ಶಿವಮೊಗ್ಗ ಸ್ಕೌಟ್ ಭವನದಲ್ಲಿ ಟಿ.ವಿ.ನಾರಾಯಣಶಾಸ್ತ್ರಿ ಅವರ ಸ್ಮರಣಾರ್ಥ ಸಚಿವ ಮಧು ಬಂಗಾರಪ್ಪ ಜಿಲ್ಲಾಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್-ರೇಂಜರ್‌ಗಳ ರ‌್ಯಾಲಿ ಉದ್ಘಾಟಿಸಿದರು. ಬಲ್ಕಿಷ್ ಬಾನು, ಎಸ್.ರುದ್ರೇಗೌಡ, ಪಿ.ಜಿ.ಆರ್.ಸಿಂಧ್ಯಾ, ಪ್ರಭುಲಿಂಗ ಕವಳಿಕಟ್ಟಿ, ವಿ.ಅಭಿಷೇಕ್, ಶಕುಂತಲಾ ಚಂದ್ರಶೇಖರ್, ಕೆ.ರವಿ, ರಮೇಶ್ ಇದ್ದರು. 
ಶಿವಮೊಗ್ಗ

ಕೆಪಿಎಸ್ ಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಶಾಖೆ ಆರಂಭ । Scouts and Guides

ಪ್ರಮುಖ ಮುಖ್ಯಾಂಶಗಳು

  • ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಲು ಸ್ಕೌಟ್ಸ್ ಮತ್ತು ಗೈಡ್ಸ್
  • ಉನ್ನತಾಧಿಕಾರಿಗಳೊಂದಿಗೆ ಚರ್ಚೆ, ಶೀಘ್ರದಲ್ಲೇ ರೂಪುರೇಷೆ ಸಿದ್ಧ
  • ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ
ಶಿವಮೊಗ್ಗ: ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಆ ನಿಟ್ಟಿನಲ್ಲಿ ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್)ಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್(Scouts and Guide) ಶಾಖೆಗಳನ್ನು ಆರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ಬಿ.ಎಚ್.ರಸ್ತೆಯ ಜಿಲ್ಲಾ ಸ್ಕೌಟ್ ಭವನ(Scout Bhavana)ದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಶತಮಾನೋತ್ಸವ ಮತ್ತು ಟಿ.ವಿ.ನಾರಾಯಣಶಾಸ್ತ್ರಿ ಅವರ ಸ್ಮರಣಾರ್ಥ ಜಿಲ್ಲಾಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್-ರೇಂಜರ್‌ಗಳ ರ‌್ಯಾಲಿ(Rally) ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಮಾನವೀಯ ಗುಣಗಳು ಮತ್ತು ಮೌಲ್ಯಗಳು ಮರೆಯಾಗುತ್ತಿರುವ ಸಮಯದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ , ರೇಂಜರ್ಸ್ ಮತ್ತು ರೋವರ್‌(Rangers and Rover)ಗಳು ಸಾಮಾಜಿಕ ಕಾಳಜಿ, ಸೇವಾ ಮನೋ ಭಾವವನ್ನು ಬೆಳೆಸುತ್ತಿವೆ. ಇಂತಹ ಸಂಸ್ಥೆಗಳು ಪ್ರತಿಯೊಂದು ಶಾಲೆಗೂ ಅತ್ಯವಶ್ಯಕ. ಆದರೆ, ಎಲ್ಲ ಶಾಲೆಗಳಲ್ಲೂ ಆರಂಭಿಸಲು ಅಗತ್ಯವಾದ ಮೂಲಸೌಲಭ್ಯಗಳ ಕಡೆಗೂ ಗಮನ ಕೊಡಬೇಕಾಗುತ್ತದೆ. ಹೀಗಾಗಿ, ಕೆಪಿಎಸ್ ಗಳಲ್ಲಿ ಆರಂಭಿಸುವ ಬಗ್ಗೆ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಶೀಘ್ರದಲ್ಲೇ ರೂಪುರೇಷೆ ಸಿದ್ಧಪಡಿಸಲಾಗುತ್ತದೆ ಎಂದರು.
ಮನುಷ್ಯರಾದ ನಾವು ಬೆಳೆಯುತ್ತ ಸಂಕುಚಿತ ಮನೋಭಾವದ ಅಲ್ಪಮಾನವರಾಗುತ್ತಿದ್ದೇವೆ. ವಿಶಾಲ ಮನೋಭಾವ ಬೆಳೆಸಿಕೊಂಡು ರಾಷ್ಟ್ರಕವಿ ಕುವೆಂಪು(Kuvempu) ಅವರು ಹೇಳಿದಂತೆ ವಿಶ್ವ ಮಾನವರಾಗಬೇಕಿದೆ. ಮಕ್ಕಳಿಗೆ ಶಿಸ್ತು, ಓದು, ರ‌್ಯಾಂಕ್ (Rank)ಗಳಿಸುವುದನ್ನು ಹೇಳಿ ಕೊಡುತ್ತಿದ್ದೇವೆ. ಅದರ ಜತೆಗೆ ಮೌಲ್ಯಗಳು, ಸಾಮಾಜಿಕ ಕಾಳಜಿ, ನಾಯಕತ್ವ ಗುಣಗಳನ್ನು ಕಲಿಸಿದಾಗ ಅವರು ಸಮಾಜಕ್ಕೆ ತೆರೆದುಕೊಳ್ಳುತ್ತಾರೆ. ಎಂತಹ ಪರಿಸ್ಥಿತಿ ಎದುರಾದರೂ ಧೈರ್ಯದಿಂದ ಎದುರಿಸುವ ಸಾಮರ್ಥ್ಯ ಮಕ್ಕಳಲ್ಲಿ ಬರುತ್ತದೆ ಎಂದರು.
ಶತಮಾನೋತ್ಸವ ಸಮಿತಿ ಅಧ್ಯಕ್ಷ, ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ ಅಧ್ಯಕ್ಷತೆ ವಹಿಸಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ರ‌್ಯಾಲಿ ನಡೆಸಲಾಯಿತು. ರ‌್ಯಾಲಿಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್, ರೇಂಜರ್ಸ್ ಮತ್ತು ರೋವರ್ಸ್‌ನ 1100 ಮಕ್ಕಳು, 100 ಶಿಕ್ಷಕರು ಭಾಗವಹಿಸಿದ್ದರು. ಎಂಎಲ್‌ಸಿ ಬಲ್ಕಿಷ್ ಬಾನು, ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಎಡಿಸಿ ವಿ.ಅಭಿಷೇಕ್, ಜಿಲ್ಲಾ ಮುಖ್ಯ ಆಯುಕ್ತ ಶಕುಂತಲಾ ಚಂದ್ರಶೇಖರ್, ಜಿಲ್ಲಾ ರೋವರ್ ಆಯುಕ್ತ ಕೆ.ರವಿ, ಬಿಇಒ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.