ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಪರಿಸಕ್ಕಾಗಿ ನಾವು ಮತ್ತು ರಾಷ್ಟ್ರಭಕ್ತರ ಬಳಗದಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಮಾರುತಿ ಗುರೂಜಿ, ಕೆ.ಎಸ್.ಈಶ್ವರಪ್ಪ, ಎ.ಟಿ.ರಾಮಸ್ವಾಮಿ, ಕವಿತಾ ಎ.ಎಸ್.ಎಲೇದಹಳ್ಳಿ, ಪ್ರೊ. ಬಿ.ಎಂ.ಕುಮಾರಸ್ವಾಮಿ, ಡಾ. ಎಲ್.ಕೆ.ಶ್ರೀಪತಿ, ಎ.ಎಸ್.ಪದ್ಮನಾಭ ಭಟ್, ಮಹಾಲಿಂಗಯ್ಯಶಾಸಿ, ಎಂ.ಶಂಕರ್, ಪರಶುರಾಮೇಗೌಡ, ಕೆ.ಸಿ.ನಟರಾಜ್ ಭಾಗವತ್, ಕೆ.ಇ.ಕಾಂತೇಶ್, ಡಾ. ಶೇಖರ್ ಗೌಳೇರ್, ಜನಾರ್ಧನ್ ಪೈ ಇದ್ದರು. 
ಶಿವಮೊಗ್ಗ

ಜೀವ ಹೋದರೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ಬಿಡಲ್ಲ । Sharavathi Pumped Storage

