ತುಂಗಾನದಿಯಲ್ಲಿ ಬಿಡಾರದ ಆನೆಗಳಿಗೆ ಸ್ನಾನ ಮಾಡಿಸುತ್ತಿರುವುದು.
- ಸರ್ಕಾರದಿಂದಲೇ ಆದೇಶ ಜಾರಿ ದುಬಾರೆ ದುರ್ಘಟನೆ ಹಿನ್ನೆಲೆಯಲ್ಲಿ ಕ್ರಮ
- ಮೇ 22ರಿಂದ ಪ್ರವಾಸಿಗರಿಗೆ ಪ್ರವೇಶ ನಿಷೇಧ
ಶಿವಮೊಗ: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಸಕ್ರೆಬೈಲು (sakrebailu) ಆನೆ ಬಿಡಾರ ಬಂದ್ ಆಗಿದೆ. ಮೇ 22ರಿಂದ ಯಾವುದೇ ಪ್ರವಾಸಿಗರಿಗೆ (tourist) ಪ್ರವೇಶ ನೀಡದಿರಲು ಸರ್ಕಾರ (goverment) ಆದೇಶಿಸಿದೆ. ದುಬಾರೆ ಆನೆ ಬಿಡಾರದಲ್ಲಿ ಸಂಭವಿಸಿದ ದುರ್ಘಟನೆ ಬಳಿಕ ಸಕ್ರೆಬೈಲು ಆನೆ ಬಿಡಾರವನ್ನೂ ಬಂದ್ ಮಾಡಲಾಗಿದೆ.
ರಾಜ್ಯದಲ್ಲಿರುವ ಎಲ್ಲ ಆನೆ ಬಿಡಾರಗಳಲ್ಲಿ ಎಸ್‌ಒಪಿ (ಪ್ರಮಾಣಿತ ಕಾರ್ಯ ವಿಧಾನ) ಜಾರಿಗೊಂಡ ಬಳಿಕವಷ್ಟೇ ಎಲಿಫೆಂಟ್ ಕ್ಯಾಂಪ್‌ಗಳಿಗೆ ಪ್ರವೇಶ ನೀಡಲು ತೀರ್ಮಾನಿಸಲಾಗಿದೆ. ಹೀಗಾಗಿ ಸದ್ಯಕ್ಕೆ ಸಕ್ರೆಬೈಲು ಆನೆ ಕ್ಯಾಂಪ್‌ನೊಳಗೆ ಪ್ರವಾಸಿಗರು ತೆರಳಲು ಸಾಧ್ಯವಿಲ್ಲ.
ದುಬಾರೆ ಆನೆ ಕ್ಯಾಂಪ್‌ನಲ್ಲಿ ಆನೆಗಳಿಗೆ ಸ್ನಾನ ಮಾಡಿಸುತ್ತಿದ್ದ ವೇಳೆ ಎರಡು ಆನೆಗಳು ಪರಸ್ಪರ ಕಾದಾಡುವಾಗ ಮಹಿಳೆಯೊಬ್ಬರು ಸಿಲುಕಿ ಮೃತಪಟ್ಟಿದ್ದರು. ಸಕ್ರೆಬೈಲು ಬಿಡಾರದಲ್ಲೂ ಆನೆಗಳಿಗೆ ಸ್ನಾನ ಮಾಡಿಸುವ ಸಂದರ್ಭದಲ್ಲಿ ಪ್ರವಾಸಿಗರು ಅವುಗಳ ಸನಿಹಕ್ಕೆ ತೆರಳಲು ಅವಕಾಶ ನೀಡಲಾಗುತ್ತಿತ್ತು. ಹಾಗಾಗಿ ಮುಂಜಾಗ್ರತಾ ಕ್ರಮದ ಕಾರಣಕ್ಕೆ ಬಿಡಾರವನ್ನೇ ಬಂದ್ ಮಾಡಲಾಗಿದೆ.
ವಾಸ್ತವದಲ್ಲಿ ಗುರುವಾರವೇ ಪ್ರವಾಸಿಗರಿಗೆ ಪ್ರವೇಶ ನೀಡದಿರಲು ತೀರ್ಮಾನಿಸಲಾಗಿತ್ತು. ಆದರೆ ಗುರುವಾರ ಬೆಳಗ್ಗೆಯೇ ಸಾಲು ಸಾಲು ಪ್ರವಾಸಿಗರು ಆಗಮಿಸಿದ್ದ ಕಾರಣ ಅವರನ್ನು ನಿರಾಸೆಗೊಳಿಸದಿರಲು ತೀರ್ಮಾನಿಸಿ ಒಂದು ದಿನದ ಮಟ್ಟಿಗೆ ಅವಕಾಶ ನೀಡಲಾಗಿತ್ತು. ಅವರೆಲ್ಲರೂ ತೆರಳಿದ ಬಳಿಕ ಬಿಡಾರದ ಗೇಟ್‌ಗೆ ಪ್ರವೇಶವಿಲ್ಲ ಎಂಬ ಬೋರ್ಡ್ ಹಾಕಲಾಗಿದೆ.
