ಎಸ್‌ಐಆರ್ ಪ್ರಕ್ರಿಯೆ ಕುರಿತು ಪ್ರಭುಲಿಂಗ ಕವಳಿಕಟ್ಟಿ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿದರು.
- ಅನರ್ಹ ಮತದಾರರ ಪತ್ತೆ ಉದ್ದೇಶ
- ಡಿಸಿ ಪ್ರಭುಲಿಂಗ ಕವಳಿಕಟ್ಟಿ ಮಾಹಿತಿ
- 7 ಹಂತಗಳಲ್ಲಿ ನಡೆಯಲಿದೆ ಪ್ರಕ್ರಿಯೆ
- ಅ.7ರವರೆಗೆ ಸಮಗ್ರ ಪರಿಷ್ಕರಣೆ
ಶಿವಮೊಗ್ಗ: ರಾಜ್ಯವ್ಯಾಪಿ ಎಸ್‌ಐಆರ್ (sir) (ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ) ಪ್ರಕ್ರಿಯೆ ಜೂ.20ರಿಂದ ಆರಂಭವಾಗಲಿದೆ. ಇದೊಂದು ಪಾರದರ್ಶಕ (transparent) ಪ್ರಕ್ರಿಯೆಯಾಗಿದ್ದು, ಅರ್ಹ ಮತದಾರರು (voters) ಆತಂಕಪಡುವ ಅಗತ್ಯವಿಲ್ಲ. ಈ ಪ್ರಕ್ರಿಯೆ ಬಗ್ಗೆ ಯಾರೂ ಸುಳ್ಳು ಸುದ್ದಿಗಳನ್ನು ಹರಡಬಾರದು ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ಸ್ವಾತಂತ್ರೃ ಭಾರತದಲ್ಲಿ ಇದುವರೆಗೆ 10 ಬಾರಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ನಡೆದಿದೆ. ಹೀಗಾಗಿ ಇದು ಹೊಸ ಪ್ರಕ್ರಿಯೆಯೇನಲ್ಲ. ಕಾಲದಿಂದ ಕಾಲಕ್ಕೆ ಚುನಾವಣಾ ಆಯೋಗ ಅನರ್ಹ ಮತದಾರರನ್ನು ಪತ್ತೆ ಮಾಡುವ ಸಲುವಾಗಿ ಎಸ್‌ಐಆರ್ ನಡೆಸುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎಸ್‌ಐಆರ್ ಪ್ರಕ್ರಿಯೆ ಒಟ್ಟು 7 ಹಂತಗಳಲ್ಲಿ ನಡೆಯುತ್ತದೆ. ಇದಕ್ಕಾಗಿ ರಾಜ್ಯವ್ಯಾಪಿ ಏಕರೂಪದ ವೇಳಾಪಟ್ಟಿ ನಿಗದಿಯಾಗಿದೆ. ಅದೇ ಪ್ರಕಾರ ಜಿಲ್ಲೆಯಲ್ಲಿ ಜೂನ್ 20ರಿಂದ ಅ.7ರವರೆಗೆ ಪ್ರಕ್ರಿಯೆಗಳು ನಡೆಯಲಿವೆ. ಇಡೀ ಪ್ರಕ್ರಿಯೆಯಲ್ಲಿ ನಾಗರಿಕರಿಗೆ ಮುಕ್ತ ಅವಕಾಶವಿದೆ. ಯಾವುದೇ ಹಂತದಲ್ಲೂ ಅವರು ಮತದಾನಕ್ಕೆ ತಮ್ಮ ಅರ್ಹತೆ ಸಾಬೀತುಪಡಿಸಬಹುದು ಎಂದು ಸ್ಪಷ್ಟಪಡಿಸಿದರು.
2002ರಲ್ಲಿ ಕೊನೆಯ ಬಾರಿಗೆ ವಿಶೇಷ ಸಮಗ್ರ ಪರಿಷ್ಕರಣೆ ನಡೆದಿತ್ತು. ಆಗ ಜಿಲೆಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿಂದ 12,18,082 ಮತದಾರರಿದ್ದರು. ಪ್ರಸ್ತುತ ಜಿಲ್ಲೆಯ 1,793 ಬೂತ್‌ಗಳಿಂದ ಒಟ್ಟು 15,26,826 ಮತದಾರರಿದ್ದಾರೆ. ವಿಶೇಷ ಪರಿಷ್ಕರಣೆ ಬಳಿಕ ನಿಖರವಾಗಿ ಮತದಾರರ ಅಂಕಿ ಅಂಶ ತಿಳಿಯಲಿದೆ ಎಂದರು.
ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ಸುದ್ದಿಗೋಷ್ಠಿಯಲ್ಲಿದ್ದರು.
