ತರಬೇತಿನಿರತ ಪಶುವೈದ್ಯೆ ಸಮೀಕ್ಷಾ ರೆಡ್ಡಿ 
ಶಿವಮೊಗ್ಗ

ಸಮೀಕ್ಷಾ ರೆಡ್ಡಿ ಪ್ರಕರಣದ ವರದಿ ಸಚಿವರ ಕೈಗೆ | Dr.Samiksha Reddy case

ಪ್ರಮುಖ ಮುಖ್ಯಾಂಶಗಳು

  • ನೀರಾನೆ ದಾಳಿಯಿಂದ ಮೃತಪಟ್ಟಿದ್ದ ಟ್ರೈನಿ ವೈದ್ಯೆ ಸಮೀಕ್ಷಾ ರೆಡ್ಡಿ
  • ಅರಣ್ಯ ಸಚಿವ ಈಶ್ವರ ಖಂಡ್ರೆಗೆ ಸಮಗ್ರ ತನಿಖಾ ವರದಿ ಸಲ್ಲಿಕೆ
  • ಸಿಸಿಎಫ್ ಡಾ. ಕೆ.ಟಿ.ಹನುಮಂತಪ್ಪ ಅವರಿಂದ ತನಿಖೆ ಪೂರ್ಣ
ಶಿವಮೊಗ್ಗ: ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿ ನೀರಾನೆ ದಾಳಿಯಿಂದ ಮೃತಪಟ್ಟ ತರಬೇತಿನಿರತ ಪಶುವೈದ್ಯೆ ಸಮೀಕ್ಷಾ ರೆಡ್ಡಿ(Dr.Samiksha Reddy) ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗ ಅರಣ್ಯ ವೃತ್ತದ ಸಿಸಿಎಫ್(ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ) ಸಮಗ್ರ ತನಿಖಾ ವರದಿಯನ್ನು ಅರಣ್ಯ ಸಚಿವರಿಗೆ ಸಲ್ಲಿಸಿದ್ದಾರೆ.
ಅರಣ್ಯ ಸಚಿವ ಈಶ್ವರ ಖಂಡ್ರೆ(Ishwara Khandre) ಅವರಿಗೆ ಸಲ್ಲಿಸಿದ ತನಿಖಾ ವರದಿ(Investigation report)ಯಲ್ಲಿ ಇಂತಹ ಅಹಿತಕರ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಸೂಕ್ತ ಭದ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮಾ.20ರ ರಾತ್ರಿ ಥರ್ಮಲ್ ಕ್ಯಾಮರಾ(Thermal camera) ಮೂಲಕ ಪ್ರಾಣಿಗಳ ದೇಹ ತಾಪಮಾನ ಪರಿಶೀಲಿಸುವ ವೇಳೆ ನೀರಾನೆ ದಾಳಿ ಮಾಡಿದ್ದು, ಡಾ. ಸಮೀಕ್ಷಾ ರೆಡ್ಡಿ ಚಿಕಿತ್ಸೆ ಫಲಿಸದೆ ಮರುದಿನ ಬೆಳಗ್ಗೆ ಮೃತಪಟ್ಟಿದ್ದರು. ಈ ಬಗ್ಗೆ ಸಮಗ್ರ ತನಿಖೆ ಮಾಡುವಂತೆ ಈಶ್ವರ ಖಂಡ್ರೆ ಆದೇಶಿಸಿದ್ದರು.
ತನಿಖಾ ತಂಡದ ನೇತೃತ್ವದ ವಹಿಸಿದ್ದ ಸಿಸಿಎಫ್(Ccf) ಡಾ. ಕೆ.ಟಿ.ಹನುಮಂತಪ್ಪ ಅವರು ಘಟನೆ ಕುರಿತು ತನಿಖೆ ನಡೆಸಿ ವರದಿಯನ್ನು ಸಚಿವರಿಗೆ ಸಲ್ಲಿಸಿದ್ದಾರೆ. ವರದಿಯಲ್ಲಿ ಘಟನೆ ಸಂಭವಿಸಿದ ಸಂದರ್ಭ, ಭದ್ರತಾ ವ್ಯವಸ್ಥೆ ಹಾಗೂ ಸಿಬ್ಬಂದಿ ಕಾರ್ಯವಿಧಾನದ ಬಗ್ಗೆ ವಿವರವಾಗಿ ಉಲ್ಲೇಖಿಸಿದ್ದಾರೆ.
ಮುಂದಿನ ದಿನಗಳಲ್ಲಿ ಮೃಗಾಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಹೆಚ್ಚುವರಿ ಭದ್ರತಾ ಮಾರ್ಗಸೂಚಿಗಳು, ತರಬೇತಿ ಹಾಗೂ ತಂತ್ರಜ್ಞಾನ ಬಳಕೆ ಬಲಪಡಿಸುವಿಕೆ, ಪ್ರಾಣಿಗಳ ನಿರ್ವಹಣೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವುದು ಸೇರಿ ಹಲವು ಅಂಶಗಳನ್ನು ನಮೂದಿಸಿದ್ದಾರೆ.

ವಾಟ್ಸ್‌ಆ್ಯಪ್ ಸಂದೇಶ ವೈರಲ್

ಟ್ರೈನಿ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಅವರ ಹಳೆಯ ವಾಟ್ಸ್‌ಆ್ಯಪ್ ಸಂದೇಶಗಳು ಇದೀಗ ವೈರಲ್ ಆಗಿವೆ. ಈ ಸಂದೇಶಗಳಲ್ಲಿ ಲಯನ್ಸ್ ಸಫಾರಿ ವಿಭಾಗದಲ್ಲಿ ಭದ್ರತಾ ಹಾಗೂ ಪ್ರಾಣಿಗಳ ಆರೈಕೆ ವ್ಯವಸ್ಥೆಯಲ್ಲಿ ಕೆಲವು ಕೊರತೆಗಳಿವೆ ಎಂದು ಉಲ್ಲೇಖಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷರ್, ವಾಟ್ಸ್‌ಆ್ಯಪ್ ಸಂದೇಶಗಳು ಬಂದ ನಂತರವೇ ಹುಲಿ ಮತ್ತು ಸಿಂಹಧಾಮದಲ್ಲಿ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ವೈರಲ್ ಆಗಿರುವ ಚಾಟ್‌ಗಳಲ್ಲಿ ಹೇಳಿರುವ ವಿಷಯಗಳಲ್ಲಿ ಕೆಲವೊಂದು ಸತ್ಯವಾಗಿದ್ದರೂ ಅವುಗಳನ್ನು ಗಮನದಲ್ಲಿಟ್ಟು ತಕ್ಷಣ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ತನಿಖಾ ತಂಡಕ್ಕೆ ಸಲ್ಲಿಸಿದ್ದು, ಸರ್ಕಾರದ ನಿರ್ಧಾರಕ್ಕೆ ಅನುಗುಣವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
"

ಡಾ. ಸಮೀಕ್ಷಾ ರೆಡ್ಡಿ ಸಾವಿನ ಬಗ್ಗೆ ತನಿಖೆ ನಡೆಸಿ ಅರಣ್ಯ ಸಚಿವರಿಗೆ ಸಲ್ಲಿಸಲಾಗಿದೆ. ವರದಿಯ ಕೆಲವು ಅಂಶಗಳ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಲಾಗಿದೆ. ಸಚಿವರು ವರದಿ ಪರಿಶೀಲಿಸಿದ ಬಳಿಕ ಅಗತ್ಯ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.