ಕಾರ್ಗಲ್ ಬಿಳಗಲ್ಲೂರು ಪಿಎಸಿಎಸ್ ಎದುರು ಪಡಿತರ ಪಡೆಯಲು ಸಾಲುಗಟ್ಟಿ ನಿಂತಿದ್ದ ಫಲಾನುಭವಿಗಳು.
ಕಾರ್ಗಲ್: ಸರ್ವರ್ ಸಮಸ್ಯೆಯಿಂದ ಕಾರ್ಗಲ್ ಹಾಗೂ ಜೋಗದಲ್ಲಿ ಪಡಿತರ ವಿತರಣೆಯಲ್ಲಿ ವ್ಯತ್ಯಯವಾಗಿದೆ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳುರಾತ್ರಿ 10 ಗಂಟೆವರೆಗೂ ಕಾದು ಪಡಿತರ ಪಡೆದಿದ್ದಾರೆ.
ಸರ್ವರ್ ನಿಧಾನಗೊಂಡ ಹಿನ್ನೆಲೆಯಲ್ಲಿ ಬಯೋಮೆಟ್ರಿಕ್ ಪಡೆಯಲು ಸಮಸ್ಯೆಯಾಯಿತು. ಇದರಿಂದ ಜನರು ಸಾಲುಗಟ್ಟಿ ನಿಲ್ಲುವಂತಾಯಿತು. ಬಿಳಗಲ್ಲೂರು ಪತ್ತಿನ ಸಹಕಾರ ಸಂಘದ ಸಿಬ್ಬಂದಿ ಸಹನೆಯಿಂದ ಪಡಿತರ ವಿತರಿಸಿದರು. ಜನರು ಕೂಡಾ ತಾಳ್ಮೆಯಿಂದ ಸರದಿಯಲ್ಲಿ ನಿಂತು ಪಡಿತರ ಪಡೆದರು. ಶನಿವಾರ ರಾತ್ರಿ ಸಾಲುಗಟ್ಟಿ ನಿಂತ ಎಲ್ಲ ಜನರಿಗೂ ಪಡಿತರ ವಿತರಿಸಿ ಮುಗಿಸುವಾಗ 10 ಗಂಟೆಯಾಗಿತ್ತು.
ಜೋಗದಲ್ಲಿ ಪ್ರತಿ ತಿಂಗಳು ನಾಲ್ಕು ದಿನ ಪಡಿತರ ನೀಡಲಾಗುತ್ತದೆ. ಆದರೆ ಈ ತಿಂಗಳು ಸರ್ವರ್ ಸಮಸ್ಯೆಯಿಂದ ಐದು ದಿನಗಳ ಕಾಲ ಪಡಿತರ ವಿತರಿಸಲಾಯಿತು. ಆದರೂ ಪಡಿತರ ಪಡೆಯದಿದ್ದವರಿಗೆ ಶನಿವಾರ ಕಾರ್ಗಲ್ಗೆ ಬಂದು ಪಡೆಯುವಂತೆ ತಿಳಿಸಲಾಗಿತ್ತು. ತಿಂಗಳ ಅಂತ್ಯವಾದ ಹಿನ್ನೆಲೆಯಲ್ಲಿ ಒತ್ತಡ ಹೆಚ್ಚಾಗಿದೆ. ಇದೀಗ ಎಲ್ಲ ್ರಾಹಕರಿಗೂ ಪಡಿತರ ವಿತರಿಸಲಾಗಿದೆ ಎಂದು ಬಿಳಗಲ್ಲೂರು ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ತಿಳಿಸಿದ್ದಾರೆ.
ಸರ್ವರ್ ಸಮಸ್ಯೆಯಾದ ಸಂದರ್ಭಗಳಲ್ಲಿ ಸಮೀಪದ ಕುಗ್ರಾಮಗಳಾದ ಹೆನ್ನಿ, ಮರಾಠಿ ಕೇರಿ, ಸುಂಕದಮನೆ, ಕುಡುಗುಂಜಿ ಗ್ರಾಮಗಳಿಗೆ ಸಂಜೆಯ ನಂತರ ಪಡಿತರ ಪಡೆದು ತೆರಳಲು ಕಷ್ಟವಾಗಲಿದೆ. ಇವರನ್ನು ವಿಶೇಷವಾಗಿ ಪರಿಗಣಿಸಿ ಆದ್ಯತೆ ನೀಡಬೇಕು ಎನ್ನುವುದು ಈ ಭಾಗದ ಜನರ ಒತ್ತಾಯ.