ಶಿವಮೊಗ್ಗದ ಬಡವಾಣೆಯೊಂದಕ್ಕೆ ಗುರುವಾರ ಪೂರೈಕೆಯಾದ ಕಲುಷಿತ ನೀರು.
- ಕುಡಿಯುವ ನೀರು ಕಂಡು ಜನತೆ ಶಾಕ್
- ಪ್ರತಿ ವರ್ಷದ ಸಮಸ್ಯೆ ಎನ್ನುತ್ತಿರುವ ಜನರು
- ಮಳೆಯ ಪರಿಣಾಮ ಎಂದ ಅಧಿಕಾರಿಗಳು
ಶಿವಮೊಗ್ಗ: ಕೆಲವು ದಿನಗಳಿಂದ ಪೂರೈಕೆ (supply) ಆಗುತ್ತಿರುವ ಕುಡಿಯುವ (drinking) ನೀರಿನ ಗುಣಮಟ್ಟದ ಬಗ್ಗೆ ನಾಗರಿಕರಲ್ಲಿ ಚಿಂತೆ ಉಂಟಾಗಿದೆ. ತುಂಗಾ ಪಾನ ಅತ್ಯಂತ ಶ್ರೇಷ್ಠ ಎಂಬ ಉಕ್ತಿಯಿದೆ. ಆದರೆ ಈಗ ಪೂರೈಕೆಯಾಗುತ್ತಿರುವ ನೀರನ್ನು ನೋಡಿದರೆ ಅದನ್ನು ಕುಡಿಯುವುದಿರಲಿ ಸ್ನಾನ (bath) ಮಾಡುವುದಕ್ಕೂ ಹೆದರಿಕೆಯಾಗುತ್ತಿದೆ.
ಮಂಗಳವಾರ ಒಟಿ ರಸ್ತೆ, ಇಂದಿರಾ ಗಾಂಧಿ ಲೇಔಟ್, ಕಲ್ಲಹಳ್ಳಿ, ವಿನೋಬನಗರ, ಹೊಸಮನೆ, ಗೋಪಾಲಗೌಡ ಬಡಾವಣೆ, ಸೋಮಯ್ಯ ಲೇಔಟ್ ಮುಂತಾದ ಭಾಗಗಳ ನಿವಾಸಿಗಳು ಬೆಳಗ್ಗೆ ನಲ್ಲಿಯಲ್ಲಿ ಬಂದ ನೀರನ್ನು ಕಂಡು ಹೌಹಾರಿದ್ದಾರೆ. ಮೊದಲು ಒಂದೆರಡು ಬಕೆಟ್ ನೀರು ಬಂದ ಮೇಲೆ ಒಳ್ಳೆಯ ನೀರು ಬರಬಹುದೆಂದು ಕಾದಿದ್ದಾರೆ. ಆದರೆ ನಾಗರಿಕರ ನಿರೀಕ್ಷೆ ನಿಜವಾಗಲೇ ಇಲ್ಲ.
ಬಕೆಟ್‌ಗಳಲ್ಲಿ ಸಂಗ್ರಹಿಸಿದ ಕೆಂಪು ಬಣ್ಣದ ನೀರಿನ ಫೋಟೋ ಕ್ಲಿಕ್ಕಿಸಿದ ಜನರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಜಲಮಂಡಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ತುಂಗಾ ನದಿಯ ದಡದಲ್ಲಿರುವ ಜನರಿಗೆ ಇಂತಹ ನೀರು ಪೂರೈಕೆಯಾದರೆ ಹೇಗೆ? ನಾಳೆ ಸಾರ್ವತ್ರಿಕವಾಗಿ ಆರೋಗ್ಯ ಸಮಸ್ಯೆ ಉಂಟಾದರೆ ಯಾರು ಹೊಣೆ ಎಂದು ಪ್ರಶ್ನಿಸುತ್ತಿದ್ದಾರೆ.
ಮಳೆ ಬಂದಾಗ ಈ ರೀತಿ ಪ್ರತಿ ವರ್ಷವೂ ಮಣ್ಣು ಮಿಶ್ರಿತ ನೀರು ಪೂರೈಕೆಯಾಗುತ್ತದೆ. ವ್ಯಾಪಕ ಮಳೆಯಾಗಿ ಗಾಜನೂರು ಜಲಾಶಯದಲ್ಲಿ ತಿಳಿ ನೀರು ಸಂಗ್ರಹವಾದ ಬಳಿಕ ನೀರು ಸಹಜ ಸ್ಥಿತಿಗೆ ಮರಳುತ್ತದೆ. ಅಲ್ಲಿಯವರೆಗೂ ಇದೇ ನೀರನ್ನು ಬಳಸಬೇಕಾದುದು ಅನಿವಾರ್ಯ.
