ಹೊಳೆಹೊನ್ನೂರು ಭಾಗದಲ್ಲಿ ಮೇ ತಿಂಗಳಲ್ಲಿ ಸುರಿದ ಭಾರಿ ಮಳೆ ಗಾಳಿಗೆ ಬಿದ್ದ ಅಡಿಕೆ ಮರಗಳು. 
ಶಿವಮೊಗ್ಗ

ಎನ್‌ಡಿಆರ್‌ಎಫ್‌ನಿಂದ ಬಿಡಿಗಾಸು ಪರಿಹಾರ | Natural disaster

ಪ್ರಮುಖ ಮುಖ್ಯಾಂಶಗಳು

  • ಪ್ರಕೃತಿ ವಿಕೋಪದಿಂದ ಆಸ್ತಿಪಾಸ್ತಿ ನಷ್ಟಕ್ಕೆ ಅಲ್ಪ ಮೊತ್ತ ನಿಗದಿ
  • ಕೇಂದ್ರ ಸರ್ಕಾರದಿಂದ ಅವೈಜ್ಞಾನಿಕ ಕ್ರಮ
  • ಪರಿಹಾರದ ನೆಪದಲ್ಲಿ ಸಂತ್ರಸ್ತರ ಮೂಗಿಗೆ ತುಪ್ಪ
ಶಿವಮೊಗ್ಗ: ಪ್ರಕೃತಿ ವಿಕೋಪ(Natural Disaster)ದ ವೇಳೆ ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್(ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ) ಅಡಿ ನಿಗದಿಪಡಿಸಿರುವ ಪರಿಹಾರ ಮೊತ್ತವು ಅವೈಜ್ಞಾನಿಕವಾಗಿದೆ. ಪರಿಹಾರದ ನೆಪದಲ್ಲಿ ಸಂತ್ರಸ್ತರಿಗೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿರುವುದು ರೈತರ ಅಸಮಾಧಾನಕ್ಕೆ ಕಾರಣ. 
ಬೆಳೆ ಹಾಗೂ ವಾಸದ ಮನೆಗಳಿಗಿಂತ ವಿದ್ಯುತ್ ಕಂಬ ಮತ್ತು ಟ್ರಾನ್ಸ್‌ಫಾರ್ಮರ್(Transformer) ಸೇರಿ ಇತರೆ ವಸ್ತುಗಳಿಗೆ ಅಧಿಕ ಪರಿಹಾರ ನೀಡಲಾಗುತ್ತಿದೆ. ಮೂರು ದಶಕಗಳ ಹಿಂದಿನ ನಿಯಮಗಳೇ ಮುಂದುವರಿದಿದ್ದು, ತಕ್ಷಣ ಪರಿಷ್ಕರಣೆ ಮಾಡಿ ರೈತರಿಗೆ ವೈಜ್ಞಾನಿಕ ವಿಶೇಷ ಪರಿಹಾರ(Special solution) ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಅತಿವೃಷ್ಟಿ, ಅನಾವೃಷ್ಟಿ ಸೇರಿ ಪ್ರಾಕೃತಿಕ ವಿಕೋಪಗಳಿಂದ ಆಸ್ತಿಪಾಸ್ತಿ ನಷ್ಟವಾದಲ್ಲಿ ಎನ್‌ಡಿಆರ್‌ಎಫ್ ಅಡಿ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಪರಿಹಾರದ ಮೊತ್ತದ ಬಗ್ಗೆ, ರೈತ ವಲಯದಲ್ಲಿ ಮತ್ತೆ ಅಪಸ್ವರಗಳು ಕೇಳಿಬರುತ್ತಿವೆ. ಎನ್‌ಡಿಆರ್‌ಎಫ್ ಮಾನದಂಡ(NDRF criteria)ಗಳನ್ನು ಬದಲಿಸಿ ಪರಿಹಾರ ಹೆಚ್ಚಳ ಮಾಡಬೇಕೆಂದು ರೈತ ಸಂಘಟನೆಗಳು ನಿರಂತರವಾಗಿ ಆಗ್ರಹಿಸುತ್ತಿವೆ. ಆದರೆ ಎನ್‌ಡಿಆರ್‌ಎಫ್‌ನ ಪರಿಹಾರ ಮಾನದಂಡ 20 ವರ್ಷಗಳಿಗೂ ಹಿಂದಿನದು.
