ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ
- ಪ್ರಜಾಪ್ರಭುತ್ವದ ಆಶಯಕ್ಕೆ ಕಾಂಗ್ರೆಸ್ ವಿರೋಧ
- ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಟೀಕೆ
ಶಿವಮೊಗ್ಗ: ಕಾಂಗ್ರೆಸ್ (congress) ನವರಿಗೆ ಎಸ್‌ಐಆರ್ (sir) ಬಗ್ಗೆ ಭಯವೇಕೆ? ಸುದ್ದಿಗೋಷ್ಠಿ ಮಾಡಿ ಸುಮ್ಮನೇ ಎಸ್‌ಐಆರ್ ವಿರುದ್ಧ ಟೀಕೆ ಮಾಡುವುದೇಕೆ? ಮೋದಿ (modi) ಸರ್ಕಾರ ಏನೋ ಮಡುತ್ತಿದೆ ಎಂದು ಜನರಲ್ಲಿ ಭಯ ಹುಟ್ಟಿಸುವುದೇಕೆ ಎಂದು ಮಾಡಿ ಡಿಸಿಎಂ, ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಎಸ್‌ಐಆರ್‌ನಿಂದ ಪ್ರಜಾಪ್ರಭುತ್ವದ ಮಾರಣಹೋಮ ಎಂದಿದ್ದಾರೆ. ಬಾಂಗ್ಲಾದವರು, ಪಾಕಿಸ್ತಾನದವರು, ನಕಲಿ ಮತದಾರರು ಮತ ಹಾಕಿದರೆ ಪ್ರಜಾಪ್ರಭುತ್ವದ ರಕ್ಷಣೆಯಾಗುತ್ತದೆಯೇ? ಬಿಎಲ್‌ಒಗಳ ಜತೆಗೆ ಕಾಂಗ್ರೆಸ್‌ನವರು ಅವರ ಕಾರ್ಯಕರ್ತರನ್ನೂ ಮತದಾರರ ಪಟ್ಟಿ ಪರಿಷ್ಕರಣೆಗೆ ಕಳಿಸಲಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯು ನೈಜ ಮತ್ತು ಉತ್ಕೃಷ್ಟ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಒಂದು ಪ್ರಕ್ರಿಯೆ. ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವ ಸಾಗುವುದು ಕಾಂಗ್ರೆಸ್‌ಗೆ ಬೇಡವಾಗಿದೆ. ಎರಡ್ಮೂರು ಕಡೆ ಮತದಾರರ ಪಟ್ಟಿಯಲ್ಲಿ ಸೇರಿಕೊಂಡು ಮತ ಚಲಾಯಿಸುವವರನ್ನು ಹೊರಗಿಡಲು ಎಸ್‌ಐಆರ್ ಸಹಾಯಕವಾಗಿದೆ. ನಕಲಿ ದಾಖಲೆ ಸೃಷ್ಟಿಸಿಕೊಂಡು ಅಕ್ರಮವಾಗಿ ಭಾರತದಲ್ಲಿ ವಾಸಿಸುತ್ತಿರುವ ಬಾಂಗ್ಲಾ ನುಸುಳುಕೋರರ ಮತಗಳು ಕಾಂಗ್ರೆಸ್‌ಗೆ ಲಭಿಸುವುದಿಲ್ಲ ಎಂಬ ನೋವು ಕಾಂಗ್ರೆಸ್‌ನವರನ್ನು ಕಾಡುವಂತಿದೆ ಎಂದು ಟೀಕಿಸಿದರು.
