ಶಿವಮೊಗ್ಗದ ಎಸ್‌ಪಿಎಂ ರಸ್ತೆಯಲ್ಲಿ ಎಸ್‌ಐಆರ್ ಎರಡನೇ ಮಾಹಿತಿ ಸೇವಾ ಕೇಂದ್ರವನ್ನು ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ, ಸೊರಬ ಜಡೆ ಮಠದ ಶ್ರೀ ಮಹಾಂತ ಸ್ವಾಮೀಜಿ ಉದ್ಘಾಟಿಸಿದರು. ಕೆ.ಎಸ್.ಈಶ್ವರಪ್ಪ, ಕೆ.ಇ.ಕಾಂತೇಶ್, ಇ.ವಿಶ್ವಾಸ್, ಮಹಾಲಿಂಗ ಶಾಸಿ, ಸುವರ್ಣಾ ಶಂಕರ್, ಲಕ್ಷ್ಮೀ ಶಂಕರನಾಯ್ಕ, ಬಾಲು ಇದ್ದರು.
- ರಾಷ್ಟ್ರಭಕ್ತ ಬಳಗದಿಂದ ಮಾಹಿತಿ ಸೇವಾ ಕೇಂದ್ರ ಉದ್ಘಾಟನೆ
- ಬಾಂಗ್ಲಾ, ಪಾಕಿಸ್ತಾನದಿಂದ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಳ
- ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಹೇಳಿಕೆ
ಶಿವಮೊಗ್ಗ: ದೇಶದಲ್ಲಿ ಬಾಂಗ್ಲಾ ಮತ್ತು ಪಾಕಿಸ್ತಾನದಿಂದ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ದೇಶಕ್ಕೆ ಆತಂಕಕಾರಿ. ಈ ನುಸುಳುಕೋರರನ್ನು ದೇಶದಿಂದ ಹೊರಹಾಕಲು ಎಸ್‌ಐಆರ್ (ವಿಶೇಷ ಸಮಗ್ರ ಪರಿಷ್ಕರಣೆ) ಬಹುಮುಖ್ಯ ಅಸ್ತ್ರ ಎಂದು ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ(Basava marulasiddha Swamiji) ಹೇಳಿದರು.
ನಗರದ ಎಸ್‌ಪಿಎಂ ರಸ್ತೆಯಲ್ಲಿ ಗುರುವಾರ ರಾಷ್ಟ್ರಭಕ್ತರ ಬಳಗ(RastraBhakta Balaga)ವು ಗೋವರ್ಧನ ಟ್ರಸ್ಟ್ ಸಹಯೋಗದಲ್ಲಿ ಎಸ್‌ಐಆರ್ ಎರಡನೇ ಮಾಹಿತಿ ಸೇವಾ ಕೇಂದ್ರ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಕೇಂದ್ರ ಸರ್ಕಾರವು ಮತಪಟ್ಟಿ ಶುದ್ಧೀಕರಣಕ್ಕಾಗಿ ಉತ್ತಮ ಕಾರ್ಯ ಆರಂಭಿಸಿದೆ ಎಂದರು.
ಎಸ್‌ಐಆರ್ ಪ್ರಕ್ರಿಯೆ(SIR process) ಪ್ರಯೋಜನವನ್ನು ಭಾರತೀಯ ಪ್ರಜೆಗಳು ಪಡೆದುಕೊಳ್ಳಬೇಕು. ರಾಷ್ಟ್ರಭಕ್ತರ ಬಳಗ ಇಂತಹ ಸೇವಾ ಕಾರ್ಯ ಮಾಡುತ್ತಿರುವುದು ಇತರರಿಗೆ ಮಾದರಿ. ಪ್ರಜಾಪ್ರಭುತ್ವದಲ್ಲಿ ಚುನಾವಣಾ ಗುರುತಿನ ಪತ್ರ ಎಲ್ಲರಲ್ಲೂ ಇರಬೇಕು. ಈ ಸಂದರ್ಭದಲ್ಲಿ ಯಾರೂ ಮೈಮರೆಯಬಾರದು ಎಂದು ಹೇಳಿದರು.