ಅಡಿಕೆ ಮರಕ್ಕೆ 16 ರೂ.!: ತೋಟ ನಾಶವಾದರೆ ಒಂದು ಅಡಿಕೆ ಮರಕ್ಕೆ 16 ರೂ., ಮನೆ ಪೂರ್ಣ ಕುಸಿದರೆ 1.20 ಲಕ್ಷ ರೂ. ಪರಿಹಾರವಿದೆ. ಆದರೆ ವಿದ್ಯುತ್ ಕಂಬ(Electricity pole)ಕ್ಕೆ 5 ಸಾವಿರ, ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ 1 ಲಕ್ಷ ರೂ., ಪ್ರತಿ ಕಿ.ಮೀ. ರಸ್ತೆಗೆ 1 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಶೇ.33ಕ್ಕಿಂತ ಹೆಚ್ಚು ಅಥವಾ ಸಂಪೂರ್ಣ ತೋಟ ನಾಶವಾದರೂ ಎರಡು ಹೆಕ್ಟೆರ್‌ಗೆ ಸೀಮಿತವಾಗಿ 22,500 ರೂ. ಪರಿಹಾರ ನಿಗದಿಸಲಾಗಿದೆ. ಒಂದು ಹೆಕ್ಟೆರ್‌ನಲ್ಲಿ ಶೇ.33ಕ್ಕಿಂತ ಕಡಿಮೆ ಅಂದರೆ 100 ಅಡಕೆ ಮರ ಮುರಿದರೂ ಕೇವಲ 2,500 ರೂ. ಪರಿಹಾರ ನೀಡಲಾಗುತ್ತಿದೆ. ಕಚ್ಚಾ ಮನೆಗಳು ಪೂರ್ಣ ನಾಶವಾದರೆ 1.20 ಲಕ್ಷ ರೂ., 10 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯ ಇರುವ ಪಕ್ಕಾ ಮನೆಗಳಿಗೆ ಕೇವಲ 1.30 ಲಕ್ಷ ರೂ. ಪರಿಹಾರ ನಿಗದಿಪಡಿಸಲಾಗಿದೆ. ಶೇ.15ಕ್ಕಿಂತ ಕಡಿಮೆ ಹಾನಿಯಾಗಿದ್ದಲ್ಲಿ ಕಚ್ಚಾ ಮನೆಗಳಿಗೆ 4 ಸಾವಿರ ರೂ. ಮತ್ತು ಪಕ್ಕಾ ಮನೆಗಳಿಗೆ 6,500 ರೂ. ಪರಿಹಾರವಿದೆ.
ಬದಲಾಗದ ಮಾನದಂಡ: ಕೇಂದ್ರ ಸರ್ಕಾರ(Central Government)ವು 2023ರ ಜುಲೈನಲ್ಲಿ ಸ್ವಲ್ಪಮಟ್ಟಿಗೆ ಪರಿಷ್ಕರಿಸಿತ್ತು. ಕಳೆದ ಮೂರು ವರ್ಷಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿ, ಅಗತ್ಯ ವಸ್ತುಗಳು, ಸರಕು ಸಾಮಗ್ರಿ ಮತ್ತು ಭೂಮಿ ಮೌಲ್ಯ ದ್ವಿಗುಣಗೊಂಡಿದೆ. ಕಳೆದ ವರ್ಷ ರಾಜ್ಯ ಸರ್ಕಾರ ಮಾನ್ಸೂನ್ ಮಳೆ(Monsoon rain)ಯಲ್ಲಿ ಬೆಳೆ ಮತ್ತು ಮನೆಗಳನ್ನು ಕಳೆದುಕೊಂಡ ರೈತರು, ಸಾರ್ವಜನಿಕರಿಗೆ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಿತ್ತು. ಮಳೆಯಾಶ್ರಿತ ಬೆಳೆಗಳ ಪರಿಹಾರವನ್ನು ಹೆಕ್ಟೇರ್‌ಗೆ 8500ರಿಂದ 17 ಸಾವಿರ ರೂ.ಗೆ, ನೀರಾವರಿ ಬೆಳೆ(Irrigated crop)ಗಳಿಗೆ ಹೆಕ್ಟೆರ್‌ಗೆ 17ರಿಂದ 25,500 ರೂ.ಗಳಿಗೆ ಹಾಗೂ ಬಹು ವಾರ್ಷಿಕ ಬೆಳೆಗಳಿಗೆ ಹೆಕ್ಟೇರ್‌ಗೆ 22,500ರಿಂದ 31 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಿತ್ತು. ಆದರೆ ಇದೂ ಸಹ ವೈಜ್ಞಾನಿಕವಾಗಿಲ್ಲ ಎಂಬುದು ರೈತರ ದೂರು.

