ಮಂಗೋಟೆಯಲ್ಲಿ ಹಳೆಯ ಸರ್ಕಾರಿ ಶಾಲೆ ಕಟ್ಟಡ ತೆರವುಗೊಳಿಸಿರುವುದು.
ಹೊಳೆಹೊನ್ನೂರು: ಸಮೀಪದ ಮಂಗೋಟೆಯಲ್ಲಿ ಹಳೆ ಶಾಲೆ ತೆರವು ವಿಚಾರದಲ್ಲಿ ತಕಾರರು ಉಂಟಾಗಿದ್ದು ಭದ್ರಾವತಿ ಬಿಇಒ ಸರ್ಕಾರಿ ಶಾಲೆ ತೆರವು ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಂಗೋಟೆಯ ಹಳೆ ಸರ್ಕಾರಿ ಶಾಲೆ ಇದ್ದ ದಾನದ ಜಾಗದ ಬಗ್ಗೆ ಎರಡು ದಶಕಗಳಿಂದ ಕುಟುಂಬವೊಂದು ಕಾನೂನು ಹೋರಾಟ ನಡೆಸುತ್ತಿತ್ತು. ಗ್ರಾಮಸ್ಥರು ಹಾಗೂ ಕುಟುಂಬ ಮಧ್ಯೆ ರಾಜಿ ಪಂಚಾಯಿತಿ ನಡೆದು ಸಂಧಾನದಲ್ಲಿ ಇತ್ಯಾರ್ಥವಾಗಿತ್ತು ಎನ್ನಲಾಗುತ್ತಿದೆ. ಕಳೆದ ವಾರ ಕುಟುಂಬದ ಪರವಾಗಿ ನ್ಯಾಯಾಲಯದಲ್ಲಿ ತೀರ್ಪು ಪ್ರಕಟವಾಗಿದೆ. ನ್ಯಾಯಾಲಯದಲ್ಲಿ ತಮ್ಮ ಪಾಲಿಗೆ ಬಂದ ಜಾಗದ ಸ್ವಚ್ಛತಾ ಕಾರ್ಯ ಆರಂಭಿಸಿರುವ ಕುಟುಂಬ ಜೆಸಿಬಿ ಯಂತ್ರ ಬಳಸಿ ಕಳೆದೆರಡು ದಿನಗಳಿಂದ ತಮ್ಮ ಜಾಗದಲ್ಲಿದ್ದ ಹಳೆಯ ಸರ್ಕಾರಿ ಶಾಲೆ ಕಟ್ಟಡ ತೆರವುಗೊಳಿಸಲು ಪ್ರಾರಂಭಿಸಿದ್ದಾರೆ. ಶಾಲೆ ತೆರವು ಕಂಡು ಕೆಲ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತಮ್ಮೂರಿನ ಸರ್ಕಾರಿ ಶಾಲಾ ಕಟ್ಟಡ ತೆರವುಗೊಳಿಸುತ್ತಿರುವ ವಿರುದ್ಧ ಶಾಲಾ ಸಮಿತಿ ಹಾಗೂ ಗ್ರಾಮ ಮುಖಂಡರು ಶುಕ್ರವಾರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ನ್ಯಾಯಾಲಯದ ತೀರ್ಪಿನ ಆದೇಶದ ಬಗ್ಗೆ ವಿವರಿಸಿದ ಹೊಳೆಹೊನ್ನೂರು ಠಾಣೆ ಪಿಐ ಶಿವಪ್ರಸಾದ್ ಗ್ರಾಮದ ಮುಖಂಡರೊಂದಿಗೆ ಮಾತನಾಡಿ, ನ್ಯಾಯಾಲಯದಲ್ಲಿ ಜಾಗದ ತೀರ್ಪು ಪ್ರಕಟವಾಗಿದ್ದು ಕಾನೂನಿನಂತೆ ಜಾಗವನ್ನು ಅನುಭವಕ್ಕೆ ಪಡೆದವರು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ.
ನ್ಯಾಯಾಲಯದ ಆದೇಶದ ವಿರುದ್ಧ ನಾವೇನು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಶಾಲಾ ಸಮಿತಿ ನ್ಯಾಯಾಲಯದ ಮೊರೆ ಹೋಗುವವರೆಗೆ ಶಾಲಾ ಕಟ್ಟಡವನ್ನು ಯಥಾ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಿ ಎಂದು ಗ್ರಾಮಸ್ಥರು ಪೊಲೀಸರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಭಾಗಶಃ ಶಾಲಾ ಕಟ್ಟಡ ನೆಲಸಮವಾಗಿದೆ.
ಗ್ರಾಮಸ್ಥರು ಶಾಲೆ ತೆರವು ವಿಚಾರವನ್ನು ಶಿಕ್ಷಣ ಇಲಾಖೆ ಗಮನಕ್ಕೆ ತಂದು ಸ್ಥಳ ಪರಿಶೀಲನೆ ಮಾಡುವಂತೆ ಮನವಿ ಮಾಡಿದ್ದಾರೆ. ಶನಿವಾರ ಸ್ಥಳಕ್ಕೆ ಬಂದ ಭದ್ರಾವತಿಯ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್, ಶಾಲೆ ಕಟ್ಟಡ ಸರ್ಕಾರಿ ಆಸ್ತಿ. ಸರ್ಕಾರದ ಅನುಮತಿ ಇಲ್ಲದೆ ಯಾರೊಬ್ಬರು ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡುವಂತಿಲ್ಲ ಎಂದು ತಿಳಿಸಿ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶಿಕ್ಷಣ ಇಲಾಖೆ ಪ್ರಕರಣ ದಾಖಲಿಸಿದ ನಂತರ ಶಾಲಾ ಕಟ್ಟಡ ತೆರವನ್ನು ನಿಲ್ಲಿಸುವಂತೆ ಜಾಗದ ವಾರಸುದಾರರಿಗೆ ಪೊಲೀಸರು ತಿಳಿಸಿದ್ದಾರೆ.