ಸಾಗರದಲ್ಲಿ ಓಮ್ನಿ ಚಾಲಕರು ಮತ್ತು ಮಾಲೀಕರ ಸಂಘದಿಂದ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಸನ್ಮಾನಿಸಲಾಯಿತು. 
ಶಿವಮೊಗ್ಗ

ಶಾಲಾ ವಾಹನ ಚಾಲಕರು ವಿಮೆ ಮಾಡಿಸಲಿ | sports

ಶಿವಕುಮಾರ ಎಸ್.ಪಿ.
ಸಾಗರ: ಪಾಲಕರು ನಿಮ್ಮನ್ನು ನಂಬಿ ಮಕ್ಕಳನ್ನು ನಿಮ್ಮ ವಾಹನದಲ್ಲಿ ಕಳಿಸಿರುತ್ತಾರೆ. ಮಕ್ಕಳು, ವಾಹನ ಹಾಗೂ ತಮ್ಮ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಶಾಲಾ ವಾಹನ ಚಾಲಕರಿಗೆ ಶಾಸಕ ಬೇಳೂರು ಸಲಹೆ ನೀಡಿದರು.
ಸಾಗರದ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ ಓಮ್ನಿ ಚಾಲಕರು ಮತ್ತು ಮಾಲೀಕರ ಸಂಘದಿಂದ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ವೈಯಕ್ತಿಕ, ವಾಹನ ವಿಮೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇತ್ತೀಚೆಗೆ ಪಾಲಕರು ತಮ್ಮ ಮಕ್ಕಳನ್ನು ಓಮ್ನಿ, ಆಟೋ ಇನ್ನಿತರೆ ವಾಹನಗಳಲ್ಲಿ ಶಾಲೆಗೆ ಕಳಿಸುತ್ತಿದ್ದಾರೆ. ಮಕ್ಕಳು ನಿಗದಿತ ಸಮಯಕ್ಕೆ ಶಾಲೆಗೆ ಹೋಗಬೇಕು ಎಂದು ಪಾಲಕರು ಪ್ರಯತ್ನ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ನಿಮ್ಮ ಮೇಲೆ ಹೆಚ್ಚಿನ ಹೊಣೆ ಇರುತ್ತದೆ. ನೀವು ಕೊಂಚ ಮೈಮರೆತರೆ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ ಎಂದರು.
ನಿಮ್ಮ ಮಕ್ಕಳು ವೈದ್ಯ, ಇಂಜಿನಿಯರ್ ಸೇರಿ ಉನ್ನತ ಸ್ಥಾನಕ್ಕೆ ಹೋಗಬೇಕು. ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ನಾಗರಾಜ್, ಕಾನೂನು ಸಲಹೆಗಾರ ವಿ.ಶಂಕರ್, ಪಿ.ಸುರೇಶ್, ಬಾಲು, ದಿನೇಶ್, ದೇವದಾಸ್ ಪ್ರಭು, ಶ್ರೀನಾಥ್ ಇತರರಿದ್ದರು.