ಪ್ರತಿದಿನ ಪ್ರವಾಸಿಗರಿಂದ ತುಂಬಿರುತ್ತಿದ್ದ ಸಕ್ರೆಬೈಲು ಆನೆ ಬಿಡಾರ ಇನ್ನು ಕೆಲವು ದಿನಗಳ ಕಾಲ ಬಿಕೋ ಎನ್ನಲಿದೆ. ಸರ್ಕಾರದ ಈ ತೀರ್ಮಾನ ಪ್ರವಾಸಿಗರಿಗೂ ಬೇಸರ ಮೂಡಿಸಿದೆ. ಆದರೆ ಪ್ರವಾಸಿಗರ ಹಿತದೃಷ್ಟಿಯಿಂದ ಇದು ಅನಿವಾರ್ಯವೂ ಆಗಿತ್ತು.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತೆ ದುಬಾರೆ ಕ್ಯಾಂಪ್‌ನಲ್ಲಿ ನಡೆದ ಘಟನೆಯನ್ನೇ ನೆಪವಾಗಿಟ್ಟುಕೊಂಡು ಸಕ್ರೆಬೈಲು ಬಿಡಾರವನ್ನು ಬಂದ್ ಮಾಡುವುದು ಎಷ್ಟು ಸರಿ ಎಂದು ಪ್ರವಾಸಿಗರು ಪ್ರಶ್ನಿಸುತ್ತಿದ್ದಾರೆ. ಯಾವುದೋ ಅನಾಹುತ ಸಂಭವಿಸಿದ ಮೇಲಷ್ಟೇ ಎಸ್‌ಒಪಿ ನಿಗದಿಗೆ ಮುಂದಾಗಿರುವ ಸರ್ಕಾರ ಇಷ್ಟು ವರ್ಷ ಏನು ಮಾಡುತ್ತಿತ್ತು ಎಂದು ಅನೇಕರು ಕಿಡಿಕಾರಿದ್ದಾರೆ. ಆನೆಗಳ ಸನಿಹಕ್ಕೆ ಪ್ರವಾಸಿಗರನ್ನು ಬಿಡದೆ ದೂರದಿಂದ ಅವುಗಳ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದರೆ ಯಾರಿಗೂ ನಿರಾಸೆ ಆಗುತ್ತಿರಲಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.
ಆದಾಯ ಖೋತಾ
ಜಿಲ್ಲೆಯಲ್ಲಿ ಅತಿ ಹೆಚ್ಚು ಆದಾಯ ತಂದುಕೊಡುವ ಪ್ರವಾಸಿ ತಾಣಗಳ ಪೈಕಿ ಸಕ್ರೆಬೈಲು ಬಿಡಾರಕ್ಕೆ ಎರಡನೇ ಸ್ಥಾನ. ಇಲ್ಲಿ ಪ್ರವೇಶ ಶುಲ್ಕ ಮಾತ್ರವಲ್ಲದೆ ಆನೆಗಳಿಗೆ ಸ್ನಾನ ಮಾಡಿಸಲು 100 ರೂ. ಪಾವತಿಸಬೇಕಾಗುತ್ತದೆ. ಈಗ ಬೇಸಿಗೆ ರಜೆ ಇರುವುದರಿಂದ ಪ್ರವಾಸಿಗರ ಸಂಖ್ಯೆ ಪ್ರತಿದಿನ ಸಾವಿರದಲ್ಲಿದೆ. ವಾರಂತ್ಯದಲ್ಲೂ ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ. ಬಿಡಾರ ಹಾಗೂ ಸಿಬ್ಬಂದಿ ನಿರ್ವಹಣೆ ಜತೆಗೆ ಆನೆಗಳ ನಿರ್ವಹಣೆಗೂ ಈ ಆದಾಯದಿಂದ ಅನುಕೂಲವಾಗುತ್ತಿತ್ತು. ಈಗ ಅನಿರ್ದಿಷ್ಟಾವಧಿಗೆ ಬಿಡಾರ ಮುಚ್ಚಿರುವುದರಿಂದ ಆದಾಯಕ್ಕೂ ಕತ್ತರಿ ಬಿದ್ದಿದೆ.
