ಶಿವಮೊಗ್ಗ ಹೊರವಲಯದ ಗಾಡಿಕೊಪ್ಪ ಸರ್ಕಲ್‌ನಲ್ಲಿ ಮೂವಿಂಗ್ ಸಿಗ್ನಲ್ ಲೈಟ್ ಅಳವಡಿಸಿರುವುದು. 
ಶಿವಮೊಗ್ಗ

ಗಾಡಿಕೊಪ್ಪ ಸರ್ಕಲ್ ನಲ್ಲಿ ಸಿಗ್ನಲ್ ಲೈಟ್ ಅಳವಡಿಕೆ | Signal light

ಶಿವಮೊಗ್ಗ: ನಗರದ ಹೊರವಲಯದ ಗಾಡಿಕೊಪ್ಪ ಸರ್ಕಲ್(Gadikoppa Circle) ನಲ್ಲಿ ಸಿಗ್ನಲ್ ಲೈಟ್ ಅಳವಡಿಸಬೇಕೆಂಬ ಬಹು ವರ್ಷಗಳ ಬೇಡಿಕೆಗೆ ಪೊಲೀಸ್ ಇಲಾಖೆ(Police Department) ಸ್ಪಂದಿಸಿದ್ದು ಶುಕ್ರವಾರ ಪಶ್ಚಿಮ ಸಂಚಾರ ಠಾಣೆ ಪೊಲೀಸರು ಮೂವಿಂಗ್ ಸಿಗ್ನಲ್ ಲೈಟ್ ಅಳವಡಿಸಿದರು.
ಗಾಡಿಕೊಪ್ಪದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ಕಳೆದ ಕೆಲ ವರ್ಷಗಳ ಹಿಂದೆ ಇಲ್ಲಿ ಚತುಷ್ಪಥ ಮಾರ್ಗವಾಗಿ ಅಭಿವೃದ್ಧಿಪಡಿಸಲಾಗಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ನಡುವೆ ಸರ್ಕಾರಿ ಶಾಲೆಗೆ ಹೊಂದಿಕೊಂಡಂತಿರುವ ಸರ್ಕಲ್ನಲ್ಲಿ ಜನ, ವಾಹನ ಸಂಚಾರ ದಟ್ಟಣೆಯ ಜತೆಗೆ ಅಪಘಾತಗಳ ಪ್ರಮಾಣವೂ ಹೆಚ್ಚಿತ್ತು. ಈ ಹಿನ್ನೆಯಲ್ಲಿ ಹೆದ್ದಾರಿಯಲ್ಲಿ ಸಿಗ್ನಲ್ ಲೈಟ್(Signal Light) ಅಳವಡಿಕೆ ಸೇರಿ ವಾಹನಗಳ ವೇಗ ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿತ್ತು.
ನಾಗರಿಕರ ಒತ್ತಾಯಕ್ಕೆ ಮನ್ನಣೆ ನೀಡಿದ್ದ ಎಸ್‌ಪಿ(SP) ಬಿ. ನಿಖಿಲ್, ಸರ್ಕಲ್ನಲ್ಲಿ ಅಗತ್ಯ ಪರಿಹಾರ ಕ್ರಮಕೈಗೊಳ್ಳುವಂತೆ ಸಂಚಾರ ಠಾಣೆ ಪೊಲೀಸರಿಗೆ ಸೂಚನೆ ನೀಡಿದ್ದರು. ಅದರಂತೆ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ದೇವರಾಜ್ ಅವರು ಹಲವು ಬಾರಿ ಸರ್ಕಲ್ಗೆ ಭೇಟಿ ನೀಡಿ ಪರಿಹಾರ ಕ್ರಮಗಳ ಕುರಿತಂತೆ ಪರಿಶೀಲನೆ ನಡೆಸಿದ್ದರು. ಸ್ಥಳೀಯ ನಾಗರಿಕರ ಅಹವಾಲು ಆಲಿಸಿದ್ದರು. ಇದೀಗ ಪ್ರಾಯೋಗಿಕವಾಗಿ ಸರ್ಕಲ್ನಲ್ಲಿ ಮೂವಿಂಗ್ ಸಿಗ್ನಲ್ ಲೈಟ್ ಅಳವಡಿಕೆ ಮಾಡಿದ್ದಾರೆ.