ತಾಲೂಕಿನ ಹಿತ್ತಲ ಗ್ರಾಮದಲ್ಲಿ ನಿರ್ಮಿಸಿರುವ ಕೃಷಿ ಸಹ್ಯಾದ್ರಿ ತಂಡದ ಮಾಹಿತಿ ಕೇಂದ್ರ ಹಾಗೂ ಕೈತೋಟವನ್ನು ಡಾ. ದುಶ್ಯಂತ್‌ಕುಮಾರ್, ಡಾ. ಶಶಿಧರ್, ಡಾ. ಶಿವಣ್ಣ ಮತ್ತಿತರರು ಉದ್ಘಾಟಿಸಿದರು. ಡಾ. ಸಹನಾ, ಪರಮೇಶ್ವರಪ್ಪ ಇತರರಿದ್ದರು. 
ಶಿವಮೊಗ್ಗ

ಕೃಷಿ ಕಾರ್ಯಾನುಭವದಿಂದ ಗ್ರಾಮಾಭಿವೃದ್ಧಿ | Rural agriculture

ಶಿವಕುಮಾರ ಎಸ್.ಪಿ.
ಶಿಕಾರಿಪುರ: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ನಡೆಯುತ್ತಿರುವ ಕಾರ್ಯಗಳು ಗ್ರಾಮೀಣ ಅಭಿವೃದ್ಧಿಗೆ ಸಹಾಯಕವಾಗಿವೆ ಎಂದು ವಿವಿಯ ಸಂಶೋಧನ ನಿರ್ದೇಶಕ ಡಾ. ದುಷ್ಯಂತ್‌ಕುಮಾರ್ ಹೇಳಿದರು.
ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಹಿತ್ತಲ ಗ್ರಾಮದಲ್ಲಿ ಅಂತಿಮ ವರ್ಷದ ಬಿ.ಎಸ್ಸಿ ಕೃಷಿ ವಿದ್ಯಾರ್ಥಿಗಳು ಗ್ರಾಮಸ್ಥರಿಗಾಗಿ ನಿರ್ಮಿಸಿರುವ ಕೃಷಿ ಸಹ್ಯಾದ್ರಿ ತಂಡದ ಮಾಹಿತಿ ಕೇಂದ್ರ ಹಾಗೂ ಕೈತೋಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಲಸಚಿವ ಡಾ. ಶಶಿಧರ್ ಮಾತನಾಡಿ, ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ ಈಗಿನ ಕಾಲದ ಅಗತ್ಯ. ಮಾಹಿತಿ ಕೇಂದ್ರವು ರೈತರಿಗೆ ಒಂದೇ ಸ್ಥಳದಲ್ಲಿ ಕೃಷಿ ಸಂಬಂಧಿತ ಜ್ಞಾನ ನೀಡುವ ಮಹತ್ವದ ಕೇಂದ್ರವಾಗಲಿದೆ ಎಂದು ಹೇಳಿದರು.
ಗ್ರಂಥಪಾಲಕ ಡಾ. ಶಿವಣ್ಣ ಮಾತನಾಡಿ, ಮನೆಯಲ್ಲಿ ತರಕಾರಿ ಬೆಳೆಸುವುದು ಆರೋಗ್ಯ ಮತ್ತು ಆರ್ಥಿಕ ದೃಷ್ಟಿಯಿಂದ ಒಳ್ಳೆಯದು. ಪ್ರತಿ ಮನೆಯಲ್ಲೂ ಕೈತೋಟ ಬೆಳೆಸುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಸಂಯೋಜಕಿ ಡಾ. ಸಹನಾ, ಕಾರ್ಯಕ್ರಮದ ಉದ್ದೇಶ, ಗ್ರಾಮಸ್ಥರು-ವಿದ್ಯಾರ್ಥಿಗಳು ಪರಸ್ಪರ ಕಲಿಕೆಯ ಅವಕಾಶಗಳ ಬಗ್ಗೆ ವಿವರಿಸಿದರು.
ಊರಿನ ಮುಖಂಡ ಪರಮೇಶ್ವರಪ್ಪ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ನೀಡಿರುವ ಕೀಟ ರೋಗ ನಿರ್ವಹಣೆ ಮಾಹಿತಿ ನಮಗೆ ಅತ್ಯಂತ ಉಪಯುಕ್ತವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಹ ಸಂಯೋಜಕ ಡಾ. ನಿರಂಜನ್, ಕೃಷಿ ಮಹಾವಿದ್ಯಾಲಯದ ಸಿಬ್ಬಂದಿ, ಗ್ರಾಮ ಪಂಚಾಯಿತಿ, ಧರ್ಮದರ್ಶಿ ಕಮಿಟಿ ಸದಸ್ಯರು ಇದ್ದರು.