ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ 
ಶಿವಮೊಗ್ಗ

ರೈಲ್ವೆ ಯೋಜನೆಗಳಿಗೆ ಕೇಂದ್ರದಿಂದ 7,564 ಕೋಟಿ ರೂ. ಅನುದಾನ|railway grant

ಪ್ರಮುಖ ಮುಖ್ಯಾಂಶಗಳು

  • ಯುಪಿಎ ಅವಧಿಯಲ್ಲಿ ನೀಡುತ್ತಿದ್ದ ಹಣಕ್ಕಿಂತ ಅಧಿಕ
  • ಭೂಮಿ ನೀಡುತ್ತಿಲ್ಲ ರಾಜ್ಯ ಸರ್ಕಾರ
  • ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾಹಿತಿ
ಶಿವಮೊಗ್ಗ: ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯದ ರೈಲ್ವೆ(railway) ಯೋಜನೆಗಳಿಗೆ ವರ್ಷಕ್ಕೆ 835 ಕೋಟಿ ರೂ. ನೆರವು ಬರುತ್ತಿತ್ತು. ಆದರೆ ನರೇಂದ್ರ ಮೋದಿ(modi) ನೇತೃತ್ವದ ಸರ್ಕಾರ 2025-26ನೇ ಸಾಲಿಗೆ ರೈಲ್ವೆ ಯೋಜನೆಗಳಿಗೆ 7,564 ಕೋಟಿ ರೂ. ಅನುದಾನ ನೀಡಿದೆ. ಇದು ಯುಪಿಎ(upa) ಅವಧಿಗಿಂತಲೂ 9 ಪಟ್ಟು ಅಧಿಕ.
ಲೋಕಸಭೆಯಲ್ಲಿ ಬಿ.ವೈ.ರಾಘವೇಂದ್ರ ಅವರ ಪ್ರಶ್ನೆಗೆ ರೈಲ್ವೆ ಸಚಿವಾಲಯ ಉತ್ತರಿಸಿದ್ದು, ರಾಜ್ಯದ ರೈಲ್ವೆ ಯೋಜನೆಗಳಿಗೆ ನೀಡಿರುವ ಅನುದಾನದ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಯೋಜನೆಗಳಿಗೆ ಭೂಸ್ವಾಧೀನ ಮತ್ತು ವೆಚ್ಚ ಹಂಚಿಕೆಯ ತನ್ನ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ನಿರ್ವಹಿಸಿ ರೈಲ್ವೆ ಯೋಜನೆಗಳು ಶೀಘ್ರ ಪೂರ್ಣವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಬಿ.ವೈ.ರಾಘವೇಂದ್ರ ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ಕೇಂದ್ರ ಸರ್ಕಾರ 42,517 ಕೋಟಿ ರೂ. ವೆಚ್ಚದಲ್ಲಿ 3,264 ಕಿ.ಮೀ.ಗಳ 25 ಪ್ರಮುಖ ಯೋಜನೆಗಳನ್ನು (ಹೊಸ ಮಾರ್ಗಗಳು ಮತ್ತು ದ್ವಿಮುಖ ಮಾರ್ಗ) ಮಂಜೂರು ಮಾಡಿದೆ. ಕೇಂದ್ರ ಸರ್ಕಾರ ರೈಲ್ವೆ ಜಾಲದ ರೂಪದಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಅತ್ಯಂತ ಆಸಕ್ತಿವಹಿಸಿದೆ. ಇದು ಪ್ರಧಾನಿಯ ಕಾಳಜಿ ಮತ್ತು ದೂರದೃಷ್ಟಿಗೆ ಸಾಕ್ಷಿ ಎಂದು ತಿಳಿಸಿದ್ದಾರೆ.
ರಾಜ್ಯ ರೈಲ್ವೆ ಜಾಲದಲ್ಲಿ ಮತ್ತಷ್ಟು ಪರಿವರ್ತನೆ ತರುವ ನಿಟ್ಟಿನಲ್ಲಿ ಮತ್ತು ರಾಜ್ಯದ ಜನತೆಗೆ ಅನುಕೂಲ ಕಲ್ಪಿಸುವ ಈ ಪ್ರಮುಖ ಯೋಜನೆಗಳನ್ನು ಕಾರ್ಯಗತಗೊಳಿಸಲು ಭಾರತ ಸರ್ಕಾರ ಸಂಪೂರ್ಣ ಸಜ್ಜಾಗಿದ್ದರೂ ಅದರ ಯಶಸ್ಸು ರಾಜ್ಯ ಸರ್ಕಾರದ ಬೆಂಬಲವನ್ನು ಅವಲಂಬಿಸಿದೆ. ರಾಜ್ಯ ಸರ್ಕಾರ ಸೂಕ್ತ ಸಹಕಾರ ನೀಡಲಿ ಎಂದು ಮನವಿ ಮಾಡಿದ್ದಾರೆ.
ಭೂಸ್ವಾಧೀನದಲ್ಲಿ ಆಗುತ್ತಿರುವ ವಿಳಂಬವೇ ಯೋಜನೆಗಳ ಹಿನ್ನಡೆಗೆ ಕಾರಣ ಎಂದು ರೈಲ್ವೆ ಇಲಾಖೆ ಉಲ್ಲೇಖಿಸಿದೆ. ಇದು ಶಿವಮೊಗ್ಗ ಮಾತ್ರವಲ್ಲದೆ ರಾಜ್ಯದ ಒಟ್ಟಾರೆ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಮಲೆನಾಡು ಮತ್ತು ಮಧ್ಯ ಕರ್ನಾಟಕಕ್ಕೆ ಸಂಪರ್ಕ ಮತ್ತು ಆರ್ಥಿಕ ಬೆಳವಣಿಗೆಯನ್ನು ತರಬಲ್ಲ ಈ ಯೋಜನೆಗಳ ಜಾರಿಗೆ ಆಡಳಿತಾತ್ಮಕ ಸಹಕಾರದ ಜತೆಗೆ ರಾಜ್ಯ ತನ್ನ ಪಾಲಿನ ಹಣಕಾಸು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹೊಸ ಮಾರ್ಗ ಸದ್ಯಕ್ಕೆ ಸ್ಥಗಿತ

ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ಮಾರ್ಗ(96 ಕಿ.ಮೀ.) ಮತ್ತು ಶಿವಮೊಗ್ಗ-ಹರಿಹರ ಹೊಸ ಮಾರ್ಗ(79 ಕಿಮೀ) ಯೋಜನೆಗಳು ಜಾರಿಗೊಳ್ಳುವ ನಿಟ್ಟಿನಲ್ಲಿ ಪದೇಪದೆ ಕೇಂದ್ರಕ್ಕೆ ಪತ್ರ ಬರೆದು, ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಲಾಗಿತ್ತು. 50:50 ವೆಚ್ಚ ಹಂಚಿಕೆ ಆಧಾರದ ಮೇಲೆ ಮಂಜೂರಾದ ಶಿವಮೊಗ್ಗ-ರಾಣೆಬೆನ್ನೂರು ಯೋಜನೆ ಸದ್ಯಕ್ಕೆ ಸ್ಥಗಿತಗೊಂಡಿದೆ ಎಂದು ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಯೋಜನೆಗೆ ಅಗತ್ಯವಿರುವ 559 ಹೆಕ್ಟೇರ್‌ನಲ್ಲಿ 226 ಹೆಕ್ಟೇರ್ ಮಾತ್ರ ಸ್ವಾಧೀನ ಪಡಿಸಿಕೊಂಡಿದ್ದು, ಇನ್ನೂ 333 ಹೆಕ್ಟೇರ್ ಸ್ವಾಧೀನ ಬಾಕಿ ಇದೆ. ಒಟ್ಟು 488 ಹೆಕ್ಟೇರ್ ಭೂಮಿ ಅಗತ್ಯವಿದ್ದ ಶಿವಮೊಗ್ಗ-ಹರಿಹರ ಯೋಜನೆಯನ್ನು ಸಂಪೂರ್ಣ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ವೆಚ್ಚ ಹಂಚಿಕೆ ಹಾಗೂ ಉಚಿತ ಭೂಮಿ ನೀಡದಿದ್ದುದು ಕಾರಣ ಎಂದಿದ್ದಾರೆ.