ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯುತ್ತಿರುವ ಫಲಾನುಭವಿಗಳು
- 16 ಸಾವಿರ ಪಡಿತರದಾರರ ಪಟ್ಟಿ ಸಿದ್ಧ
- ಅನರ್ಹಗೊಳಿಸಲು ನಡೆಯುತ್ತಿದೆ ಪರಿಶೀಲನೆ
- 400 ಕಾರ್ಡ್‌ಗಳು ಪುನಃ ಬಿಪಿಎಲ್ ಆಗಿ ಪರಿವರ್ತನೆ
- ಸೂಕ್ತ ದಾಖಲೆ ನೀಡಿದರಷ್ಟೇ ಬಿಪಿಎಲ್‌ಗೆ ಸೇರ್ಪಡೆ
ಗ್ಯಾರಂಟಿ ಯೋಜನೆಯ ಭಾರ ಕಡಿಮೆ ಮಾಡಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ (govermnet) ಕಳೆದೊಂದು ವರ್ಷದಿಂದ ಸಂಶಯಾಸ್ಪದ ಬಿಪಿಎಲ್ (bpl) ಕಾರ್ಡ್‌ದಾರರ ಪಟ್ಟಿ ಸಿದ್ಧಪಡಿಸುತ್ತಿದೆ. ಈಗ ಜಿಲ್ಲೆಯಲ್ಲಿ 16,507 ಬಿಪಿಎಲ್ ಪಡಿತರದಾರರನ್ನು ಎಪಿಎಲ್‌ಗೆ ಸೇರ್ಪಡೆ ಮಾಡಲಾಗಿದೆ. ಈ ಪೈಕಿ ಸರಿಯಾದ ಮಾಹಿತಿ (information) ನೀಡಿದ 400 ಪಡಿತರದಾರರು ಮತ್ತೆ ಅನ್ನಭಾಗ್ಯದ ವ್ಯಾಪ್ತಿಗೆ ಬಂದಿದ್ದಾರೆ.
ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ಸುತ್ತೋಲೆಯೊಂದಿಗೆ ಅರ್ಹತೆ ಬಗ್ಗೆ ಪರಿಶೀಲನೆ ನಡೆಸಲಾಗುವ ಕಾರ್ಡ್‌ಗಳ ವಿವರಗಳನ್ನೂ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯಿಂದ ಕಳಿಸಲಾಗಿತ್ತು. ಈ ಪಟ್ಟಿಯಲ್ಲಿರುವ ಪಡಿತರದಾರರು ಅಧಿಕಾರಿಗಳು ಕೇಳುವ ಮಾಹಿತಿ ಒದಗಿಸಿದ ಬಳಿಕವಷ್ಟೇ ಅವರು ಹೊಂದಿರುವ ಬಿಪಿಎಲ್ ಕಾರ್ಡ್‌ನ ನೈಜತೆ ಸ್ಪಷ್ಟವಾಗಿದೆ.
ಮಾರ್ಗಸೂಚಿಗಳನ್ನು ಮೀರಿ ಬಿಪಿಎಲ್ ಕಾರ್ಡ್ ಹೊಂದಿದವರನ್ನು ಎಪಿಎಲ್ ವ್ಯಾಪ್ತಿಗೆ ಪರಿವರ್ತಿಸಲಾಗಿದೆ. ಒಟ್ಟು 11 ಮಾನದಂಡಗಳನ್ನು ಅನುಸರಿಸಿ 16,507 ಪಡಿತರದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಈ ನಡುವೆ ಮುಂದೆ ದಂಡ ಪ್ರಯೋಗ, ಕೇಸು ತಪ್ಪಿಸಿಕೊಳ್ಳುವ ಸಲುವಾಗಿ ಕೆಲವರು ಸ್ವಯಂಪ್ರೇರಿತರಾಗಿ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿಕೊಂಡಿದ್ದಾರೆ.
ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತನೆಯಾದ ಪಟ್ಟಿಯಲ್ಲಿರುವವರ ವಿವರ
ಆದಾಯ ತೆರಿಗೆ ಇಲಾಖೆಗೆ ವಾರ್ಷಿಕ ಆದಾಯದ ಮಾಹಿತಿ ನೀಡಿದವರು- 15,365 ಮಂದಿ
ಜಿಎಸ್‌ಟಿ ನೋಂದಣಿ ಮಾಡಿಕೊಂಡು ವಾರ್ಷಿಕ 25 ಲಕ್ಷ ರೂ. ವಹಿವಾಟು ಮಾಡಿದವರು- 43
ಕಂಪನಿ ಕಾಯ್ದೆಯಡಿ ನೋಂದಣಿ ಮಾಡಿಕೊಂಡು ನಿರ್ದೇಶಕರು ಎನಿಸಿಕೊಂಡವರು- 414
ಬೇರೆ ರಾಜ್ಯ ಹಾಗೂ ಕರ್ನಾಟಕದ ಬೇರೆ ಜಿಲ್ಲೆಯಲ್ಲಿ ಕಾರ್ಡ್ ಹೊಂದಿದವರು- 157
ಒಂದು ವರ್ಷದಿಂದಲೂ ಪಡಿತರವನ್ನೇ ಪಡೆಯದ ಬಿಪಿಎಲ್ ಪಡಿತರದಾರರು- 204
100 ವರ್ಷ ಮೇಲ್ಪಟ್ಟ ಪಡಿತರದಾರರು- 29
ಸತತ ಆರು ತಿಂಗಳಿನಿಂದ ಪಡಿತರ ಪಡೆಯದವರು- 55
ಬಿಪಿಎಲ್ ಕಾರ್ಡ್ ಹೊಂದಿದ 18 ವರ್ಷದೊಳಗಿನವರು- 10
7.5 ಎಕರೆ ಜಮೀನು ಹೊಂದಿ ಪಿಎಂ ಕಿಸಾನ್ ಪಡೆದವರು- 212
ಬಾಡಿಗೆಯ ಲಘು ಮೋಟಾರು ವಾಹನ ಹೊಂದಿದವರು- 2
ಪತ್ತೆಯಾಗಿದ್ದು ಹೇಗೆ?
ಬಿಪಿಎಲ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಿಸಲಾಗಿತ್ತು. ಆಧಾರ್ ಮೂಲಕ ಪಾನ್ ಕಾರ್ಡ್‌ನ ವಿವರ ಆಹಾರ ಸರಬರಾಜು ಇಲಾಖೆಗೆ ಸಿಕ್ಕಿತು. ಅದರೊಂದಿಗೆ ಆರ್ಥಿಕ ಹಾಗೂ ತೆರಿಗೆ ವ್ಯವಹಾರಗಳು ಬಯಲಿಗೆ ಬಂದವು. ಈಗ ಅದರ ಆಧಾರದಲ್ಲಿ ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆಗೆ ಸರ್ಕಾರ ಮುಂದಾಯಿತು. ಈ ಪ್ರಕ್ರಿಯೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಡಿತರದಾರರು ಬಿಪಿಎಲ್ ಕಾರ್ಡ್ ಕಳೆದುಕೊಳ್ಳುವ ಸಾಧ್ಯತೆಗಳಿವೆ.
ಎಫ್‌ಪಿಒನಿಂದ ಕಾರ್ಡ್‌ಗೆ ಕುತ್ತು
ಜಿಲ್ಲೆಯ 414 ಮಂದಿ ರೈತರು ಎಫ್‌ಪಿಒ(ರೈತ ಉತ್ಪಾದಕ ಒಕ್ಕೂಟ) ಸೇರಿ ಬಿಪಿಎಲ್ ಕಾರ್ಡ್‌ಗೆ ಆಪತ್ತು ತಂದುಕೊಂಡಿದ್ದಾರೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಕಂಪನಿ ಕಾಯ್ದೆಯಡಿ ಎಫ್‌ಪಿಒ ರಚನೆ ಮಾಡಲಾಯಿತು. ಅದರ ಸದಸ್ಯರನ್ನು ನಿರ್ದೇಶಕರು ಎಂದು ನೋಂದಣಿ ಮಾಡಲಾಯಿತು. ಯಾವುದೇ ಕಂಪನಿಗೆ ನಿರ್ದೇಶಕ ಎನಿಸಿಕೊಂಡವರು ಮಾರ್ಗಸೂಚಿ ಪ್ರಕಾರ ಬಿಪಿಎಲ್ ಕಾರ್ಡ್ ಹೊಂದುವಂತಿಲ್ಲ. ಈಗ ಇದನ್ನು ಸೂಕ್ಷ್ಮವಾಗಿ ಗಮನಿಸಿ ಇಂತಹ ಪಡಿತರದಾರರನ್ನು ಬಿಪಿಎಲ್‌ನಿಂದ ಕೈಬಿಡಬೇಕೆ ಅಥವಾ ಮುಂದುವರಿಸಬೇಕೆ ಎಂಬ ಪರಿಶೀಲನೆ ಆಹಾರ ಇಲಾಖೆಯಿಂದ ನಡೆಯುತ್ತಿದೆ.