ಇದು ಪ್ರತಿ ವರ್ಷದ ಕತೆ
ಈ ಹಿಂದೆಯೂ ಮಣ್ಣಿನ ಬಣ್ಣದ ನೀರು ಪೂರೈಕೆ ಆಗುತ್ತಿರುವುದರ ಬಗ್ಗೆ ತೀವ್ರ ಚರ್ಚೆಯಾಗಿತ್ತು. ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಮುಖರು ನೀರು ಶುದ್ಧೀಕರಣ ಘಟಕ ಕೆ.ಆರ್.ವಾಟರ್ ವರ್ಕ್ಸ್‌ಗೆ ಭೇಟಿ ನೀಡಿ ಜಲಮಂಡಳಿ ಕಾರ್ಯಪಾಲಕ ಅಭಿಯಂತ ಜೀವನ್ ಮತ್ತಿತರ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದರು. ಮಳೆಯ ಕಾರಣದಿಂದ ನೀರಿನಲ್ಲಿ ಮಣ್ಣಿನಂಶ ಸೇರಿಲ್ಲ. ನೀರು ಶುದ್ಧೀಕರಣ ಹಾಗೂ ನಿರ್ವಹಣೆಯಲ್ಲಿ ಲೋಪ ಆಗಿರುವುದರಿಂದ ಮಣ್ಣಿನ ಬಣ್ಣದ ನೀರು ಸರಬರಾಜು ಆಗುತ್ತಿದೆ ಎಂಬ ಅಂಶವನ್ನು ಆಗ ಗುರುತಿಸಲಾಗಿತ್ತು. ನೀರು ಶುದ್ಧೀಕರಣ ಘಟಕದಲ್ಲಿರುವ ಮೂರು ಕ್ಲಾರಿ ಫ್ಲಕ್ಚುವೇಟರ್ ಕಾರ್ಯವನ್ನು ನಿಲ್ಲಿಸಿವೆ. ನೀರು ಶುದ್ಧೀಕರಣ ಪ್ರಕ್ರಿಯೆಯಲ್ಲಿ ಶೇ.85 ಶುದ್ಧೀಕರಣ ಈ ಹಂತದಲ್ಲಿಯೇ ಆಗುತ್ತದೆ. ಪ್ರಯೋಗಾಲಯದ ಉಪಕರಣಗಳು ಕೆಲಸ ಮಾಡುತ್ತಿಲ್ಲ. ಸರಿಯಾದ ಪ್ರಮಾಣದಲ್ಲಿ ಆಲಂ ಬಳಕೆ ಮಾಡುತ್ತಿಲ್ಲ. ಕ್ಲೋರಿನ್ ಅಳತೆ ಮಾಡುವ ಎರಡೂ ಮಾಪಕಗಳು ಹಾಳಾಗಿವೆ. ಹೀಗಾಗಿ ನೀರಿಗೆ ಅವೈಜ್ಞಾನಿಕವಾಗಿ ಕ್ಲೋರಿನ್ ಸೇರಿಸಲಾಗುತ್ತಿದೆ ಎಂದು ಆ ಸಂದರ್ಭದಲ್ಲಿ ವಾಸ್ತವಾಂಶ ಪತ್ತೆ ಮಾಡಲಾಗಿತ್ತು. ಈಗಲೂ ಇಂತಹ ಲೋಪಗಳಾಗಿರುವ ಅನುಮಾನಗಳಿವೆ.