ರಾಷ್ಟ್ರಭಕ್ತರ ಬಳಗದ ಅಧ್ಯಕ್ಷ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿ, ಪ್ರಜಾಪ್ರಭುತ್ವ(Democracy)ದಲ್ಲಿ ಎಸ್‌ಐಆರ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಪ್ರತಿಯೊಬ್ಬ ಪ್ರಜೆಯ, ರಾಜಕಾರಣಿಯ ಕರ್ತವ್ಯ. ಇದರಲ್ಲಿ ವಿಲವಾದರೆ ರಾಜಕಾರಣ ಮಾಡುವುದು ವ್ಯರ್ಥ. ಹೊರದೇಶಗಳ ನುಸುಳುಕೋರ(Infiltrator)ನ್ನು ಪತ್ತೆಮಾಡಲು ಎಸ್‌ಐಆರ್ ಸಹಕಾರಿ ಎಂದರು.
ಸೊರಬ ಜಡೆ ಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಈಶ್ವರಪ್ಪ ಅವರು ಕೇವಲ ಸಂಸ್ಕೃತಿ, ಪರಂಪರೆಯ ರಕ್ಷಣೆ ಮಾಡುತ್ತಿಲ್ಲ. ಎಸ್‌ಐಆರ್ ಮಾಹಿತಿ ಕೇಂದ್ರ(SIR Information Center) ಆರಂಭಿಸುವ ಮೂಲಕ ಪ್ರಜಾಪ್ರಭುತ್ವದ ರಕ್ಷಣೆಗೂ ಮುಂದಾಗಿರುವುದು ಅಭಿನಂದನೀಯ ಎಂದು ಹೇಳಿದರು. ಪ್ರಮುಖರಾದ ಇ.ವಿಶ್ವಾಸ್, ಮಹಾಲಿಂಗ ಶಾಸಿ, ಮೋಹನ್ ಜಾಧವ್, ಸುವರ್ಣಾ ಶಂಕರ್, ಸೀತಾಲಕ್ಷ್ಮೀ, ಶಂಕರ ನಾಯ್ಕ, ಲಕ್ಷ್ಮೀ ಶಂಕರನಾಯ್ಕ, ಕೆಂಪಮ್ಮ, ಅನಿತಾ, ಬಾಲು ಮತ್ತಿತರರಿದ್ದರು.
ಬೊಮ್ಮನಕಟ್ಟೆಯಲ್ಲಿ ಸೇವಾ ಕೇಂದ್ರ
ಜೂ.16ರಂದು ರಾಷ್ಟ್ರಬಳಗದಿಂದ ಶುಭಮಂಗಳ ಸಮುದಾಯ ಭವನ(Shubhamangala Community Hall)ದಲ್ಲಿ ಪ್ರಥಮ ಮಾಹಿತಿ ಸೇವಾ ಕೇಂದ್ರ ತೆರೆದಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತ್ತಿದೆ. ಇಲ್ಲಿವರೆಗೆ 6,400ಕ್ಕೂ ಅಧಿಕ ಮತದಾರರು ಎಸ್‌ಐಆರ್ ಮಾಹಿತಿ(SIR information) ಪಡೆದಿದ್ದಾರೆ. ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ, ಹೊರ ರಾಜ್ಯದಿಂದಲೂ ಮತದಾರರು ಸೇವಾ ಕೇಂದ್ರವನ್ನು ಸಂಪರ್ಕಿಸುತ್ತಿದ್ದಾರೆ. ನಗರದ ಮತದಾರರಿಗೆ ಮತ್ತಷ್ಟು ಸಹಾಯ ಮಾಡಲು ಜು.20ರಂದು ಬೊಮ್ಮನಕಟ್ಟೆಯಲ್ಲಿ 3ನೇ ಎಸ್‌ಐಆರ್ ಮತದಾರ ಸೇವಾ ಕೇಂದ್ರ ಆರಂಭಿಸಲಾಗುವುದು ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಇ.ಕಾಂತೇಶ್ ಹೇಳಿದರು.