ಐಟಿ ಫೈಲ್ ಮಾಡಿದವರೇ ಹೆಚ್ಚು
ಜಿಲ್ಲೆಯಲ್ಲಿ 16,507 ಸಂಶಯಾಸ್ಪದ ಬಿಪಿಎಲ್ ಪಡಿತರದಾರರ ಪಟ್ಟಿ ಸಿದ್ಧವಾಗಿದ್ದರೆ ಇದರಲ್ಲಿ 15,365 ಮಂದಿ ಐಟಿ ಫೈಲ್ ಮಾಡಿದ ಕಾರಣಕ್ಕೆ ಅನರ್ಹತೆ ಭೀತಿ ಎದುರಿಸುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ವಾರ್ಷಿಕ 1.20 ಲಕ್ಷ ರೂ. ಆದಾಯ ಮೀರಿದವರು ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶವಿಲ್ಲ. ಆದರೆ ಐಟಿ ಫೈಲ್ ಮಾಡಿರುವ ಬಿಪಿಎಲ್ ಪಡಿತರದಾರರು 4.99 ಲಕ್ಷದವರೆಗೂ ಆದಾಯ ತೋರಿಸಿದ್ದಾರೆ. ಭವಿಷ್ಯದಲ್ಲಿ ಬ್ಯಾಂಕ್‌ನಿಂದ ಗೃಹ ಸಾಲ ಮತ್ತಿತರ ಸೌಲಭ್ಯ ಪಡೆಯಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಪ್ರತಿ ವರ್ಷ ಐಟಿ ಫೈಲ್ ಮಾಡಿದವರು ಈಗ ಎಪಿಎಲ್‌ಗೆ ಪರಿವರ್ತನೆಯಾಗುವ ಆತಂಕದಲ್ಲಿದ್ದಾರೆ.
ಬೇರೆ ರಾಜ್ಯಗಳಲ್ಲಿ ಹಾಗೂ ಬೇರೆ ಜಿಲ್ಲೆಗಳಲ್ಲಿ ಪಡಿತರ ಚೀಟಿ ಹೊಂದಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ನೆಲೆಸಿದ ಬಳಿಕ ಇಲ್ಲಿಯೂ ಬಿಪಿಎಲ್ ಕಾರ್ಡ್ ಹೊಂದಿದವರನ್ನು ಪತ್ತೆ ಮಾಡಲಾಗಿದೆ. ಇಂಥವರ ಸಂಖ್ಯೆ 157. ಇವರ ಪೈಕಿ ತಮಿಳುನಾಡು, ಆಂಧ್ರ, ತೆಲಂಗಾಣ ಹಾಗೂ ಕೇರಳದವರೇ ಹೆಚ್ಚು. ಒಂದು ವೇಳೆ ಇವರು ತಮ್ಮ ರಾಜ್ಯದಲ್ಲಿದ್ದ ಕಾರ್ಡ್ ರದ್ದು ಮಾಡಿಸಿಕೊಂಡಿದ್ದರೆ ಅನರ್ಹತೆಯ ತೂಗುಕತ್ತಿಯಿಂದ ಪಾರಾಗುತ್ತಿದ್ದರು.
ಶತಾಯುಷಿಗಳಿಗೂ ತೊಂದರೆ
ಜಿಲ್ಲೆಯಲ್ಲಿ 100 ಹಾಗೂ ಅದಕ್ಕಿಂತ ಹೆಚ್ಚಿನ ವಯೋಮಿತಿಯ 29 ಮಂದಿ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಇವರು ಆಧಾರ್ ಕಾರ್ಡ್‌ಗಳನ್ನು ಅಪ್‌ಡೇಟ್ ಮಾಡಿಲ್ಲ. ಇವರನ್ನೂ ಅನರ್ಹರ ಪರಿಶೀಲನೆ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಶತಾಯುಷಿಗಳಿಗೂ ತೊಂದರೆಯಾಗಿದೆ. ಒಂದು ವೇಳೆ ಪಡಿತರದಾರರು ಮರಣ ಹೊಂದಿದ್ದು ಅವರ ಪಾಲಿನ ಪಡಿತರ ದುರುಪಯೋಗವಾಗುತ್ತಿರಬಹುದು ಎಂಬ ಸಂದೇಹ ಸರ್ಕಾರದ್ದು.
ರಾಜ್ಯ ಸರ್ಕಾರದ ಸೂಚನೆಯಂತೆ ಅನರ್ಹಗೊಳಿಸಬಹುದಾದ ಬಿಪಿಎಲ್ ಪಡಿತರ ಚೀಟಿಗಳನ್ನು ಗುರುತಿಸಲಾಗಿದೆ. ಅದರ ವಿವರಗಳನ್ನು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಿಗೆ ಕಳಿಸಲಾಗಿದೆ. ಆದರೆ ತಮ್ಮ ಅರ್ಹತೆಯನ್ನು ದೃಢಪಡಿಸಲು ಪಡಿತರದಾರರಿಗೆ ಒಮ್ಮೆ ಅವಕಾಶ ನೀಡಲಾಗುತ್ತದೆ. ಇದುವರೆಗೆ ಸುಮಾರು 400 ಮಂದಿ ಅಗತ್ಯ ದಾಖಲೆ ಸಲ್ಲಿಸಿ ಬಿಪಿಎಲ್ ಕಾರ್ಡ್ ಉಳಿಸಿಕೊಂಡಿದ್ದಾರೆ.