ಹೋಳೆಹೊನ್ನೂರಿನಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಅಭಿಯಾನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಶಿವಪ್ರಸಾದ್, ಉನ್ನಿಕುಮಾರ್, ಶಾಂತಲಾ ಇತರರಿದ್ದರು.
ಹೊಳೆಹೊನ್ನೂರು: ಮಕ್ಕಳಲ್ಲಿ ಓದುವ ಆಸಕ್ತಿ ಕಡಿಮೆ ಆಗುತ್ತಿರುವುದರಿಂದ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಹಾಗಾಗಿ ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೊಳೆಹೊನ್ನೂರು ಠಾಣೆ ಪಿಐ ಶಿವಪ್ರಸಾದ್ ಹೇಳಿದರು.
ಪಟ್ಟಣದಲ್ಲಿ ಬುಧವಾರ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಮಿಷನ್ ಸುರಕ್ಷಾ ಯೋಜನೆಯಡಿ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳನ್ನು ಶಾಲೆಗೆ ಕಳಿಸಲು ಪಾಲಕರೂ ಕೂಡ ನಿರಾಸಕ್ತಿ ತೋರುವುದು ಮಕ್ಕಳು ಶಾಲೆಗಳಿಂದ ಹೊರ ಉಳಿಯುವುದಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗುತ್ತಿದೆ. ಶಾಲೆ ಬಿಟ್ಟ ಮಕ್ಕಳು ಚಿಕ್ಕ ವಯಸ್ಸಿಗೆ ಹಾದಿ ತಪ್ಪಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ. ಸಣ್ಣ ವಯಸ್ಸಿಗೆ ದುಶ್ಚಟಗಳ ದಾಸರಾಗಿ ಸಮಾಜಕ್ಕೆ ಮಾರಕವಾಗುತ್ತಾರೆ. ಇಲಾಖೆ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಮತ್ತೊಂದು ಸುತ್ತಿನಲ್ಲಿ ಅಭಿಯಾನ ನಡೆಸಿದರೆ ಮತ್ತಷ್ಟು ವಿದ್ಯಾರ್ಥಿಗಳನ್ನು ಪತ್ತೆ ಮಾಡಬಹುದು. ಹೊಳೆಹೊನ್ನೂರಿನಲ್ಲಿ 83 ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಲಾಗಿದೆ. ಪಾಲಕರಿಗೆ ಮನವರಿಕೆ ಮಾಡಿ ಮಕ್ಕಳನ್ನು ಶಾಲೆಗೆ ಮರಳಿ ಕಳಿಸುವಂತೆ ತಿಳಿಸಲಾಗಿದೆ ಎಂದರು.
ಪಪಂ ಮುಖ್ಯಾಧಿಖಾರಿ ಉನ್ನಿಕುಮಾರ್, ಪಿಎಸ್‌ಐ ಶಾಂತಲಾ, ಮೆಹಬೂಬ್ ಸಾಬ್, ಕೃಷ್ಣನಾಯ್ಕ ಇತರರಿದ್ದರು.