ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಮುಂಗಡ ಪತ್ರದ ಸಭೆಯಲ್ಲಿ ರತ್ನಾಕರ್ ಶೆಟ್ಟಿ, ಗೀತಾ, ರಮೇಶ್, ಸೊಪ್ಪುಗುಡ್ಡೆ ರಾಘವೇಂದ್ರ ಇತರರಿದ್ದರು.
ತೀರ್ಥಹಳ್ಳಿ: ಆಸ್ತಿ ತೆರಿಗೆ, ಖಾತೆ ವರ್ಗಾವಣೆ ಶುಲ್ಕ ಸಂಗ್ರಹ, ರಾಜ್ಯ ಸರ್ಕಾರದ ಅನುದಾನ ಮತ್ತಿತರ ಆದಾಯದ ನಿರೀಕ್ಷೆಯೊಂದಿಗೆ ಪಟ್ಟಣ ಪಂಚಾಯಿತಿಯಲ್ಲಿ 2026-27ನೇ ಸಾಲಿಗೆ 1.14 ಕೋಟಿ ರೂ. ಉಳಿತಾಯ ಬಜೆಟ್ ಅನ್ನು ಮಂಗಳವಾರ ಮಂಡಿಸಲಾಯಿತು.
ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ ಮಂಡಿಸಿದ ಬಜೆಟ್‌ಗೆ ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರು ಮೇಜು ಕುಟ್ಟಿ ಒಪ್ಪಿಗೆ ಸೂಚಿಸಿದರೆ, ಆಯವ್ಯಯದಲ್ಲಿ ಅಭಿವೃದ್ಧಿಗೆ ಪೂರಕವಾದ ಅಂಶಗಳಿಲ್ಲ ಎಂದು ವಿಪಕ್ಷ ಬಿಜೆಪಿ ಸದಸ್ಯರು ಟೀಕೆ ಮಾಡಿದರು.
ಆದಾಯ ಮೂಲವಾಗಿ ಆಸ್ತಿ ತೆರಿಗೆ ಹಾಗೂ ಖಾತಾ ವರ್ಗಾವಣೆ ಮತ್ತು ನಕಲು ಶುಲ್ಕದಿಂದ 2.39 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. 2025ರ ಡಿಸೆಂಬರ್ ಅಂತ್ಯಕ್ಕೆ 1.82 ಕೋಟಿ ರೂ. ಸಂಗ್ರಹವಾಗಿದೆ. ನಿರಂತರ ನೀರಿನ ಯೋಜನೆಯಿಂದ ಒಂದು ಕೋಟಿ ರೂ. ತೆರಿಗೆ ಸಂಗ್ರಹ ನಿರೀಕ್ಷೆ ಇದೆ. ರಾಜ್ಯ ಸರ್ಕಾರದಿಂದ ನೀರು ಸರಬರಾಜು ಸ್ಥಾವರಗಳ ವಿದ್ಯುತ್ ಬಿಲ್ ಪಾವತಿಗೆ 1.97 ಕೋಟಿ ರೂ., 15ನೇ ಹಣಕಾಸು ಆಯೋಗದಡಿ 1.15 ಕೋಟಿ ರೂ., ಪಪಂ ವ್ಯಾಪ್ತಿಯ ನಿವೇಶನಗಳ ಮಾರಾಟದಿಂದ 4 ಕೋಟಿ ರೂ. ಕ್ರೋಡೀಕರಣವಾಗಲಿದೆ ಎಂದು ತಿಳಿಸಿದರು.
ಪಟ್ಟಣದಲ್ಲಿ ಅಪರಾಧಗಳ ನಿಯಂತ್ರಣದ ಸಲುವಾಗಿ ಸಿಸಿ ಕ್ಯಾಮರಾ ಅಳವಡಿಕೆ, ರಥಬೀದಿಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ವಾಣಿಜ್ಯ ಕಟ್ಟಡ, ಅಂಗವಿಕಲರಿಗೆ ವಸತಿ ಗೃಹ, ಹಿಂದೂ ರುದ್ರಭೂಮಿಯಲ್ಲಿ ಸ್ನಾನಗೃಹ ನಿರ್ಮಾಣ, 1.50 ಕೋಟಿ ರೂ. ವೆಚ್ಚದಲ್ಲಿ ಶೀಬಿನಕೆರೆ ಕೆರೆ ಅಭಿವೃದ್ಧಿ, ಈಜುಕೊಳ ನಿರ್ಮಾಣ, ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ಬಿಪಿಎಲ್ ಕಾರ್ಡ್ ಹೊಂದಿರುವ ಹಿರಿಯ ನಾಗರಿಕರಿಗೆ ಔಷಧಕ್ಕೆ ಸಹಾಯಧನ, ಫುಡ್ ಕೋರ್ಟ್ ನಿರ್ಮಾಣಕ್ಕೆ 1 ಕೋಟಿ ರೂ., ಮಾನವ ತ್ಯಾಜ್ಯ ಸಂಸ್ಕರಣೆ ಘಟಕ ಮತ್ತು ನಿರ್ವಹಣೆಗೆ 3 ಕೋಟಿ, ಆಶ್ರಯ ನಿವೇಶನ ಖರೀದಿಗೆ 3.50 ಕೋಟಿ ರೂ. ಕಾಯ್ದಿರಿಸಲಾಗುವುದು ಎಂದರು.