ಬಿಡಾರ ಪುನಃ ಸಾರ್ವಜನಿಕರಿಗೆ ಮುಕ್ತವಾಗುವವರೆಗೂ ಆನೆಗಳನ್ನು ಬಿಡಾರಕ್ಕೆ ಕರೆತರುವುದಿಲ್ಲ ಎಂದು ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಬಿಡಾರದಿಂದ ಅನತಿ ದೂರದಲ್ಲಿ ಸಾರ್ವಜನಿಕರಿಗೆ ನಿಷೇಧಿತ ಪ್ರದೇಶವಾಗಿರುವ ಕ್ರಾಲ್‌ನಲ್ಲಿ ಎರಡು ಆನೆಗಳಿವೆ. ಇದರಲ್ಲಿ ಒಂದು ಆನೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಅದಕ್ಕೆ ಹೈಡ್ರೋಥೆರಪಿ ನೀಡಲಾಗುತ್ತಿದೆ. ಇತ್ತೀಚಿಗೆ ಬಾಳೆಹೊನ್ನೂರು ಸಮೀಪ ಸೆರೆ ಹಿಡಿದ ಕಾಡಾನೆಯೊಂದನ್ನು ಕ್ರಾಲ್‌ನಲ್ಲಿಟ್ಟು ಪಳಗಿಸಲಾಗುತ್ತಿದೆ. ಇನ್ನುಳಿದ 24 ಆನೆಗಳನ್ನು ಮಧ್ಯಾಹ್ನದವರೆಗೆ ಕ್ರಾಲ್ ಸಮೀಪವೇ ಇರಿಸಲಾಗುವುದು. ಇವುಗಳಿಗೆ ಅರಣ್ಯದೊಳಗಿರುವ ಕೆರೆಗಳಲ್ಲೇ ಸ್ನಾನ ಮಾಡಿಸಲಾಗುವುದು ಎಂದಿದ್ದಾರೆ.
ಭದ್ರಾ ಸಫಾರಿಗೂ ಹೊಡೆತ
ಅಭಯಾರಣ್ಯದಲ್ಲಿ ತೆರೆದ ವಾಹನದಲ್ಲಿ ಸಫಾರಿ ತೆರಳಬಾರದು ಎಂಬ ಮೌಖಿಕ ಆದೇಶವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ನೀಡಿದ್ದಾರೆ. ಅಧಿಕೃತ ಆದೇಶ ಇನ್ನೂ ಹೊರಬಿದ್ದಿಲ್ಲ. ಭದ್ರಾ ಅಭಯಾರಣ್ಯದಲ್ಲಿ ಪ್ರಸ್ತುತ ಅರಣ್ಯ ಇಲಾಖೆಯಿಂದ ಎರಡು ಜೀಪ್ ಹಾಗೂ ಒಂದು ಬಸ್ ಒದಗಿಸಲಾಗಿದೆ. ಜಂಗಲ್ ರೆಸಾರ್ಟ್‌ನಿಂದ ಐದು ಜೀಪ್‌ಗಳಿವೆ. ತೆರೆದ ವಾಹನದಲ್ಲಿ ಸಫಾರಿ ಮಾಡುವುದೇ ವಿಶೇಷ ಅನುಭವ. ಇದಕ್ಕಾಗಿ ರಾಜ್ಯ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರು ಭದ್ರಾ ಅಭಯಾರಣ್ಯಕ್ಕೆ ಬರುತ್ತಿದ್ದಾರೆ. ಇದರ ಹಿಂದೆ ದೊಡ್ಡದೊಂದು ಟೂರಿಸಂ ಎಕಾನಮಿ ಕೆಲಸ ಮಾಡುತ್ತಿದೆ. ತೆರೆದ ವಾಹನ ನಿಷೇಧಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದರೆ ಜಿಲ್ಲೆಯ ಪರಿಸರ ಪ್ರವಾಸೋದ್ಯಮಕ್ಕೆ ವ್ಯಾಪಕ ನಷ್ಟವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
"
ರಾಜ್ಯ ಸರ್ಕಾರದ ಹೊಸದಾಗಿ ಎಸ್‌ಒಪಿ ಜಾರಿಗೊಳಿಸಿ ಅದನ್ನು ಆನೆ ಬಿಡಾರದಲ್ಲಿ ಅಳವಡಿಸಿಕೊಳ್ಳುವವರೆಗೂ ಸಾರ್ವಜನಿಕರಿಗೆ ಪ್ರವೇಶ ನೀಡುವಂತಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಇಂತಹ ಆದೇಶವನ್ನು ನಮಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರದಿಂದಲೇ ಬಿಡಾರವನ್ನು ಬಂದ್ ಮಾಡಲಾಗುತ್ತಿದೆ.
— ಪ್ರಸನ್ನಕೃಷ್ಣ ಪಟಗಾರ್ ವನ್ಯಜೀವಿ ವಿಭಾಗದ ಡಿಎಫ್‌ಒ