ಪರಿಷ್ಕರಣೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ಜೂ.20ರಿಂದ 29ರವರೆಗೆ ತರಬೇತಿ ಹಾಗೂ ಸಿದ್ಧತೆಗೆ ಅವಕಾಶ
ಜೂ.30ರಿಂದ ಜು.29ರ ಅವಧಿಯಲ್ಲಿ ಮತಗಟ್ಟೆ ಅಧಿಕಾರಿ ಪ್ರತಿ ಮತದಾರರ ಮನೆಗೆ ಭೇಟಿ ನೀಡಿ ಮತದಾರರ ಗುರುತಿನ ಚೀಟಿ ಪರಿಶೀಲನೆ
2002ರ ಮತದಾರರ ವಿಶೇಷ ಪರಿಷ್ಕರಣೆ ಪಟ್ಟಿ ಹಾಗೂ 2025ರ ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳ ಪರಿಶೀಲನೆ
ಬಿಎಲ್‌ಒಗಳು ಮನೆಮನೆ ಭೇಟಿ ವೇಳೆ ಪ್ರತಿ ಮನೆಗೂ ಎರಡು ನಮೂನೆಗಳನ್ನು ದ್ವಿಪ್ರತಿಯಲ್ಲಿ ನೀಡಿ, ಹೊಸ ಮಾಹಿತಿ ಹಿಂಪಡೆಯುವರು
ಒಂದು ನಮೂನೆಯನ್ನು ಅಧಿಕಾರಿಗಳು ಸಹಿ ಮಾಡಿ ಮತದಾರರಿಗೆ ಹಿಂದಿರುಗಿಸುವರು. ಈ ಸಂದರ್ಭದಲ್ಲಿ ಚುನಾವಣಾ ಆಯೋಗವು ಸೂಚಿಸಿದ 12 ರೀತಿಯ ಮಾಹಿತಿಯಲ್ಲಿ ಯಾವುದಾದರೊಂದನ್ನು ಪುರಾವೆಯಾಗಿ ಪಡೆಯುವರು.
ಮತದಾರರ ಪಟ್ಟಿಯ ಕರಡನ್ನು ಆ.5ರಂದು ಬೂತ್‌ಗೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಯಲ್ಲಿ ಪ್ರಕಟಣೆ
ಕರಡು ಪ್ರತಿಯ ಕುರಿತು ಮತದಾರರು ಆಕ್ಷೇಪಣೆ-ಅಹವಾಲುಗಳನ್ನು ಸೆ.4ರೊಳಗೆ ಸಲ್ಲಿಸಲು ಅವಕಾಶ
ಸಲ್ಲಿಕೆಯಾಗುವ ಆಕ್ಷೇಪಣೆಗಳನ್ನು ಅ.3ರೊಳಗೆ ಇತ್ಯರ್ಥ
ಅ.10ರಂದು ಮತದಾರರ ಪಟ್ಟಿಯ ಅಂತಿಮ ಕರಡು ಪ್ರಕಟಣೆ
ಯಾರನ್ನು ಕೈಬಿಡಲಾಗುತ್ತದೆ?
ಮೃತಪಟ್ಟ, ಕಾಯಂ ಆಗಿ ಬೇರೆ ಕಡೆಗಳಲ್ಲಿ ನೆಲೆಸಿರುವ, ವಲಸೆ ಹೋಗಿರುವ ಇಲ್ಲವೇ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಆಗಿರುವವರನ್ನು ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಮೂಲಕ ಕೈಬಿಡಲಾಗುತ್ತದೆ. ಅರ್ಹ ಮತದಾರರು ಹೊಸ ಹೆಸರು ಸೇರ್ಪಡೆ ಮಾಡಲು, ಹೆಸರು ಕೈಬಿಡಲು ಆಕ್ಷೇಪಣೆ ಸಲ್ಲಿಸಲು, ತಿದ್ದುಪಡಿಗಾಗಿ ಅರ್ಜಿಗಳನ್ನು ಸಲ್ಲಿಸಲು ಪರಿಷ್ಕರಣೆ ವೇಳೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.
ಎಸ್‌ಐಆರ್ ಪ್ರಕ್ರಿಯೆ ಮತದಾನ
ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧಿಸಿ ಪ್ರಭುಲಿಂಗ ಕವಳಿಕಟ್ಟಿ ಅವರು ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿದರು. ವಿ.ಅಭಿಷೇಕ್, ಎನ್.ಕೆ.ಜಗದೀಶ್, ದೀಪಕ್ ಸಿಂಗ್, ಮಾಲತೇಶ್, ಶಿವಾನಂದ, ತ್ಯಾಗರಾಜ ಮತ್ತಿತರರಿದ್ದರು.