ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 
ಶಿವಮೊಗ್ಗ

ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ; ಯುವಕ ಸೇರಿ ನಾಲ್ವರಿಗೆ 20 ವರ್ಷ ಜೈಲು | Sexual assault

ಪ್ರಮುಖ ಮುಖ್ಯಾಂಶಗಳು

  • ಮದುವೆಯಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದ ಯುವಕ
  • ಸಹಕರಿಸಿದ ಮೂವರಿಗೆ ಕಠಿಣ ಕಾರಾಗೃಹ ಶಿಕ್ಷೆ
  • ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿಎಸ್‌ಸಿ-1) ಆದೇಶ
ಶಿವಮೊಗ್ಗ: ಅಪ್ರಾಪ್ತೆಯನ್ನು ಮದುವೆಯಾಗಿ ಲೈಂಗಿಕ ದೌರ್ಜನ್ಯ(Sexual assault) ನಡೆಸಿದ್ದ ಯುವಕ ಹಾಗೂ ಅದಕ್ಕೆ ಸಹಕರಿಸಿದ ಮೂವರಿಗೆ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿಎಸ್‌ಸಿ-1)ವು 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ(Imprisonment) ಮತ್ತು 1.85 ರೂ. ದಂಡ ವಿಧಿಸಿದೆ. ನೊಂದ ಬಾಲಕಿಗೆ 4 ಲಕ್ಷ ರೂ. ಪರಿಹಾರ ನೀಡುವಂತೆಯೂ ಆದೇಶಿಸಿದೆ.
ಶಿವಮೊಗ್ಗ ತಾಲೂಕಿನ 27 ವರ್ಷದ ಯುವಕ ಸೇರಿ ನಾಲ್ವರು ಶಿಕ್ಷೆಗೆ ಒಳಗಾದವರು. ಯುವಕ 2024ರಲ್ಲಿ 17  ವರ್ಷದ ಬಾಲಕಿಯನ್ನು ಪರಿಚಯ ಮಾಡಿಕೊಂಡು ಬಾಲ್ಯ ವಿವಾಹವಾಗಿದ್ದ. ಬಳಿಕ ಲೈಂಗಿಕ ದೌರ್ಜನ್ಯ ನಡೆಸಿದ್ದು, ಈ ಬಗ್ಗೆ ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ, ಪೋಕ್ಸೋ ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆ(Child Marriage Prohibition Act)ಯಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆಗಿನ ತನಿಖಾಧಿಕಾರಿಯಾಗಿದ್ದ ಕುಂಸಿ ಠಾಣೆಯ ಇನ್‌ಸ್ಪೆಕ್ಟರ್ ಹರೀಶ್ ಕೆ. ಪಾಟೀಲ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ(Indictment List) ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ನಿಂಗನಗೌಡ ಭ ಪಾಟೀಲ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎ-1ರಿಂದ ಎ-4ವರೆಗಿನ ತಪ್ಪಿತಸ್ಥರಿಗೆ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕ ಶ್ರೀಧರ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.