ಸಾಗರ: ತಾಲೂಕಿನ ಬೇಸೂರು ಅಣು ವಿದ್ಯುತ್ ಸ್ಥಾವರ ಯೋಜನೆ ಕೈಬಿಟ್ಟಿರುವುದಾಗಿ ಎನ್‌ಟಿಪಿಸಿ ಅಧಿಕೃತ ಘೋಷಣೆ ಮಾಡುವವರೆಗೂ ಹೋರಾಟ ನಡೆಯುತ್ತದೆ ಎಂದು ಮಲೆನಾಡು ಗಣಿ ವಿರೋಧಿ ಹೋರಾಟ ವೇದಿಕೆ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು ಹೇಳಿದರು.
ಅಣು ವಿದ್ಯುತ್ ಸ್ಥಾವರ ಯೋಜನೆ ವಿರೋಧಿಸಿ ಹಾಗೂ ಮಲೆನಾಡು ಭಾಗದ ಪರಿಸರ, ಜನರ ಜೀವನದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರದ ಪ್ರಮುಖ ಸಚಿವರನ್ನು ಭೇಟಿ ಮಾಡುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯೋಜನೆ ಪ್ರಸ್ತಾಪ ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ 21ರಿಂದ ಹಮ್ಮಿಕೊಂಡಿದ್ದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಮೇ 27ರಂದು ನಡೆಯಬೇಕಿದ್ದ ಪ್ರತಿಭಟನೆ ಕೈಬಿಡಲಾಗಿದೆ ಎಂದರು.
ಬೇಸೂರು ಅಣು ವಿದ್ಯುತ್ ಸ್ಥಾವರ ವಿರೋಧಿಸಿ ಹಮ್ಮಿಕೊಂಡಿರುವ ಹೋರಾಟ ಮುಗಿದಿಲ್ಲ. ಸಾರ್ವಜನಿಕ ಪ್ರತಿಭಟನೆ ಮುಗಿದರೂ ಸಾಮಾಜಿಕ ಜಾಲತಾಣ ಹಾಗೂ ಇನ್ನಿತರ ಮಾಧ್ಯಮದ ಮೂಲಕ ಜನಜಾಗೃತಿ ಕಾರ್ಯಕ್ರಮ ನಡೆಯುತ್ತದೆ ಎಂದರು.
ಮೇ 27ರಂದು ಶಿವಮೊಗ್ಗದಲ್ಲಿ ವಿವಿಧ ಸಂಘಟನೆಗಳು ಬೇಸೂರು ಅಣು ವಿದ್ಯುತ್ ಸ್ಥಾವರ ವಿರೋಧಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತಿದ್ದು, ನಮ್ಮ ತಂಡ ಪಾಲ್ಗೊಳ್ಳಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜೂ.20ರೊಳಗೆ ಯೋಜನೆ ಕೈಬಿಟ್ಟಿರುವ ಕುರಿತು ಲಿಖಿತ ಆದೇಶ ಹೊರಡಿಸಬೇಕು ಎಂದರು. ಶಿವಾನಂದ ಗೌಡ, ಲೋಕೇಶ್, ನಾಗರಾಜ್, ಭಾಸ್ಕರ, ಹರೀಶ್ ಸುದ್ದಿಗೋಷ್ಠಿಯಲ್ಲಿದ್ದರು.