ಫಲಪುಷ್ಪಗಳಿಂದ ವಿಶೇಷವಾಗಿ ಅಲಂಕೃತಗೊಂಡ ಶಿವಮೊಗ್ಗದ ಕೋಟೆ ಮಾರಿಕಾಂಬ ದೇವಾಲಯದ ಪ್ರಾಂಗಣ. 
ಶಿವಮೊಗ್ಗ

ನಾಳೆಯಿಂದ ಶಿವಮೊಗ್ಗ ಮಾರಿಕಾಂಬೆ ಜಾತ್ರೋತ್ಸವ I shivamogga marikambe

ಪ್ರಮುಖ ಮುಖ್ಯಾಂಶಗಳು

  • ಕೋಟೆ ರಸ್ತೆ ದೇಗುಲದಲ್ಲಿ ವಿಶೇಷ ಅಲಂಕಾರ
  • ಪ್ರತಿದಿನ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ
  • ಭಕ್ತರು ಸರದಿಯಲ್ಲಿ ನಿಲ್ಲಲು ಜರ್ಮನ್ ಟೆಂಟ್ ನೆರಳು
ಶಿವಮೊಗ್ಗ: ಎರಡು ವರ್ಷಕ್ಕೊಮ್ಮೆ ಶಿವಮೊಗ್ಗ (shivamogag) ದಲ್ಲಿ ನಡೆಯುವ ಶಕ್ತಿ ದೇವತೆ ಮಾರಿಕಾಂಬೆ (marikambe) ಜಾತ್ರೆಗೆ ಸಿದ್ಧತೆಗಳು ಪೂರ್ಣವಾಗಿದ್ದು, ಫೆ.24ರಿಂದ 28ರವರೆಗೆ ಅದ್ದೂರಿಯಾಗಿ ನಡೆಯಲಿದೆ. ಕೋಟೆ ರಸ್ತೆಯ ಮಾರಿಕಾಂಬೆ ದೇವಸ್ಥಾನ (temple) ದ ಮುಂಭಾಗ ವಿಶೇಷ (special) ಅಲಂಕಾರ ಮಾಡಿರುವುದು ಜನಾಕರ್ಷಣೀಯವಾಗಿದೆ.
ದೇವಿ ದರ್ಶನಕ್ಕಾಗಿ ಸರದಿಯಲ್ಲಿ ನಿಲ್ಲುವವರಿಗೆ ಅನುಕೂಲವಾಗುವಂತೆ ನೆರಳಿಗಾಗಿ ಬಿ.ಎಚ್ ರಸ್ತೆ ಹಾಗೂ ಗಾಂಧಿ ಬಜಾರ್‌ನಲ್ಲಿ ಶಾಮಿಯಾನ ಅಳವಡಿಸಲಾಗಿದೆ. ಎಲ್ಲ ಕಡೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಜಾತ್ರೆಯ ಅಷ್ಟೂ ದಿನ ಸಂಜೆ ರಾಮಣ್ಣ ಶ್ರೇಷ್ಠಿ ಪಾರ್ಕ್ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಾತ್ರೆಯ ಸಿದ್ಧತೆ ಭಾಗವಾಗಿ ಗಾಂಧಿ ಬಜಾರಿನ ತವರು ಮನೆಯಲ್ಲಿ ಹಾಗೂ ದೇವಾಲಯದ ಬಳಿ (ಗಂಡನಮನೆ) ಆಕರ್ಷಕವಾದ ಮಂಟಪ ನಿರ್ಮಿಸಲಾಗಿದೆ. ಸುಮಾರು 14 ಅಡಿ ಎತ್ತರದ ಮಾರಿಕಾಂಬೆ ದೇವಿಗೆ ನಾಲ್ಕು ರೇಷ್ಮೆ ಸೀರೆಗಳನ್ನು ಬಳಸಿ ಶೃಂಗಾರಮಾಡಿ, ಪೂಜೆಗೆ ಅಣಿಗೊಳಿಸಲಾಗಿದೆ. ಈ ಜಾತ್ರೆ 8 ಸಮುದಾಯಗಳ ಬಾಬುದಾರರು ಒಳಗೊಂಡಂತೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಜಾತ್ರೆಯನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸುವುದು ವಿಶೇಷ.
ಏ.24ರ ಬೆಳಗ್ಗೆ 5ಕ್ಕೆ ಬಿಬಿ ರಸ್ತೆಯಲ್ಲಿನ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬದವರು ದೇವಿಗೆ ಪೂಜೆ ಸಲ್ಲಿಸುತ್ತಾರೆ. ನಂತರ ಮುತ್ತೈದೆಯರು ಮಂಗಳ ದ್ರವ್ಯಾದಿಗಳೊಂದಿಗೆ ಮೆರವಣಿಗೆಯಲ್ಲಿ ಬಾಸಿಂಗದೊಂದಿಗೆ ಗಾಂಧಿ ಬಜಾರಿನ ತವರು ಮನೆಯಲ್ಲಿರುವ ಮಾರಿಕಾಂಬೆಗೆ ಉಡಿತುಂಬಿ, ಪೂಜೆ ಸಲ್ಲಿಸುವರು.
ನಂತರ ವಿಶ್ವಕರ್ಮ ಸಮಾಜದವರು ಸಾರ್ವಜನಿಕವಾಗಿ ಪೂಜೆ ಆರಂಭಿಸುತ್ತಾರೆ. ರಾತ್ರಿ 9ರ ನಂತರ ಮಾರಿಕಾಂಬೆಯನ್ನು ರಥದಲ್ಲಿ ಕೂರಿಸಿ, ಮೆರವಣಿಗೆಯೊಂದಿಗೆ ಉಪ್ಪಾರ ಸಮಾಜದವರು ಗದ್ದುಗೆವರೆಗೂ ತರುತ್ತಾರೆ. ಈ ಮಧ್ಯೆ ಗಂಗಾಪರಮೇಶ್ವರಿ ದೇವಸ್ಥಾನದಿಂದ ಗಂಗೆ ಪೂಜೆಯೊಂದಿಗೆ ಅಮ್ಮನವರನ್ನು ಮಂಗಳವಾದ್ಯದೊಂದಿಗೆ ಎದುರುಗೊಂಡು ಗಂಗಾಮತಸ್ಥ ಸಮಾಜದವರು ಪೂಜೆ ಸಲ್ಲಿಸಿ, ಅಮ್ಮನವರ ಉತ್ಸವ ಮುಂದುವರಿಯಲು ಅವಕಾಶ ಕಲ್ಪಿಸಿಕೊಡುತ್ತಾರೆ.

