ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
- ತೆರಿಗೆ ಪಾಲಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬ ನೆಪ
- ಸಿಎಂ ಸಿದ್ದರಾಮಯ್ಯ ಅವರು ವಿಭಜಕ ಮನಸ್ಥಿತಿಯಿಂದ ಹೊರಲಿ
- ಕಟುವಾಗಿ ಟೀಕಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
ಶಿವಮೊಗ್ಗ: ತೆರಿಗೆ(Tax) ಪಾಲಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬ ನೆಪ ಹೇಳಿಕೊಂಡು ಕೇಂದ್ರದ ವಿರುದ್ಧ ದಕ್ಷಿಣ ಭಾರತದ ಕೆಲವು ರಾಜ್ಯಗಳನ್ನು ಸಿಎಂ(Cm) ಸಿದ್ದರಾಮಯ್ಯ ಎತ್ತಿಕಟ್ಟುತ್ತಿದ್ದಾರೆ. ಆ ಮೂಲಕ ಅವರು ದಕ್ಷಿಣ ಭಾರತದ ನಾಯಕರಾಗಲು ಹೊರಟಿದ್ದಾರೆ. ಈ ವಿಭಜಿತ ಮನಸ್ಥಿತಿ ರಾಜ್ಯಕ್ಕೆ ಒಳ್ಳೆಯದಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(B.Y.Vijayendra) ಕಟುವಾಗಿ ಟೀಕಿಸಿದರು.
ಸಿಎಂ ಸಿದ್ದರಾಮಯ್ಯ ಅವರು ವಿಭಜಕ ಮನಸ್ಥಿತಿಯಿಂದ ಹೊರಬಂದು ಒಕ್ಕೂಟ ವ್ಯವಸ್ಥೆ(Federal system)ಯನ್ನು ಕಾಪಾಡುವ ನಿಟ್ಟಿನಲ್ಲಿ ಹೆಜ್ಜೆಯಿಡಬೇಕು. ವೀರಶೈವ ಲಿಂಗಾಯಿತ(Veerashaiva Lingayat)ರನ್ನು ವಿಭಜಿಸಲು ಮುಂದಾಗಿದ್ದ ಮನಸ್ಥಿತಿಯೇ ಈಗ ದೇಶದ ಒಕ್ಕೂಟ ವ್ಯವಸ್ಥೆಯ ಮೇಲೂ ದಾಳಿ ಮಾಡುವ ಮಟ್ಟಕ್ಕೆ ತಲುಪಿದೆ. ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಮಾತುಗಳು ದೇಶದ ಏಕತೆಗೆ ಧಕ್ಕೆಯಾಗುತ್ತವೆ. ಇದು ರಾಜ್ಯಕ್ಕೂ ರಾಷ್ಟ್ರಕ್ಕೂ ಅಪಾಯಕಾರಿ ರಾಜಕಾರಣವಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ಘೋಷಣೆಯಡಿ ಕಾಂಗ್ರೆಸ್(Congress) ನಡೆಸಿದ ಪ್ರತಿಭಟನೆ ಕೇವಲ ನಾಟಕವಾಗಿದ್ದು, ಗ್ಯಾರಂಟಿ(Guarantee) ಯೋಜನೆಗಳ ಹೊರೆ ತಗ್ಗಿಸಲು ಅಬಕಾರಿ ತೆರಿಗೆ ಗುರಿಯನ್ನು 40 ಸಾವಿರ ಕೋಟಿ ರೂ.ಗೆ ಏರಿಸಿದೆ ಎಂದರು.
ರಾಜ್ಯ ಸರ್ಕಾರದ ಅವ್ಯವಸ್ಥೆಯಿಂದ ಅಧಿಕಾರಿಗಳು ರಾತ್ರಿ 3 ಗಂಟೆಯವರೆಗೂ ಕೆಲಸ ಮಾಡುವಂತಾಗಿದೆ. ಇದು ಜನಪರ ಆಡಳಿತವಲ್ಲ, ಅಧಿಕಾರಿಗಳ ಮೇಲೆ ಒತ್ತಡ ಹೇರಿದ ಅರಾಜಕ ಆಡಳಿತವಾಗಿದೆ. ಈಶಾನ್ಯ ರಾಜ್ಯಗಳಿಗೆ 6 ಸಾವಿರ ಕೋಟಿ ರೂ. ಅನುದಾನ ನೀಡಿರುವುದು ಕೇಂದ್ರ ಸರ್ಕಾರದ ಬದ್ಧತೆ ತೋರಿಸುತ್ತದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಇಂತಹ ದೃಢ ನಿರ್ಧಾರಗಳೇ ಇರಲಿಲ್ಲ.