ವಿನೋಬನಗರದ ಶ್ರೀ ಶಿವಾಲಯದಲ್ಲಿ ಮನೆ-ಮನಗಳಲ್ಲಿ ಶ್ರಾವಣ ಚಿಂತನ ಕಾರ್ಯಕ್ರಮವನ್ನು ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ರುದ್ರಮುನಿ ಎನ್.ಸಜ್ಜನ್, ಶಿವಲಿಂಗ ಮೂರ್ತಿ, ಮಹಾಲಿಂಗ ಶಾಸ್ತ್ರಿ, ಚಂದ್ರಯ್ಯ, ಮಲ್ಲಿಕಾರ್ಜುನ ಸ್ವಾಮಿ, ನವೀನ್ ವಾರದ್, ಪ್ರದೀಪ್ ವಿ.ಎಲಿ, ಉಮೇಶ್ ಇದ್ದರು.
- ಶಿವಾಲಯದಲ್ಲಿ ಮನೆ-ಮನಗಳಲ್ಲಿ ಶ್ರಾವಣ ಚಿಂತನ ಕಾರ್ಯಕ್ರಮ
- ಉತ್ತಮ ಚಿಂತನೆಗಳನ್ನು ಬೆಳೆಸುವ ಅಖಂಡ ಜ್ಞಾನ ದಾಸೋಹ ಶ್ರಾವಣ ಚಿಂತನ
- ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿಕೆ
ಶಿವಮೊಗ್ಗ: ಶ್ರಾವಣ ಚಿಂತನ(Shravan Chintana)ವು ಕೇವಲ ಧಾರ್ಮಿಕ ಕಾರ್ಯಕ್ರಮವಾಗಿರದೆ ಸಮಾಜಕ್ಕೆ ಅರಿವು ಮೂಡಿಸುವ, ಬದುಕಿನ ಮೌಲ್ಯಗಳನ್ನು ತಿಳಿಸುವ ಹಾಗೂ ಉತ್ತಮ ಚಿಂತನೆಗಳನ್ನು ಬೆಳೆಸುವ ಅಖಂಡ ಜ್ಞಾನ ದಾಸೋಹವಾಗಿದೆ ಎಂದು ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ವಿನೋಬನಗರದ ಶಿವಾಲಯ(Vinobanagara Shivalaya)ದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ(Veerashaiva-Lingayat Mahasabha) ಶಿವಮೊಗ್ಗ ತಾಲೂಕು ಯುವ ಘಟಕದ ಸಹಯೋಗದಲ್ಲಿ ಮನೆ-ಮನಗಳಲ್ಲಿ ಶ್ರಾವಣ ಚಿಂತನ-2026 ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಶ್ರಾವಣ ಚಿಂತನದ ನಿರಂತರ ಪಯಣದಲ್ಲಿ ಸೇವಾಕರ್ತರು, ಉಪನ್ಯಾಸಕರು ಹಾಗೂ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಸಮಾಜದ ಅನೇಕ ಕಾರ್ಯಕ್ರಮಗಳಲ್ಲಿ ಅತಿಥಿಗಳು ಹಾಗೂ ಕಾರ್ಯಕರ್ತರಿಗೆ ಶಾಲು, ಹಾರ, ಹಣ್ಣಿನ ಬುಟ್ಟಿ ನೀಡುವ ಸಂಪ್ರದಾಯ ಹೆಚ್ಚಾಗುತ್ತಿದೆ. ಆದರೆ, ಇಂದಿನ ಕಾರ್ಯಕ್ರಮದಲ್ಲಿ ರುದ್ರಾಕ್ಷಿ, ವಿಭೂತಿ ಹಾಗೂ ಸಸಿಗಳನ್ನು ನೀಡುವ ಮೂಲಕ ಧಾರ್ಮಿಕ ಸಂಸ್ಕಾರ ಮತ್ತು ಪರಿಸರ ಕಾಳಜಿಗೆ ಆದ್ಯತೆ ನೀಡಿರುವುದು ಮಾದರಿಯಾಗಿದೆ. ಶಾಲು ಹೊದಿಸುವುದು, ಮಾಲೆ ಹಾಕುವುದು ಬೇಕಾದರೆ ಮಾಡಬಹುದು. ಆದರೆ ವಿಭೂತಿ, ರುದ್ರಾಕ್ಷಿ(Vibhuti, Rudrakshi) ನೀಡುವ ಸಂಪ್ರದಾಯವನ್ನು ಮಾತ್ರ ಮರೆಯಬಾರದು. ಅದೇ ರೀತಿ ಗಿಡ ನೀಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ನೀಡಬೇಕು. ಇಂತಹ ಪದ್ಧತಿ ಸಮಾಜದ ಎಲ್ಲ ಕಾರ್ಯಕ್ರಮಗಳಲ್ಲೂ ಬೆಳೆದುಬರಬೇಕು ಎಂದು ಕರೆ ನೀಡಿದರು.