ಕುಡಿಯುವ ನೀರು ಎಷ್ಟು ಶುದ್ಧವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು 13 ಬಗೆಯ ಪರೀಕ್ಷೆಗಳನ್ನು ನಡೆಸಬೇಕೆಂಬ ಮಾನದಂಡವಿದೆ. ಜನರಿಗೆ ಪ್ರತಿದಿನ ನೀರು ಪೂರೈಸುವ ಮುನ್ನ ಮೂರು ಅಥವಾ ಕನಿಷ್ಠ ಎರಡು ಬಾರಿಯಾದರೂ ನೀರನ್ನು ಪರೀಕ್ಷೆಗೆ ಒಳಪಡಿಸಿ, ಮಾನದಂಡಕ್ಕೆ ಸರಿಸಮನಾಗಿದ್ದರೆ ಮಾತ್ರ ನೀರು ಪೂರೈಕೆ ಮಾಡಬೇಕು. ಮೊದಲು ಆಲಂ ಪರೀಕ್ಷೆ ನಡೆಸಬೇಕು. ಆಗ ನೀರಿನಲ್ಲಿನ ಮಣ್ಣಿನ ಅಂಶ ಕೆಳಗೆ ಕೂರುತ್ತದೆ. ಬಳಿಕ ಕ್ಲೋರಿನ್ ಪರೀಕ್ಷೆ ನಡೆಸಬೇಕು. ಇದರಿಂದ ನೀರಿನಲ್ಲಿರುವ ಬ್ಯಾಕ್ಟೀರಿಯಾ ಸಹಿತ ರೋಗಾಣುಗಳು ಪತ್ತೆಯಾಗುತ್ತವೆ. ಪಿಎಚ್ ಪ್ರಮಾಣ, ಫೋರಿನ್ ಪರೀಕ್ಷೆ, ಅಸಿಡಿಟಿ ಪರೀಕ್ಷೆ, ಸೀಸ-ಆರ್ಸೆನಿಕ್ ಪ್ರಮಾಣದ ಪರೀಕ್ಷೆಗಳನ್ನೂ ನಡೆಸಿ ಶುದ್ಧ ನೀರು ಪೂರೈಸಬೇಕು.
ತುಂಗೆಗೆ ಸೇರುತ್ತಿದೆ ತ್ಯಾಜ್ಯ
ಕೆ.ಆರ್ ವಾಟರ್ ವರ್ಕ್ಸ್ ಆವರಣದಲ್ಲಿರುವ ಜಲ ಶುದ್ಧೀಕರಣ ಘಟಕದಿಂದ ಪ್ರತಿ ದಿನ 84 ಮಿಲಿಯನ್ ಲೀಟರ್ ನೀರು ನಗರದ ವಿವಿಧ ಬಡಾವಣೆಗಳಿಗೆ ಪೂರೈಕೆಯಾಗುತ್ತದೆ. ಈಗ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಗೆ ನೀರು ನಿರ್ವಹಣೆ ಹಾಗೂ ಪೂರೈಕೆ ಹೊಣೆ ವಹಿಸಲಾಗಿದೆ. ಇಲ್ಲಿ ಸಿಬ್ಬಂದಿ ಕೊರತೆಯೂ ಇದೆ. ತುಂಗಾ ನದಿಗೆ ಹಲವು ಕಡೆಗಳಲ್ಲಿ ತ್ಯಾಜ್ಯ ಸೇರುತ್ತಿರುವುದು ಎಲ್ಲರೂ ಬಲ್ಲ ಸಂಗತಿ. ಕೆಲವೆಡೆ ನದಿಗೆ ಸೇರುವ ತ್ಯಾಜ್ಯವನ್ನು ನೋಡಿದರೆ ನೀರು ಕುಡಿಯುವ ಮುನ್ನ ಹತ್ತಾರು ಬಾರಿ ಯೋಚನೆ ಮಾಡುವ ಸ್ಥಿತಿಯಿದೆ. ತುಂಗೆಯ ನೀರಿನಲ್ಲಿ ಅಗತ್ಯ ಪ್ರಮಾಣಕ್ಕಿಂತ ಹೆಚ್ಚಿನ ಅಲ್ಯುಮಿನಿಯಂ ಅಂಶ ಇದೆ ಎಂಬ ಸಂಗತಿ ಈಗಾಗಲೆ ಬಯಲಾಗಿದೆ. ಇದೆಲ್ಲದರ ನಡುವೆ ಕಂದು ಬಣ್ಣದ ನೀರು ಪೂರೈಕೆಯಾದರೆ ಜನರು ಸಹಜವಾಗಿಯೇ ಆತಂಕಕ್ಕೀಡಾಗುತ್ತಾರೆ. ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ತೀವ್ರ ಮಳೆ ಬಂದಾಗ ಶುದ್ಧೀಕರಣಕ್ಕೆ ಬೆರೆಸುವ ಔಷಧಗಳನ್ನು ಜಾಸ್ತಿ ಪ್ರಮಾಣದಲ್ಲಿ ಹಾಕಲಾಗುತ್ತದೆ. ಕಳೆದ ಎರಡು ದಿನಗಳಿಂದ ನೀರು ಶುದ್ಧೀಕರಣಕ್ಕೆ ಹೆಚ್ಚಿನ ಪ್ರಯತ್ನ ಪಡುತ್ತಿದ್ದೇವೆ. ಆದರೂ ಮಣ್ಣಿನ ಬಣ್ಣ ಹೋಗುತ್ತಿಲ್ಲ. ನೀರು ತಿಳಿಯಾದ ಮೇಲೆ ಸರಿಯಾಗಲಿದೆ.