ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಎಸ್‌ಐಆರ್ ಕಾರ್ಯ ವಿಸ್ತರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಸಲ್ಲಿಸಿದರು. ಕೆ.ಎನ್.ರಾಮಕೃಷ್ಣ, ಗೀತಾ ಸತೀಶ್, ಉಮಾಶಂಕರ್ ಉಪಾಧ್ಯ, ನಾಗೇಶ್, ಸಂಗಯ್ಯ, ನರಸಿಂಹ ಗಂಧದಮನೆ, ದೀಪಕ್ ಸಿಂಗ್, ಮಧುಕುಮಾರ್, ದಯಾನಂದ್ ಇದ್ದರು. 
ಶಿವಮೊಗ್ಗ

ಎಸ್‌ಐಆರ್ ಪ್ರಕ್ರಿಯೆ ಅವಧಿ ಒಂದು ತಿಂಗಳು ವಿಸ್ತರಿಸಿ | Special intensive revision

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲಿ ಮಳೆ ಹಿನ್ನೆಲೆಯಲ್ಲಿ ಸಮೀಕ್ಷೆಗೆ ತೊಂದರೆ
  • ವಿಶೇಷ ತೀವ್ರ ಪರಿಷ್ಕರಣೆ ಕಾರ್ಯ ಗುಣಮಟ್ಟದಿಂದ ನಡೆಸಲು ಅಸಾಧ್ಯ
  • ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಒತ್ತಾಯ
ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆ ಕಾರಣದಿಂದ ಎಸ್‌ಐಆರ್(ವಿಶೇಷ ತೀವ್ರ ಪರಿಷ್ಕರಣೆ(Special intensive revision) ಕಾರ್ಯವನ್ನು ಗುಣಮಟ್ಟದಿಂದ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸಮೀಕ್ಷೆ ಅವಧಿಯನ್ನು ಕನಿಷ್ಠ ಒಂದು ತಿಂಗಳು ವಿಸ್ತರಿಸಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್(K.B.Prasannakumar) ಒತ್ತಾಯಿಸಿದರು.
ಚುನಾವಣಾ ಆಯೋಗ(Election Commission)ದ ಜವಾಬ್ದಾರಿಯನ್ನು ಪಕ್ಷ ಸಂಪೂರ್ಣ ಗೌರವಿಸುತ್ತದೆ. ಎಸ್‌ಐಆರ್ ಪ್ರಕ್ರಿಯೆ ಯಾವುದೇ ಲೋಪವಿಲ್ಲದೆ ನಡೆಯಬೇಕಿದೆ. ಆದರೆ ಜಿಲ್ಲೆಯಲ್ಲಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರಕ್ರಿಯೆಗೆ ಅಡ್ಡಿಯಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾರಿ ಮಳೆ, ಗಾಳಿಯಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅನೇಕ ಕಡೆ ಮನೆಗಳು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಇಂತಹ ಸಂದರ್ಭದಲ್ಲಿ ಜನರ ಜೀವ ಹಾಗೂ ಆಸ್ತಿಪಾಸ್ತಿ ರಕ್ಷಿಸುವುದು ಜಿಲ್ಲಾಡಳಿತ(District Administration)ದ ಮೊದಲ ಆದ್ಯತೆಯಾಗಬೇಕು. ಎಸ್‌ಐಆರ್ ಕಾರ್ಯವನ್ನು ತ್ವರಿತಗತಿಯಲ್ಲಿ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ಸಹ ಸಮೀಕ್ಷೆಯ ಪ್ರಗತಿ ತೃಪ್ತಿಕರವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಬಿಎಲ್‌ಒ(ಬೂತ್ ಮಟ್ಟದ ಅಧಿಕಾರಿಗಳು) ಮತ್ತು ವಿವಿಧ ಪಕ್ಷಗಳ ಬಿಎಲ್‌ಎ(ಬೂತ್‌ಮಟ್ಟದ ಏಜೆಂಟರು)ಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಭಾರಿ ಮಳೆಯ ನಡುವೆಯೇ ಬಿಎಲ್‌ಒಗಳು ಮನೆಮನೆಗೆ ತೆರಳಿ ನಮೂನೆ ವಿತರಿಸಬೇಕಿದೆ. ಮಳೆಯಿಂದ ಇನ್ಯುಮರೇಷನ್ ಅರ್ಜಿ(Enumeration application)ಗಳು ಒದ್ದೆಯಾಗಿ ಹಾಳಾಗುವ ಸಾಧ್ಯತೆಯಿದೆ. ಒಮ್ಮೆ ಅರ್ಜಿ ಹಾಳಾದರೆ ಅದನ್ನು ಪುನಃ ಪಡೆಯುವ ಪ್ರಕ್ರಿಯೆ ಸುಲಭವಲ್ಲ. ಅಧಿಕಾರಿಗಳು ಪ್ಲಾಸ್ಟಿಕ್ ಕವರ್‌(Plastic cover)ಗಳನ್ನು ನೀಡಿದ್ದೇವೆ ಎಂದು ಹೇಳುತ್ತಿದ್ದರೂ ಅದು ಸಮರ್ಪಕ ಪರಿಹಾರವಲ್ಲ. ಮಳೆ, ರಸ್ತೆ ಸಮಸ್ಯೆ, ನೀರು ನಿಂತಿರುವ ಪ್ರದೇಶಗಳು ಹಾಗೂ ಸಾರಿಗೆ ತೊಂದರೆಗಳಿಂದ ಬಿಎಲ್‌ಒ(BLO)ಗಳಿಗೆ ಪ್ರತಿಯೊಂದು ಮನೆ ತಲುಪುವುದು ತುಂಬ ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತ್ವರಿತಗತಿಯಲ್ಲಿ ಸಮೀಕ್ಷೆ ನಡೆಸುವುದರಿಂದ ಗುಣಮಟ್ಟ ಮತ್ತು ನಿಖರತೆ ಎರಡಕ್ಕೂ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಎಸ್‌ಐಆರ್ ಯಶಸ್ವಿ ಆಗಬೇಕಾದರೆ ಕೇವಲ ಗಡುವಿನೊಳಗೆ ಪೂರ್ಣಗೊಳಿಸುವುದೇ ಗುರಿಯಾಗಬಾರದು. ಪ್ರತಿಯೊಬ್ಬ ಮತದಾರರ ಮಾಹಿತಿಯನ್ನು ನಿಖರವಾಗಿ ಪರಿಶೀಲಿಸಿ ದಾಖಲಿಸುವುದು ಮುಖ್ಯ. ಗುಣಮಟ್ಟವಿಲ್ಲದ ಸಮೀಕ್ಷೆಯಿಂದ ಇಡೀ ಪ್ರಕ್ರಿಯೆಯ ಉದ್ದೇಶವೇ ವಿಫಲವಾಗಬಹುದು ಎಂದು ಎಚ್ಚರಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎನ್.ರಾಮಕೃಷ್ಣ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಮುಖಂಡರಾದ ಉಮಾಶಂಕರ್ ಉಪಾಧ್ಯ, ನಾಗೇಶ್, ಸಂಗಯ್ಯ, ನರಸಿಂಹ ಗಂಧದಮನೆ, ದೀಪಕ್ ಸಿಂಗ್, ಮಧುಕುಮಾರ್, ದಯಾನಂದ್ ಸುದ್ದಿಗೋಷ್ಠಿಯಲ್ಲಿದ್ದರು.
"

ಜಿಲ್ಲೆಯ ಹವಾಮಾನ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವವರೆಗೆ ಎಸ್‌ಐಆರ್ ಪ್ರಕ್ರಿಯೆ ಮುಂದೂಡಿ ಆನಂತರ ಮನೆ ಮನೆಗೆ ತೆರಳಿ ಸಮಗ್ರ ಹಾಗೂ ನಿಖರ ಸಮೀಕ್ಷೆ ನಡೆಸಲು ಅವಕಾಶ ನೀಡಬೇಕು. ಇದರಿಂದ ಮತದಾರರ ಪಟ್ಟಿಯ ಪರಿಷ್ಕರಣೆ ಪಾರದರ್ಶಕ, ಗುಣಮಟ್ಟ ಹಾಗೂ ಯಾವುದೇ ಗೊಂದಲವಿಲ್ಲದೆ ಪೂರ್ಣಗೊಳ್ಳಲು ಸಾಧ್ಯವಾಗುತ್ತದೆ.

— ಕೆ.ಬಿ.ಪ್ರಸನ್ನಕುಮಾರ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