ಪ್ರಮುಖ ಮುಖ್ಯಾಂಶಗಳು

  • ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಪ್ರತಿಭಟನೆ
  • ಪಶ್ಚಿಮಘಟ್ಟಕ್ಕೆ ಮಾತ್ರವಲ್ಲ ಅಪರೂಪದ ಪ್ರಾಣಿ ಸಂಕುಲ, ರೈತರಿಗೂ ಮರಣ ಶಾಸನ
  • ಶಿವಮೊಗ್ಗದಲ್ಲಿ ಹೊನ್ನಾವರದ ಬಂಗಾರಮಕ್ಕಿ ಶ್ರೀ ಮಾರುತಿ ಗುರೂಜಿ ಎಚ್ಚರಿಕೆ
ಶಿವಮೊಗ್ಗ: ಪರಿಸರ ಕಾಳಜಿ ಇಲ್ಲದೆ ಅವೈಜ್ಞಾನಿಕವಾಗಿ ಕಾರ್ಯಗತಗೊಳಿಸಲು ಹೊರಟಿರುವ ಶರಾವತಿ ಪಂಪ್ಡ್ ಸ್ಟೋರೇಜ್(Sharavathi Pumped Storage) ಯೋಜನೆಯು ಪಶ್ಚಿಮಘಟ್ಟ(Western Ghats)ಕ್ಕೆ ಮಾತ್ರವಲ್ಲದೆ ಅಳಿನಂಚಿನಲ್ಲಿರುವ ಅಪರೂಪದ ಪ್ರಾಣಿ ಸಂಕುಲ ಮತ್ತು ಕೃಷಿಯನ್ನೇ ಆಶ್ರಯಿಸಿರುವ ರೈತರಿಗೂ ಮರಣ ಶಾಸನ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಹೊನ್ನಾವರದ ಬಂಗಾರಮಕ್ಕಿ ಶ್ರೀ ಮಾರುತಿ ಗುರೂಜಿ ಅಸಮಾಧಾನ ವ್ಯಕ್ತಪಡಿಸಿದರು.
‘ಪರಿಸರಕ್ಕಾಗಿ ನಾವು’ ಮತ್ತು ರಾಷ್ಟ್ರಭಕ್ತರ ಬಳಗ(Rastrabhaktara balaga) ಸೇರಿ ವಿವಿಧ ಸಂಘಟನೆಗಳಿಂದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಗುರುವಾರ ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಮಾತನಾಡಿದ ಅವರು, ಹಿಂದೆಯೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ. ಯಾವುದೇ ಕಾರಣಕ್ಕೂ ಈ ಯೋಜನೆ ಕಾರ್ಯಗತಗೊಳಿಸುವುದಕ್ಕೆ ಬಿಡುವುದಿಲ್ಲ. ಅದಕ್ಕಾಗಿ ನನ್ನ ಜೀವ ಹೋದರೂ ಪರವಾಗಿಲ್ಲ ಎಂದರು.
ರಾಜ್ಯ ಸರ್ಕಾರ ಈ ಯೋಜನೆಗೆ 10,456 ಕೋಟಿ ರೂ. ಅಂದಾಜಿಸಿತ್ತು. ಆದರೆ ಕಾಮಗಾರಿ ಶುರುವಾಗುವುದಕ್ಕೂ ಮುನ್ನವೇ ಅದೀಗ 15 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ. ಯೋಜನೆ ಮುಕ್ತಾಯದೊಳಗೆ ಮೂರು ಪಟ್ಟು ಹಣ ಹೆಚ್ಚಾದರೂ ಅಚ್ಚರಿ ಇಲ್ಲ. ಈ ಯೋಜನೆ ಬರೀ ಪರಿಸರಕ್ಕೆ ಮಾತ್ರವಲ್ಲ, ಜೀವ ಸಂಕುಲ(Wildlife)ಕ್ಕೂ ಮಾರಕವಾಗಿದೆ. ಪಶ್ಚಿಮಘಟ್ಟದಲ್ಲಿ ಇಂತಹ 38 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದರಿಂದ ಲಕ್ಷಾಂತರ ಮರಗಳಿಗೆ ಕೊಡಲಿಪೆಟ್ಟು ಬೀಳಲಿದೆ. ಹಾಗಾಗಿ ಜೀವ ಹೋದರೂ ಯಾವ ಯೋಜನೆಗಳನ್ನೂ ಇನ್ಮುಂದೆ ಜಾರಿ ಆಗುವುದಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪರಿಸರ ಹೋರಾಟಗಾರ ಪ್ರೊ. ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ಅಳಿವಿನಂಚಿನಲ್ಲಿರುವ ಸಿಂಗಳೀಕ, ಮಂಗಟ್ಟೆ ಪಕ್ಷಿಗಳು ಪಶ್ವಿಮಘಟ್ಟದ ಈ ಸಂರಕ್ಷಣಾ ಅರಣ್ಯ ವಲಯದಲ್ಲಿದ್ದು, ಇಲ್ಲಿ ಯಾವುದೇ ಕಾರಣಕ್ಕೂ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸಬಾರದೆಂದು ಕೇಂದ್ರ ಅರಣ್ಯ ಮತ್ತು ಪರಿಸರ ಮಂತ್ರಾಲಯದ ಅಧಿಕಾರಿ ಪ್ರಣೀತಾಪೌಲ್ ವರದಿ ನೀಡಿದ್ದರು. ಆದರೆ ಇಲ್ಲಿ ಯಾವುದೇ ಪ್ರಾಣಿ, ಪಕ್ಷಿಗಳಿಗೆ ಹಾನಿಯಾಗುವುದಿಲ್ಲ. ಈ ಯೋಜನೆ ಜಾರಿಗೊಳಿಸಬಹುದು ಎಂದು ರಾಜ್ಯ ಅರಣ್ಯ ಅಧಿಕಾರಿ ಸೆಂಥಿಲ್ ಕುಮಾರ್ ಅವರು ಒಂದೇ ಪುಟದ ವರದಿ ನೀಡಿದ್ದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯೋಜನೆಯಿಂದ ನೀರಿನ ಭದ್ರತೆಗೆ ಕಂಟಕ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜನರ ಉದ್ದಾರಕ್ಕಾಗಿ ಮಾಡುತ್ತಿಲ್ಲ. ಈ ಯೋಜನೆ ಜಾರಿಗೆ ತರುವುದರ ಹಿಂದೆ ಕೇವಲ ಜೇಬು ತುಂಬಿಸಿಕೊಳ್ಳುವುದಾಗಿದೆ. ಯೋಜನೆಯಿಂದ ನೀರಿನ ಭದ್ರತೆಗೆ ಕಂಟಕಪ್ರಾಯವಾಗಲಿದೆ ಎಂದು ‘ಪರಿಸರಕ್ಕಾಗಿ ನಾವು ಸಂಘಟನೆ’ ಅಧ್ಯಕ್ಷ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಕಳವಳ ವ್ಯಕ್ತಪಡಿಸಿದರು. 
ಪರಿಸರ ತಜ್ಞ ಡಾ. ಎಲ್.ಕೆ.ಶ್ರೀಪತಿ, ಪರಿಸರಕ್ಕಾಗಿ ನಾವು ಸಂಘಟನೆ ಉಪಾಧ್ಯಕ್ಷೆ ಕವಿತಾ ಎ.ಎಸ್.ಎಲೇದಹಳ್ಳಿ, ಪ್ರಮುಖರಾದ ಎ.ಎಸ್.ಪದ್ಮನಾಭ ಭಟ್, ಮಹಾಲಿಂಗಯ್ಯಶಾಸಿ, ಎಂ.ಶಂಕರ್, ಪರಶುರಾಮೇಗೌಡ, ಕೆ.ಸಿ.ನಟರಾಜ್ ಭಾಗವತ್, ಕೆ.ಇ.ಕಾಂತೇಶ್, ರವಿ, ರಮೇಶ್ ಬಾಬು, ಇ.ವಿಶ್ವಾಸ್, ಶ್ರೀಕಾಂತ್, ಡಾ. ಬಸವರಾಜು, ಜಿ. ವಿಜಯಕುಮಾರ್, ಡಾ. ಶೇಖರ್ ಗೌಳೇರ್, ಮೋಹನ್ ಜಾದವ್, ಜನಾರ್ಧನ್ ಪೈ, ಮಧು, ರವಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು.
"

ಯಾವುದೇ ಕಾರಣಕ್ಕೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ಬಿಡುವುದಿಲ್ಲ. 10,700 ಕೋಟಿ ರೂ. ಲೂಟಿ ಮಾಡುವ ಸಂಚು ಈ ಯೋಜನೆಯಲ್ಲಿದೆ. ಮುಂದಿನ ಪೀಳಿಗೆಗೆ ಸಮೃದ್ಧ ನೀರನ್ನು ಕೊಂಡೊಯ್ಯುವ ಉದ್ದೇಶ ಈ ಹೋರಾಟವಾಗಿದ್ದು, ಶತಾಯ-ಗತಾಯ ಈ ಯೋಜನೆಯನ್ನು ಸಾರ್ವಜನಿಕರ ಬೆಂಬಲದೊಂದಿಗೆ ನಿಲ್ಲಿಸುತ್ತೇವೆ.