ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯಲ್ಲಿ ಪಶುಪಾಲನಾ ಇಲಾಖೆಯಿಂದ ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ನೀಡುತ್ತಿರುವುದು.
- ಕಾಲುಬಾಯಿ ಲಸಿಕೆ ಅಭಿಯಾನದಲ್ಲಿ 455 ಸಿಬ್ಬಂದಿ ನಿರತ
- ಮಲೆನಾಡಿನಲ್ಲಿ 4.74 ಲಕ್ಷ ಜಾನುವಾರುಗಳಿಗೆ ಲಸಿಕೆ
- ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣದಡಿ ಅಭಿಯಾನ
ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಪಶುಪಾಲನಾ ಇಲಾಖೆ ಕೈಗೊಂಡಿದ್ದ 8ನೇ ಹಂತದ ಲಸಿಕಾ ಅಭಿಯಾನ(Vaccination campaign) ಬಹುತೇಕ ಪೂರ್ಣಗೊಂಡಿದ್ದು, ರಾಜ್ಯದಲ್ಲಿ ಶಿವಮೊಗ್ಗ(shivamogga) 9ನೇ ಸ್ಥಾನ ಪಡೆದಿದೆ. ಮಲೆನಾಡಿನಲ್ಲಿ ಅನೇಕ ಅಡ್ಡಿ-ಆತಂಕ, ರೈತರ ಅಸಹಕಾರ ನಡುವೆಯೂ ಇಲಾಖೆ 4.74 ಲಕ್ಷಕ್ಕೂ ಅಧಿಕ
ಜಾನುವಾರುಗಳಿಗೆ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದೆ.ರಾಜ್ಯಾದ್ಯಂತ ಪಶುಪಾಲನಾ ಇಲಾಖೆ(Animal Husbandry Department)ಯು ನ.3ರಿಂದ ಡಿ.2ರವರೆಗೆ ಕಾಲುಬಾಯಿ ರೋಗದ ವಿರುದ್ಧ ಹೋರಾಡುವ ಲಸಿಕೆಯನ್ನು ಜಾನುವಾರುಗಳಿಗೆ ನೀಡಲು ಅಭಿಯಾನ ಹಮ್ಮಿಕೊಂಡಿತ್ತು. ಶಿವಮೊಗ್ಗ ಜಿಲ್ಲೆಯ ಪಶು ಇಲಾಖೆಯು ಶೇ. 96ರಷ್ಟು ಗುರಿ ಸಾಧಿಸುವ ಮೂಲಕ ಗಮನ ಸೆಳೆದಿದೆ.
ಜಿಲ್ಲೆಯಲ್ಲಿ 4,94,428 ಜಾನುವಾರು(Livestock)ಗಳಿದ್ದು, ಒಂದೇ ತಿಂಗಳಲ್ಲಿ 4,74,817 ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ಗರ್ಭ ಧರಿಸಿದ, ಗಂಟು ರೋಗಕ್ಕೆ ತುತ್ತಾಗಿರುವ ಜಾನುವಾರುಗಳನ್ನು ಹೊರತುಪಡಿಸಿ ಕಾಲುಬಾಯಿ ಲಸಿಕೆಯನ್ನು ನೀಡಿದೆ. ಬಾಕಿ ಉಳಿದಿರುವ ಜಾನುವಾರುಗಳಿಗೂ ಮುಂದಿನ ತಿಂಗಳು ಮತ್ತೆ ರೈತರ ಮನವೊಲಿಸಿ ಲಸಿಕೆ ನೀಡಲು ಪಶುಪಾಲನಾ ಇಲಾಖೆ ಚಿಂತನೆ ನಡೆಸಿದೆ.
ಮಲೆನಾಡು ಗಿಡ್ಡ(malenaadu gidda)ತಳಿಗಳದ್ದೆ ಸಮಸ್ಯೆ: ಜಿಲ್ಲೆಯಲ್ಲಿ ಬಹುತೇಕ ಎಚ್‌ಎಫ್ ಮಾದರಿ ಜಾನುವಾರುಗಳಿವೆ. ಆದರೆ ಸಾಗರ, ಹೊಸನಗರ, ತೀರ್ಥಹಳ್ಳಿ ತಾಲೂಕಿನಲ್ಲಿ ಮಲೆನಾಡು ಗಿಡ್ಡ ತಳಿಯ ಜಾನುವಾರುಗಳು ಅಧಿಕವಾಗಿವೆ. ಅವುಗಳಿಗೆ ಲಸಿಕೆ ನೀಡುವುದು ಸಿಬ್ಬಂದಿಗೆ ದೊಡ್ಡ ಸವಾಲಿನ ಕೆಲಸವಾಗಿತ್ತು. ಎಚ್‌ಎಫ್(HF)ಹಸು, ಕರುಗಳಿಗೆ ಒಬ್ಬರೇ ಲಸಿಕೆ ನೀಡುವರು. ಆದರೆ ಮಲೆನಾಡು ಗಿಡ್ಡ ತಳಿ ಜಾನುವಾರುಗಳು ಸಣ್ಣದಾಗಿದ್ದರೂ ಅವುಗಳಿಗೆ ಲಸಿಕೆ ನೀಡುವುದು ಕಷ್ಟಕರವಾವಾಗಿತ್ತು. ರೈತರು ಮನೆಗಳಲ್ಲಿ ಇದ್ದರೆ ಮಾತ್ರ ಅವುಗಳನ್ನು ಹಿಡಿದು ಲಸಿಕೆ ನೀಡಬಹುದು. ಇಲ್ಲವಾದರೆ ಸವಾಲಿನಿಂದ ಕೂಡಿರುತ್ತದೆ ಎನ್ನುತ್ತಾರೆ ಸಿಬ್ಬಂದಿ.
