ನಾಟ್ಯರಾಣಿ ಶಾಂತಲೆಯ ಆತ್ಮವೃತ್ತ ‘ಹೆಜ್ಜೆಗೊಲಿದ ಬೆಳಕು’ ಏಕವ್ಯಕ್ತಿ ನಾಟಕದಲ್ಲಿ ಸಂಸ್ಕೃತಿ ಪ್ರಭಾಕರ್ ಅವರ ನೃತ್ಯ.
ಸಾಗರ: ನಾಟ್ಯರಾಣಿ ಶಾಂತಲೆ ಹೇಗಿದ್ದಳು ಎನ್ನುವ ಕಲ್ಪನೆ ಈ ನೃತ್ಯನಾಟಕ ನೋಡಿದರೆ ಅರ್ಥವಾಗುತ್ತದೆ. ಭಾರತೀಯ ನೃತ್ಯ ಕ್ಷೇತ್ರಕ್ಕೆ ಶಾಂತಲೆ ನೀಡಿದ ಕೊಡುಗೆ ಅಪಾರವಾದುದು ಎಂದು ಉಪನ್ಯಾಸಕ ದತ್ತಮೂರ್ತಿ ಭಟ್ ಹೇಳಿದರು.
ಸಾಗರದ ಕುಡುಪಲಿ ಸದಾನಂದ ಸ್ವರಾಲಯದಲ್ಲಿ ಸಪ್ತಕ ಬೆಂಗಳೂರು ಮತ್ತು ಉಡುಪಿ ಪ್ರಜ್ಞಾನಂ ಟ್ರಸ್ಟ್‌ನಿಂದ ಆಯೋಜಿಸಿದ್ದ ವಿದುಷಿ ಸಂಸ್ಕೃತಿ ಪ್ರಭಾಕರ್ ಅಭಿನಯದ ನಾಟ್ಯರಾಣಿ ಶಾಂತಲೆಯ ಆತ್ಮವೃತ್ತವನ್ನು ಒಳಗೊಂಡ ‘ಹೆಜ್ಜೆಗೊಲಿದ ಬೆಳಕು’ ಏಕವ್ಯಕ್ತಿ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒಂದೂವರೆ ತಾಸು ಅಭಿನಯದ ಸಂಸ್ಕೃತಿ ಪ್ರಭಾಕರ್ ಅವರ ಏಕವ್ಯಕ್ತಿ ನಾಟಕ ನೋಡಿದರೆ ನಾಟ್ಯರಾಣಿ ನಮ್ಮ ಕಣ್ಮುಂದೆ ಪ್ರತ್ಯಕ್ಷಳಾಗುತ್ತಾಳೆ. ಅತ್ಯಂತ ವಿಶೇಷ ಅಭಿನಯದ ಮೂಲಕ ಶಾಂತಲಾ ಅವರ ವ್ಯಕ್ತಿತ್ವವನ್ನು ತೆರೆದಿಡುವಲ್ಲಿ ಈ ನಾಟಕ ಯಶಸ್ವಿಯಾಗಿದೆ. ಇಂತಹ ಕಲಾವಿದರನ್ನು, ಕಲೆಯನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು.
ವಿದುಷಿ ವಸುಧಾ ಶರ್ಮ ಮಾತನಾಡಿ, ಸಂಸ್ಕೃತಿ ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತ ಬರುತ್ತಿರುವ ಪಾಲಕರಿಗೆ ಅಭಿನಂದನೆ ಸಲ್ಲಿಸಬೇಕು. ಕುಡುಪಲ್ಲಿ ಕುಟುಂಬ ಕಲಾವಿದರಿಗಾಗಿಯೇ ಈ ಸಭಾಂಗಣವನ್ನು ನೀಡಿದೆ. ಸಾಗರ ಅನೇಕ ಕಲೆಗಳನ್ನು ಪ್ರೋತ್ಸಾಹಿಸಿಕೊಂಡು ಬರುತ್ತಿದೆ. ಇಲ್ಲಿ ಎಲ್ಲ ಕಲಾವಿದರು ಯಶಸ್ವಿ ಪ್ರದರ್ಶನ ನೀಡುವ ಜತೆಗೆ ಕಲೆಯನ್ನು ಪೋಷಣೆ ಮಾಡಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು. ಪ್ರಭಾಕರ್, ಜಿ.ಎಸ್.ಹೆಗಡೆ ಉಪಸ್ಥಿತರಿದ್ದರು.