ಲಕ್ಷಾಂತರ ಮರಗಳು ನಾಶ

ಭದ್ರಾವತಿ ತಾಲೂಕು ಹೊಳೆಹೊನ್ನೂರು ಹೋಬಳಿ(Holehonnur Hobli)ಯಲ್ಲಿ ಏಪ್ರಿಲ್ ಮತ್ತು ಮೇನಲ್ಲಿ ಎರಡು ಬಾರಿ ಬೀಸಿದ ಬಿರುಗಾಳಿಯಿಂದ 974 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ನಾಶವಾಗಿದೆ. ಅದರಲ್ಲಿ 650 ಹೆಕ್ಟೆರ್‌ನಲ್ಲಿ ಶೇ.33ಕ್ಕಿಂತ ಹೆಚ್ಚು ಹಾನಿಯಾಗಿದೆ. 12 ಲಕ್ಷಕ್ಕಿಂತ ಅಧಿಕ ಅಡಿಕೆ ಮರಗಳು ಮುರಿದಿವೆ. ಪ್ರತಿ ರೈತ ಕನಿಷ್ಠ 3ರಿಂದ 8 ಸಾವಿರ ಅಡಿಕೆ ಮರಗಳನ್ನು ಕಳೆದುಕೊಂಡಿದ್ದಾರೆ. ಇವರಿಗೆ ಎನ್‌ಡಿಆರ್‌ಎಫ್ ಮಾನದಂಡದ ಅನ್ವಯ ಹೆಕ್ಟೇರ್‌ಗೆ 22,500 ರೂ. ಪರಿಹಾರ ಸಿಗಲಿದೆ. ಬಿದ್ದ ಮರಗಳನ್ನು ಕಡಿದು ಹೊರಗೆ ಸಾಗಿಸಲು 50 ಸಾವಿರ ರೂ.ಗಿಂತ ಅಧಿಕ ವೆಚ್ಚ ಮಾಡಿದ್ದಾರೆ. ಈ ರೈತರು ಬೆಳೆ ವಿಮೆ(Crop insurance) ಕಟ್ಟಿದ್ದರೂ ಏಪ್ರಿಲ್ ಮತ್ತು ಮೇ ತಿಂಗಳ ಅಕಾಲಿಕ ಮಳೆ ಮತ್ತು ಬಿರುಗಾಳಿಗೆ ಪರಿಹಾರ ನೀಡಲು ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ಪ್ರತಿಯೊಬ್ಬರಿಗೂ 3ರಿಂದ 10 ಲಕ್ಷ ರೂ.ವರೆಗೆ ನಷ್ಟವಾಗಿರುವುದರಿಂದ ವಿಶೇಷ ಪರಿಹಾರಕ್ಕೆ ಆಗ್ರಹಿಸಿದ್ದಾರೆ.
ಎನ್‌ಡಿಆರ್‌ಎಫ್ ಪರಿಹಾರ
  •  ಮಾನವ ಸಾವು- 4 ಲಕ್ಷ ರೂ.
  • ಕಚ್ಚಾ ಮನೆ ಪೂರ್ಣ ಕುಸಿತ- 1.20 ಲಕ್ಷ ರೂ. 
  • ಪಕ್ಕಾ ಮನೆ ಪೂರ್ಣ ಕುಸಿತ- 1.30 ಲಕ್ಷ ರೂ. 
  • ಕೃಷಿ ಭೂಮಿ ಭೂ ಕುಸಿತ- 47 ಸಾವಿರ ರೂ.(ಹೆ)
  • ಮಳೆಯಾಶ್ರಿತ ಭೂಮಿಯಲ್ಲಿ ಶೇ.33 ಬೆಳೆ ನಾಶ- 8,500 ರೂ.(ಹೆ)
  • ನೀರಾವರಿ ಪ್ರದೇಶದ ಬೆಳೆ ಹಾನಿ-17 ಸಾವಿರ ರೂ.(ಹೆಕ್ಟೆರ್)
  • ತೋಟದ ಬೆಳೆ ನಷ್ಟ-22,500 ರೂ.(ಹೆ)
  • ಜಾನುವಾರುಗಳ ಸಾವು- 4ರಿಂದ 37,500 ರೂ.
  • ಹೆದ್ದಾರಿ ರಸ್ತೆ ಪ್ರತಿ ಕಿ.ಮೀ.ಗೆ- 1 ಲಕ್ಷ ರೂ.
  • ಮುರಿದ ವಿದ್ಯುತ್ ಕಂಬ- 5 ಸಾವಿರ ರೂ.(ಒಂದಕ್ಕೆ)
  • ವಿದ್ಯುತ್ ಟ್ರಾನ್ಸ್‌ಫಾರ್ಮರ್- 1 ಲಕ್ಷ ರೂ.(ಒಂದಕ್ಕೆ)
"

ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಕೂಡ ನಿಯಮ ಪರಿಷ್ಕರಣೆ ಮಾಡಿಲ್ಲ. ಅಡಿಕೆ ಮರವೊಂದಕ್ಕೆ 16 ರೂ., ಹೆಕ್ಟೇರ್‌ಗೆ 22,500 ರೂ. ಪರಿಹಾರ ನಿಗದಿ ಮಾಡಿದೆ. ರಾಜ್ಯ ಸರ್ಕಾರ ಇನ್ನೂ ಟೇಕ್‌ಆಫ್ ಆಗಿಲ್ಲ. ಸಿಎಂ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ಆದರೆ ಅವುಗಳನ್ನು ನೈಜವಾಗಿ ತಲುಪಿಸಲು ಸಾಧ್ಯವಾಗುತ್ತಿಲ್ಲ. ಇದೇ ರೀತಿ ಆದರೆ ರೈತರ ಬದುಕು ಬೀದಿಗೆ ಬಳಲಿದೆ.

— ಎಚ್.ಆರ್.ಬಸವರಾಜಪ್ಪ, ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