ಹೊಳೆಹೊನ್ನೂರಿನ ಚಿಕನ್ ಅಂಗಡಿಯೊಂದರ ಮೇಲೆ ಪಪಂ ಮುಖ್ಯಾಧಿಕಾರಿ ಉನ್ನಿಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಪರಿಶೀಲಿಸುತ್ತಿರುವುದು. 
ಶಿವಮೊಗ್ಗ

ಅವಧಿ ಮೀರಿದ ತಿನಿಸುಗಳ ಜಪ್ತಿ

ಹೊಳೆಹೊನ್ನೂರು: ಪಟ್ಟಣದ ಹೋಟೆಲ್ ಹಾಗೂ ಅಂಗಡಿಗಳ ಮೇಲೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ಅವಧಿ ಮೀರಿದ ತಿನಿಸುಗಳನ್ನು ವಶಕ್ಕೆ ಪಡೆದರು.

ಪೇಟೆ ಬೀದಿ, ಭದ್ರಾವತಿ ರಸ್ತೆ ಹಾಗೂ ಚನ್ನಗಿರಿ ರಸ್ತೆಯಲ್ಲಿರುವ ಕೆಲ ಅಂಗಡಿಗಳ ಮೇಲೆ ದಾಳಿ ಮಾಡಿ ತಪಾಸಣೆ ನಡೆಸಿದರು. ಹೋಟೆಲ್‌ಗಳಲ್ಲಿ ಇಡ್ಲಿ ಪ್ಲೇಟ್‌ಗಳಿಗೆ ಬಟ್ಟೆ ಬದಲಿಗೆ ಪ್ಲಾಸ್ಟಿಕ್ ಕವರ್ ಬಳಸಿದ್ದನ್ನು ಕಂಡು ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ಆಹಾರ ಪಾರ್ಸೆಲ್ ಮಾಡಲು ಸಂಗ್ರಹಿಸಿದ್ದ ಪ್ಲಾಸ್ಟಿಕ್ ಕವರ್‌ಗಳನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿದರು.

ಚನ್ನಗಿರಿ ರಸ್ತೆಯ ಪೆಟ್ರೋಲ್ ಬಂಕ್ ಎದುರು ಅಂಗಡಿಯೊಂದರ ಮೇಲೆ ದಾಳಿ ಮಾಡಿ ಅವಧಿ ಮೀರಿದ ಚಿಪ್ಸ್ ಹಾಗೂ ಜ್ಯೂಸ್ ಬಾಟಲ್‌ಗಳನ್ನು ವಶಕ್ಕೆ ಪಡೆದರು. ಪಾಮ್ ಆಯಿಲ್ ಹಾಗೂ ಹೋಟೆಲ್‌ವೊಂದರ ಫ್ರಿಡ್ಜ್‌ನಲ್ಲಿ ಬಹುದಿನಗಳಿಂದ ಶೇಖರಿಸಿದ ಚಿಕನ್ ವಶಕ್ಕೆ ಪಡೆದರು. ಅಂಗಡಿಗಳ ಪರವಾನಗಿ ನವೀಕರಣ ಮಾಡದವರಿಗೆ ಸ್ಥಳದಲ್ಲೇ ದಂಡ ವಿಧಿಸಿ, ನೋಟಿಸ್ ನೀಡಿದರು.

ರಸ್ತೆಗೆ ಹೊಂದಿಕೊಂಡಂತೆ ಜೋಡಿಸಿದ ಕೋಳಿ ಟ್ರೇಗಳನ್ನು ಎತ್ತಗಂಡಿ ಮಾಡಿಸಿ ವಾಸನೆ ಬಾರದಂತೆ ನೋಡಿಕೊಳ್ಳುವಂತೆ ತಿಳಿಸಿದರು. ಕೋಳಿ ತ್ಯಾಜ್ಯ ಕಾಲುವೆಗಳಿಗೆ ಸುರಿಯುವವರ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು. ಅಧಿಕಾರಿಗಳು ದಾಳಿ ಮಾಡಿದ್ದನ್ನು ವಿರೋಧಿಸಿದ ಕೆಲವರು ಪ್ಲಾಸ್ಟಿಕ್ ಕವರ್‌ಗಳನ್ನು ಬ್ಯಾನ್ ಮಾಡಿಸಿ. ಚರಂಡಿ ಹೂಳು ತೆಗೆಸಿ, ಕುಡಿಯಲು ಶುದ್ಧ ನೀರು ಕೊಡಿ. ಆನಂತರ ದಾಳಿ ಮಾಡಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಪಪಂ ಮುಖ್ಯಾಧಿಕಾರಿ ಉನ್ನಿಕುಮಾರ್, ಅಣ್ಣಪ್ಪಸ್ವಾಮಿ, ಪ್ರದೀಪ್, ದೇವೇಂದ್ರ ನಾಯ್ಕ, ಹಾಲೇಶ್, ಸುಮಿತ್ರಾ, ತನುಜಾ, ದಿವ್ಯರಾಣಿ, ಕರಿಯಪ್ಪ ಇತರರಿದ್ದರು.