ಪ್ರತಿ ವರ್ಷ ಶ್ರಾವಣ ಚಿಂತನದಲ್ಲಿ ವಚನಕಾರರು, ಶರಣರು, ಸಂತರು, ಶಿವಯೋಗಿಗಳು ಹಾಗೂ ಅವರ ವಿಚಾರಧಾರೆಗಳನ್ನು ಪರಿಚಯಿಸುವ ಕಾರ್ಯ ನಡೆಯುತ್ತಿದೆ. ಆದರೆ ಈ ವರ್ಷದ ವಿಶೇಷವೆಂದರೆ ಶರಣರ ವಿಚಾರಧಾರೆ(Sharanas ideology)ಯನ್ನು ಆಧರಿಸಿಕೊಂಡು ಇಂದಿನ ಜೀವನಕ್ಕೆ ಪೂರಕವಾಗುವ ನಡೆ-ನುಡಿ, ಆಚಾರ-ವಿಚಾರ, ಕುಟುಂಬ ಜೀವನ, ದಾಂಪತ್ಯ, ಶಿಕ್ಷಣ, ಮಾತಿನ ಅಳತೆ ಹಾಗೂ ಸಾಮಾಜಿಕ ಜವಾಬ್ದಾರಿ ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಲಾಗುತ್ತಿದೆ. ಹೀಗಾಗಿ ಶ್ರಾವಣ ಚಿಂತನವು ಕೇವಲ ಉಪನ್ಯಾಸ ಕಾರ್ಯಕ್ರಮವಲ್ಲ. ಅದು ನಮ್ಮ ಬದುಕನ್ನು ಪರಿಶೀಲಿಸಿಕೊಳ್ಳುವ, ತಪ್ಪುಗಳನ್ನು ತಿದ್ದಿಕೊಳ್ಳುವ ಹಾಗೂ ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಜ್ಞಾನ ದಾಸೋಹವಾಗಿದೆ ಎಂದರು.
ಇಂದು ಪರಿಸರ ಸಂರಕ್ಷಣೆಯ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಮಲೆನಾಡಿನಲ್ಲಂತೂ ಪರಿಸರಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಜನಜೀವನದ ಮೇಲೆ ಪರಿಣಾಮ ಬೀರುತ್ತಿವೆ. ಶರಾವತಿ ಯೋಜನೆಯ ಸಂದರ್ಭದಲ್ಲಿ ಅನೇಕ ಗ್ರಾಮಗಳು ಮುಳುಗಡೆಯಾಗಿ, ಸಾವಿರಾರು ಕುಟುಂಬಗಳು ಮನೆ, ಜಮೀನು ಹಾಗೂ ಆಸ್ತಿಯನ್ನು ಕಳೆದುಕೊಂಡಿವೆ. ನಾಡಿಗೆ ಬೆಳಕು ನೀಡಿದ ಪ್ರದೇಶದ ಜನರೇ ಇಂದಿಗೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ ಶ್ರೀಗಳು, ಮಂಗನ ಕಾಯಿಲೆ ಸೇರಿ ಆರೋಗ್ಯ ಸಮಸ್ಯೆಗಳು, ಶಿಕ್ಷಣದಿಂದ ವಂಚಿತವಾಗುವ ಪರಿಸ್ಥಿತಿ, ಅರಣ್ಯ ಹಾಗೂ ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳು ಇವೆ. ಶರಾವತಿ ಮುಳುಗಡೆ ಪ್ರದೇಶದ ಜನರ ಸಮಸ್ಯೆಗಳು, ವಿವಿಧ ಯೋಜನೆಗಳ ಕುರಿತಾದ ಆತಂಕಗಳು ಹಾಗೂ ಕಸ್ತೂರಿರಂಗನ್ ವರದಿಯಂತಹ ವಿಷಯಗಳು ಇಂದಿಗೂ ಚರ್ಚೆಯಲ್ಲಿವೆ. ಇವೆಲ್ಲವೂ ಮಲೆನಾಡಿನ ಜನಜೀವನದೊಂದಿಗೆ ನೇರವಾಗಿ ಸಂಬಂಧಿಸಿದ ಸಾಮಾಜಿಕ ಸಮಸ್ಯೆಗಳಾಗಿವೆ ಎಂದರು.
ಮಹಾಸಭಾ ಶಿವಮೊಗ್ಗ ಜಿಲ್ಲಾಧ್ಯಕ್ಷ ರುದ್ರಮುನಿ ಎನ್.ಸಜ್ಜನ್, ಪ್ರಮುಖರಾದ ಶಿವಲಿಂಗ ಮೂರ್ತಿ, ಮಹಾಲಿಂಗ ಶಾಸ್ತ್ರಿ, ಚಂದ್ರಯ್ಯ, ಮಲ್ಲಿಕಾರ್ಜುನ ಸ್ವಾಮಿ, ಯುವ ಘಟಕದ ಜಿಲ್ಲಾಧ್ಯಕ್ಷ ನವೀನ್ ವಾರದ್, ಪ್ರದೀಪ್ ವಿ.ಎಲಿ, ಉಮೇಶ್, ಪರಮೇಶ್, ಸುಜಾತಾ, ರುದ್ರೇಶ್, ತೇಜುಕುಮಾರ್, ವಿನೋದ್‌ರಾಜ್, ಚಂದ್ರಶೇಖರ್ ಉಪಸ್ಥಿತರಿದ್ದರು.
ಶ್ರಾವಣ ಮಾಸವು ಪವಿತ್ರವಾದ ಮಾಸ. ಈ ಸಂದರ್ಭದಲ್ಲಿ ಒಳ್ಳೆಯ ವಿಚಾರಗಳನ್ನು ಕೇಳಬೇಕು, ಚಿಂತಿಸಬೇಕು, ಚರ್ಚಿಸಬೇಕು ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿಂದಿನ ಕಾಲದಿಂದಲೂ ಹಳ್ಳಿಹಳ್ಳಿಗಳಲ್ಲಿ ಪುರಾಣ, ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಜನರಲ್ಲಿ ಉತ್ತಮ ಚಿಂತನೆ ಬೆಳೆಸುವ ಕಾರ್ಯ ನಡೆಯುತ್ತ ಬಂದಿದೆ.
— ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬೆಕ್ಕಿನಕಲ್ಮಠ