ಸರದಿಯಲ್ಲಿ ಎರಡು ಸಾಲು

ಗಾಂಧಿಬಜಾರ್ ಮತ್ತು ಅಮ್ಮನವರ ಗದ್ದುಗೆ ಎರಡೂ ಸ್ಥಳಗಳಲ್ಲಿ ದೇವಿಯ ದರ್ಶನ ಪಡೆಯಲು ಅಂಗವಿಕಲರು ಹಾಗೂ ಗಣ್ಯ ವ್ಯಕ್ತಿಗಳಿಗೆ ಪ್ರತ್ಯೇಕವಾಗಿ ಎರಡು ಸಾಲುಗಳನ್ನು ನಿರ್ಮಿಸಲಾಗಿದೆ. ನೂಕುನುಗ್ಗಲು ತಡೆಯಲು ಬ್ಯಾರಿಕೇಡ್ ಅಳವಡಿಸಲಾಗಿದೆ. ವಿಶೇಷ ದರ್ಶನಕ್ಕೆ ಗಾಂಧಿ ಬಜಾರ್ ಪ್ರವೇಶ ದ್ವಾರದಲ್ಲಿ ಟಿಕೆಟ್ ಕೌಂಟರ್ ತೆರೆಯಲಾಗಿದೆ. ಸೋಮವಾರ ಬೆಳಗ್ಗೆಯಿಂದಲೇ ಕೋಟೆ ಮಾರಿಕಾಂಬ ದೇವಾಲಯಕ್ಕೆ ಸಂಪರ್ಕಿಸುವ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಇದರಿಂದ ಹಳೇ ಶಿವಮೊಗ್ಗ ಭಾಗದಲ್ಲಿ ವಾಹನ ಸಂಚಾರದಲ್ಲಿ ಭಾರಿ ವ್ಯತ್ಯಯವಾಗಿದೆ.


ದೇವಾಲಯದಲ್ಲಿ ಅಲಂಕಾರ

ಪ್ರತಿ ವರ್ಷದ ಜಾತ್ರೆಯಂತೆ ಈ ವರ್ಷವೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಶ್ರೀಕಾಂತ್ ಸಹಕಾರದಲ್ಲಿ ಮಾರಿಕಾಂಬ ದೇವಾಲಯವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಸುಮಾರು 10 ಸಾವಿರ ಗುಲಾಬಿ ಹೂಗಳನ್ನು ಬಳಸಲಾಗಿದೆ. ಫಲ-ಪುಷ್ಪ ಅಲಂಕಾರಗಳಿಂದ ದೇವಾಲಯ ಕಂಗೊಳಿಸುತ್ತಿದೆ. ಬೆಂಗಳೂರಿನಿಂದ ಆಗಮಿಸಿರುವ ಸಂಸ್ಥೆಯೊಂದರ 50ಕ್ಕೂ ಹೆಚ್ಚು ಕುಶಲ ಕರ್ಮಿಗಳು ಎರಡು-ಮೂರು ದಿನಗಳ ಕಾಲ ಶ್ರಮವಹಿಸಿ ಕಲ್ಲಂಗಡಿ, ಕಬ್ಬು , ಮೂಸಂಬಿ, ಹೂವನ್ನು ಬಳಸಿ ಅಲಂಕಾರ ಮಾಡಿದ್ದಾರೆ. ಗಾಂಧಿ ಬಜಾರ್ ಪ್ರವೇಶ ದ್ವಾರದಲ್ಲಿ ಕಾಳಿಕಾಂಬೆಯ ಕಲಾಕೃತಿ ಎಲ್ಲರ ಗಮನಸೆಳೆಯುತ್ತಿದೆ. ರಾತ್ರಿ ವೇಳೆ ಈ ಕಲಾಕೃತಿಯ ಮುಂದೆ ನಿಂತು ನಾಗರಿಕರು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.