ರಾಜ್ಯಕ್ಕೆ ತೃತೀಯ ರ‌್ಯಾಂಕ್ ಪಡೆದ ಪ್ರಿಯದರ್ಶಿನಿ ಶಾಲೆ ವಿದ್ಯಾರ್ಥಿನಿ ಕೃತಿ ಅವರನ್ನು ಶಾಲೆ ಪ್ರಾಚಾರ್ಯೆ ಸುನೀತಾದೇವಿ, ಕಾರ್ಯದರ್ಶಿ ಎನ್.ರಮೇಶ್ ಅಭಿನಂದಿಸಿದರು.
- ಜಿಲ್ಲೆಗೆ ಈ ಬಾರಿ ಶೇ.96.56 ಫಲಿತಾಂಶ
- ತೀರ್ಥಹಳ್ಳಿಯ ಅನಘಾ ರಾಜ್ಯಕ್ಕೆ ದ್ವಿತೀಯ
- ಶಿವಮೊಗ್ಗದ ಕೃತಿ ಮೂರನೇ ರ‌್ಯಾಂಕ್
ಶಿವಮೊಗ್ಗ: ಎಸ್‌ಎಸ್‌ಎಲ್‌ಸಿ (sslc) ಪರೀಕ್ಷೆಯಲ್ಲಿ ಈ ಬಾರಿ ಶಿವಮೊಗ್ಗ ಜಿಲ್ಲೆಗೆ ಶೇ.96.56 ಫಲಿತಾಂಶ (result)ಲಭಿಸಿದೆ. ಕಳೆದ ವರ್ಷ ಶೇ.88.66 ಪಡೆದಿದ್ದ ಶಿಕ್ಷಣ ಸಚಿವರ ಜಿಲ್ಲೆ ಈ ಬಾರಿ ಅತ್ಯುತ್ತಮ ಸಾಧನೆ ಮಾಡಿದೆ. ಪರೀಕ್ಷೆ ಎದುರಿಸಿದ 21, 692 ವಿದ್ಯಾರ್ಥಿಗಳ ಪೈಕಿ 20,945 ವಿದ್ಯಾರ್ಥಿಗಳು (students) ಉತ್ತೀರ್ಣರಾಗಿದ್ದಾರೆ. ಈ ಬಾರಿ ಶೇಕಡವಾರು ಫಲಿತಾಂಶ ಉತ್ತಮವಾಗಿದ್ದರೂ 9ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಬಾರಿ ನಾಲ್ಕನೇ ಸ್ಥಾನ ಗಳಿಸಿತ್ತು.
ತೀರ್ಥಹಳ್ಳಿ ವಾಗ್ದೇವಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಕೆ.ಎಸ್.ಅನಘಾ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ, ಜಿಲ್ಲೆಗೆ ಮೊದಲಿಗಳಾಗಿ ಸಾಧನೆ ಮಾಡಿದ್ದಾಳೆ. ಶಿವಮೊಗ್ಗದ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಪಿ.ಎಸ್.ಕೃತಿ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಶಿವಮೊಗ್ಗ ಆಲ್ಕೊಳ ವಿಕಾಸ ಶಾಲೆ ವಿದ್ಯಾರ್ಥಿ ಚಿತ್ಸುಕಿ ಆರ್.ನಾಡಿಗ್ 621 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾನೆ. ಡಿವಿಎಸ್ ಪ್ರೌಢಶಾಲೆ ವಿದ್ಯಾರ್ಥಿನಿ ಕೆ.ಪಿ.ಶಾಂಭವಿ 620 ಅಂಕ ಪಡೆದಿದ್ದಾಳೆ.
ಕಳೆದ ವರ್ಷ ಶೇ.88.66 ಫಲಿತಾಂಶ, 2024ರಲ್ಲಿ ಶೇ.88.67, 2023ರಲ್ಲಿ ಶೇ. 84.23, 2022ರಲ್ಲಿ ಶಿವಮೊಗ್ಗ 26ನೇ ಸ್ಥಾನ ಪಡೆದಿತ್ತು. 2021ರಲ್ಲಿ ಕರೊನಾ ಕಾರಣದಿಂದ ಎಸ್‌ಎಸ್‌ಎಲ್‌ಸಿಯ ಎಲ್ಲ ವಿದ್ಯಾರ್ಥಿಗಳನ್ನೂ ಉತ್ತೀರ್ಣ ಮಾಡಲಾಗಿತ್ತು. 2020ರಲ್ಲಿ ಜಿಲ್ಲೆ 18ನೇ ಸ್ಥಾನದಲ್ಲಿತ್ತು. 2019ರ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆ ಶೇ. 79.13 ಫಲಿತಾಂಶದೊಂದಿಗೆ ರಾಜ್ಯದಲ್ಲಿ 21ನೇ ಸ್ಥಾನದಲ್ಲಿತ್ತು. ಅದಕ್ಕೂ ಮುನ್ನ 2018ರಲ್ಲಿ 20ನೇ ಹಾಗೂ 2017ರಲ್ಲಿ 15ನೇ ಸ್ಥಾನ ಪಡೆದಿತ್ತು. ಕಳೆದೊಂದು ದಶಕದ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಶೇಕಡವಾರು ಫಲಿತಾಂಶ ಉತ್ತಮವಾಗಿದೆ.
ಪೂರ್ಣಾಂಕ ಯಾರಿಗೂ ಇಲ್ಲ
ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಿವಮೊಗ್ಗದ ಮೂವರು ಔಟ್ ಆಫ್ ಔಟ್ ಅಂಕ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದರು. ಆದರೆ ಈ ವರ್ಷ ಯಾರೂ ಈ ಸಾಧನೆ ಮಾಡಿಲ್ಲ. ಇಬ್ಬರು ವಿದ್ಯಾರ್ಥಿನಿಯರು ಕೂದಲೆಳೆ ಅಂತರದಲ್ಲಿ 625 ಅಂಕ ಪಡೆಯುವ ಅವಕಾಶವನ್ನು ತಪ್ಪಿಸಿಕೊಂಡಿದ್ದಾರೆ. 624 ಅಂಕ ಪಡೆದಿರುವ ತೀರ್ಥಹಳ್ಳಿಯ ಕೆ.ಎಸ್.ಅನಘಾ ಸಮಾಜ ವಿಜ್ಞಾನ ವಿಭಾಗದಲ್ಲಿ ಒಂದು ಅಂಕ ಕಳೆದುಕೊಂಡಿದ್ದು, ಮರುಮೌಲ್ಯಮಾಪನದ ಮೊರೆ ಹೋಗುವ ಬಗ್ಗೆ ಚಿಂತನೆ ನಡೆಸುವುದಾಗಿ ಹೇಳಿದ್ದಾಳೆ.