ಅನುದಾನ ಬಂದಿಲ್ಲ್ಲ: ಮುಂಗಡ ಪತ್ರದಲ್ಲಿ ಪ್ರಮುಖವಾಗಿ ಪಟ್ಟಣದ ಅಭಿವೃದ್ಧಿಗೆ ಪೂರಕವಾದ ಅಂಶಗಳೇ ಇಲ್ಲ. ಕನಿಷ್ಠ ಶೇ.50ರಷ್ಟು ಕೆಲಸಗಳನ್ನು ಪೂರ್ಣಗೊಳಿಸುವಂತೆ ಇರಬೇಕು. ಪರಿಶಿಷ್ಟರು, ಅಂಗವಿಕಲರ ಕಲ್ಯಾಣದ ಬಗ್ಗೆ ಕಾಳಜಿ ಇಲ್ಲ. ಮುಂಗಡ ಪತ್ರದಲ್ಲಿ ಕೆಲವೊಂದು ಉತ್ತಮ ಆಶಯಗಳಿದ್ದರೂ ವಾಸ್ತವಾಂಶಗಳಿಗೆ ಪೂರಕವಾಗಿಲ್ಲ ಎಂದು ಬಿಜೆಪಿ ಸದಸ್ಯ ಸಂದೇಶ್ ಜವಳಿ ಟೀಕಿಸಿದರು. ಮುಖ್ಯವಾಗಿ ಆದಾಯ ಹೆಚ್ಚಳಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ಮೂರು ವರ್ಷಗಳಿಂದ ಎಸ್‌ಎ್ಸಿ ಅನುದಾನವೂ ಬಂದಿಲ್ಲ್ಲ. ನಿವೇಶನಗಳ ಹರಾಜಿಗೂ ತೊಡಕುಗಳಿವೆ. ಪಟ್ಟಣ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಲೇಔಟ್‌ಗಳಿಗೆ ಶುಲ್ಕ ವಿಧಿಸುತ್ತಿಲ್ಲ. ಇದರಿಂದ ಸಂಪನ್ಮೂಲ ಕ್ರೋಡೀಕರಣಕ್ಕೆ ಹಿನ್ನಡೆಯಾಗಲಿದೆ ಎಂದರು.
ಕಂದಾಯ ಬಾಕಿ 3 ಕೋಟಿ ರೂ.: ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೂ ಪಪಂಗೆ ಒಂದೇ ಒಂದು ವಿಶೇಷ ಅನುದಾನ ಬಂದಿಲ್ಲ. ವಿವಿಧ ಕಂದಾಯ ಮತ್ತು ನೀರಿನ ಬಾಕಿ 3 ಕೋಟಿ ರೂ. ಇದೆ. ಇದರ ವಸೂಲಾತಿಗೆ ಕ್ರಮ ಕೈಗೊಳ್ಳುವಂತೆ ಬಿಜೆಪಿ ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ ಆಗ್ರಹಿಸಿದರು. ಸದಸ್ಯರಾದ ರವೀಶ್ ಭಟ್ ಹಾಗೂ ಯತಿರಾಜ್ ಮಾತನಾಡಿ, ಕಳೆದ ನಾಲ್ಕು ಬಜೆಟ್‌ನಲ್ಲಿ ಆಗದಿರುವ ಕೆಲಸವನ್ನು ನೀವಾದರೂ ಮಾಡಿ ಮುಗಿಸಿ ಎಂದರು.
ಅನುದಾನ ವಾಪಸ್ ಪಡೆಯಿರಿ
ಆಶ್ರಯ ನಿವೇಶನ ಖರೀದಿಸಲು ಕುರುವಳ್ಳಿಯಲ್ಲಿರುವ ಪುತ್ತಿಗೆ ಮಠಕ್ಕೆ ಪಪಂನಿಂದ ಮುಂಗಡ ಹಣ ನೀಡಲಾಗಿತ್ತು. ಕಾನೂನು ತೊಡಕಿನಿಂದ ಒಪ್ಪಂದ ಮುರಿದು ಬಿದ್ದು ಹಲವಾರು ವರ್ಷಗಳೇ ಸಂದಿವೆ. ಆದ್ದರಿಂದ ಮಠಕ್ಕೆ ನೀಡಲಾಗಿದ್ದ ಹಣವನ್ನು ವಾಪಸ್ ಪಡೆಯುವ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಕಾಂಗ್ರೆಸ್ ಸದಸ್ಯ ಬಿ.ಆರ್.ರಾಘವೇಂದ್ರ ಶೆಟ್ಟಿ ಒತ್ತಾಯಿಸಿದರು. ಪಟ್ಟಣದ ಸಮಗ್ರ ಅಭಿವೃದ್ಧಿ ಸೇರಿ ಅಂಗವಿಕಲರ, ಹಿಂದುಳಿದ ವರ್ಗಗಳ ಜನರ ಹಿತವನ್ನು ಬಯಸಿರುವುದು ಗಮನಾರ್ಹವಾಗಿದೆ ಎಂದು ಉಪಾಧ್ಯಕ್ಷೆ ಗೀತಾ ರಮೇಶ್, ಬಿ.ಗಣಪತಿ ಅವರು ಮುಂಗಡ ಪತ್ರವನ್ನು ಸಮರ್ಥಿಸಿಕೊಂಡರು.
ವಿಲಿಯಂ ಮಾರ್ಟಿಸ್, ಜಯಪ್ರಕಾಶ್ ಶೆಟ್ಟಿ, ಸುಶೀಲಾ ಶೆಟ್ಟಿ, ಮಂಜುಳಾ ನಾಗೇಂದ್ರ, ನಮ್ರತಾ ಇತರರಿದ್ದರು.