ಎಸ್‌ಐಆರ್‌ನಿಂದ ಬಿಜೆಪಿಗೆ ಅನುಕೂಲವಾಗಲಿದೆ. ಈ ಪ್ರಕ್ರಿಯೆಯಿಂದ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಜಾತಿಯವರನ್ನು ಕೈ ಬಿಡುವ ಹುನ್ನಾರ ಎಂದು ಹೇಳುತ್ತಿರುವ ಸಿದ್ಧರಾಮಯ್ಯ ಕೇರಳ ಮತ್ತು ತಮಿಳುನಾಡಿನ ಫಲಿತಾಂಶದ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಮತದಾರರ ಪಟ್ಟಿಯಲ್ಲಿ ಯಾವುದೇ ಜಾತಿ ಮತ್ತು ಧರ್ಮದ ಹೆಸರನ್ನು ಕಲೆ ಹಾಕುವುದಿಲ್ಲ. ಹಾಗಿದ್ದಾಗ ಇವರನ್ನು ಹೇಗೆ ಕೈಬಿಡಲು ಸಾಧ್ಯ ಎಂಬ ಕನಿಷ್ಠ ಜ್ಞಾನ ಸಿದ್ದರಾಮಯ್ಯ ಅವರಿಗೆ ಇಲ್ಲವೇ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರಿ ಅಧಿಕಾರಿಗಳೇ ಎಸ್‌ಐಆರ್ ಪ್ರಕ್ರಿಯೆಯನ್ನು ಕಾರ್ಯಗತ ಮಾಡುತ್ತಿದ್ದಾರೆ. ಸರ್ಕಾರಕ್ಕೆ ತಮ್ಮ ನೌಕರರ ಮೇಲೆಯೇ ನಂಬಿಕೆ ಇಲ್ಲವಾಯಿತೇ ಎಂಬ ಅನುಮಾನ ಕಾಡುತ್ತಿದೆ. 1951ರಿಂದ ಭಾರತದಲ್ಲಿ 2002ರವರೆಗೆ 9 ಬಾರಿ ಎಸ್‌ಐಆರ್ ನಡೆದಿದೆ. ಆಗ ಅಧಿಕಾರದ್ದಲ್ಲಿದ್ದ ಕಾಂಗ್ರೆಸ್ ಪಕ್ಷ ಇದರ ದುರ್ಬಳಕೆ ಮಾಡಿಕೊಂಡು ಆಡಳಿತ ನಡೆಸಿತ್ತೇ ಎಂಬ ಸಂಶಯ ಮೂಡುತ್ತಿದೆ ಎಂದರು.
ಮಾಜಿ ಮೇಯರ್ ಸುವರ್ಣಾ ಶಂಕರ್, ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಮೋಹನ್ ಜಾಧವ್, ಬಾಲು, ಶಿವಾಜಿ, ಕೆಂಪಮ್ಮ, ರಾಜಣ್ಣ, ಕುಬೇರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
ರಾಷ್ಟ್ರಭಕ್ತರ ಬಳಗದ ಬೆಂಬಲ
ಎಸ್‌ಐಆರ್ ಪ್ರಕ್ರಿಯೆಯನ್ನು ರಾಷ್ಟ್ರಭಕ್ತರ ಬಳಗ ಸ್ವಾಗತಿಸುತ್ತದೆ. ಇದಕ್ಕೆ ಎಲ್ಲ ರೀತಿಯ ಸಹಕಾರವನ್ನೂ ನೀಡಲಾಗುವುದು. ಬಳಗದ ಕಾರ್ಯಕರ್ತರು ಬಿಎಲ್‌ಒಗಳಿಗೆ ಅಗತ್ಯ ಮಾಹಿತಿ ಒದಗಿಸಲಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು. ಜವಾಬ್ದಾರಿಯುತ ನಾಗರಿಕರು ತಮ್ಮ ಸುತ್ತಮುತ್ತಲು ಅನುಮಾನಾಸ್ಪದ ಬಾಂಗ್ಲಾ ನುಸುಳುಕೋರರಿದ್ದರೆ ಅಂಥವರು ಮತದಾರರ ಪಟ್ಟಿಗೆ ಸೇರದಂತೆ ನಿಗಾ ವಹಿಸಬೇಕು ಎಂದು ಮನವಿ ಮಾಡಿದರು.