್ರೀಶಿಯನ್ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದರು.
ಈ ವೇಳೆ ಹತ್ತಾರು ಮೆಸೇಜ್‌ಗಳು ಬಂದಿದ್ದು, ಗೊಂದಲಕ್ಕೀಡಾಗ ಎಲೆಕ್ಟ್ರೀಶಿಯನ್(Electrician) ಲಿಂಕ್ ಅನ್ನು ಡಿಲಿಟ್ ಮಾಡಿದ್ದರು. ಆನಂತರ ಮಗನ ಶಾಲಾ ಶುಲ್ಕ ಪಾವತಿಸಲು ಶಾಲೆಗೆ ತೆರಳಿದಾಗ ಬ್ಯಾಂಕ್ ಖಾತೆಯಲ್ಲಿ ಹಣ ಇರಲಿಲ್ಲ. ಬ್ಯಾಂಕ್ ತೆರಳಿ ಪರಿಶೀಲಿಸಿದಾಗ ಎರಡು ಬಾರಿ ತಲಾ ಒಂದು ಲಕ್ಷ ರೂ., ಮತ್ತೊಮ್ಮೆ 97 ಸಾವಿರ ರೂ. ಕಡಿತವಾಗಿದೆ. ಈ ಬಗ್ಗೆ ಸೈಬರ್ ಠಾಣೆ(Cyber station)ಯಲ್ಲಿ ಪ್ರಕರಣ ದಾಖಲಾಗಿದೆ.