ಭದ್ರಾವತಿ: ಅಂಗವಿಕಲ ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವುದು ಇಂದಿನ ಶಿಕ್ಷಣದ ಉದ್ದೇಶ ಎಂದು ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ವಿ.ಎಚ್.ಪಂಚಾಕ್ಷರಿ ಹೇಳಿದರು.
ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕಚೇರಿಯಲ್ಲಿ ಆಯೋಜಿಸಿದ್ದ ಅಂಗವಿಕಲ ಮಕ್ಕಳಿಗೆ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಯಾವುದೇ ಮಕ್ಕಳು ಕಲಿಕೆಯಿಂದ ದೂರ ಉಳಿಯಬಾರದೆಂಬ ಉದ್ದೇಶ ಹೊಂದಲಾಗಿದೆ ಎಂದರು.
ಅಂಗವಿಕಲ ಮಕ್ಕಳಲ್ಲಿನ ಪ್ರತಿಭೆ ಗುರುತಿಸುವ ಮೂಲಕ ಅವರಿಗೆ ಶಿಕ್ಷಣ ನೀಡಲು ಯಾವ ಮಾದರಿ ಅನುಸರಿಸಬೇಕು. ಯಾವ ಸಲಕರಣೆಗಳನ್ನು ಅವರಿಗೆ ಒದಗಿಸಬೇಕು. ಅವರಲ್ಲಿನ ಜ್ಞಾನ ವೃದ್ಧಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶಿಕ್ಷಣ ಇಲಾಖೆ ತಿಳಿವಳಿಕೆ ನೀಡುತ್ತಿದೆ. ಇದಕ್ಕಾಗಿ ಸಂಪನ್ಮೂಲ ಕಚೇರಿ ಆವರಣದಲ್ಲಿ ಕೌಶಲ ಕೇಂದ್ರ ತೆರೆಯಲಾಗಿದೆ ಎಂದು ತಿಳಿಸಿದರು.
ಬಿಇಒ ಕೆ.ಸಿ.ಸುರೇಶ್ ಕಾರ್ಯಕ್ರಮ ಉದ್ಘಾಟಿಸಿದರು, ತಾಲೂಕು ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷ ಸಿ.ಜಯಪ್ಪ, ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷೆ ಎಸ್.ಉಮಾ, ಶಿಕ್ಷಣ ಸುಧಾರಣಾ ಸಮಿತಿ ಸದಸ್ಯರಾದ ಚುಂಜ್ಯಾನಾಯ್ಕ, ಈಶ್ವರಪ್ಪ, ರಾಜೇಶ್, ಮುಖ್ಯ ಶಿಕ್ಷಕ ಮೊಹಿದ್ದೀನ್, ಸಿಆರ್‌ಪಿ ಚನ್ನಪ್ಪ, ಪೂಜಾ, ನಾಗಪ್ಪ ಇತರರಿದ್ದರು.