ಕೆಲವೆಡೆ ರೈತರ ಅಸಹಕಾರ
ಜಿಲ್ಲೆಯಲ್ಲಿ ಶೇ. 96ರಷ್ಟು ಲಸಿಕೆ ಕಾರ್ಯ ಪೂರ್ಣವಾಗಿದ್ದರೂ ಅಭಿಯಾನಕ್ಕೆ ರೈತರ ಅಸಹಕಾರ ಇದೆ. ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಗೆ ಹಾಕಿಸಲು ರೈತರು ನೂರೆಂಟು ಪ್ರಶ್ನೆಗಳನ್ನು ಕೇಳುತ್ತಾರೆ. ಲಸಿಕೆ ಹಾಕುವುದರಿಂದ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ ಎಂಬ ಕಲ್ಪನೆ ಹಲವರಲ್ಲಿದೆ. ಆ ಕಾರಣಕ್ಕೂ ಕೆಲವರು ಉಚಿತವಾಗಿದ್ದರೂ ಲಸಿಕೆ ಬೇಡ ಎಂದು ನಿರಾಕರಿಸುತ್ತಾರೆ. ಆದರೂ ಪಶುಇಲಾಖೆ ಸಿಬ್ಬಂದಿ ರೈತರ ಮನವೊಲಿಸಿ ಲಸಿಕೆ ನೀಡಿ ಗುರಿ ಸಾಧಿಸುವಲ್ಲಿ ಯಶಸ್ಸು ಕಂಡಿದ್ದಾರೆ.
ಪ್ರತಿ ಲಸಿಕೆಗೆ 5 ರೂ. ಪ್ರೋತ್ಸಾಹಧನ
ಪಶು ಇಲಾಖೆಯಿಂದ ಒಂದು ತಿಂಗಳು ನಿರಂತರವಾಗಿ ನಡೆದ ಅಭಿಯಾನದಲ್ಲಿ 455 ಲಸಿಕಾದಾರರು ಪಾಲ್ಗೊಂಡಿದ್ದರು. ಭದ್ರಾವತಿ ತಾಲೂಕಿನಲ್ಲಿ 63, ಹೊಸನಗರ ತಾಲೂಕಿನಲ್ಲಿ 54, ಸಾಗರ ತಾಲೂಕಿನಲ್ಲಿ 70, ಶಿಕಾರಿಪುರ ತಾಲೂಕಿನಲ್ಲಿ 74, ಶಿವಮೊಗ್ಗ ತಾಲೂಕಿನಲ್ಲಿ 89, ಸೊರಬ ತಾಲೂಕಿನಲ್ಲಿ 45 ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ 59 ಲಸಿಕಾದಾರರನ್ನು ಇಲಾಖೆ ನಿಯೋಜಿಸಿತ್ತು. ಪ್ರತಿ ಲಸಿಕೆಗೆ 5 ರೂ. ಪ್ರೋತ್ಸಾಹಧನವನ್ನು ಲಸಿಕಾದಾರರಿಗೆ ನೀಡಲಾಗುತ್ತಿದೆ.
ರಾಜ್ಯದಲ್ಲಿ ಕೋಲಾರ ಜಿಲ್ಲೆ ಮೊದಲು
ಕಾಲು ಬಾಯಿ ಲಸಿಕೆ ನೀಡುವಲ್ಲಿ ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲಿ 9ನೇ ಸ್ಥಾನದಲ್ಲಿದೆ. ಕೋಲಾರ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಬೆಂಗಳೂರು ಗ್ರಾಮಾಂತರ ಮತ್ತು ಬೆಳಗಾವಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಉಡುಪಿ ಜಿಲ್ಲೆಯು 10ನೇ ಸ್ಥಾನ ಪಡೆದಿದೆ. ಯಾದಗಿರಿ 4, ರಾಮನಗರ (ಬೆಂಗಳೂರು ದಕ್ಷಿಣ) 5, ಬಾಗಲಕೋಟೆ 6, ತುಮಕೂರು 7, ಬೆಂಗಳೂರು ನಗರ 8ನೇ ಸ್ಥಾನ ಪಡೆದುಕೊಂಡಿವೆ.
| ತಾಲೂಕು | ಗುರಿ | ಸಾಧನೆ |
|---|
| ಭದ್ರಾವತಿ | 35321 | 31950 |
| ಹೊಸನಗರ | 97924 | 92499 |
| ಸಾಗರ | 83582 | 92906 |
| ಶಿಕಾರಿಪುರ | 64945 | 61062 |
| ಶಿವಮೊಗ್ಗ | 52489 | 50071 |
| ಸೊರಬ | 64243 | 55772
|
| ತೀರ್ಥಹಳ್ಳಿ | 95924 | 90557
|
| ಒಟ್ಟು | 494428 | 474817
|