ಸೊರಬದ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನದ ಕಾಣಿಕೆ ಹಣ ಎಣಿಕೆ ಕಾರ್ಯದಲ್ಲಿ ಪ್ರಮೀಳಾಕುಮಾರಿ, ಶ್ರುತಿ, ಗ್ರಾಮ ಲೆಕ್ಕಿಗರು ಪಾಲ್ಗೊಂಡಿದ್ದರು.
ಸೊರಬ: ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ದೇವಸ್ಥಾನದ ಆಡಳಿತ ಮಂಡಳಿ ಕಚೇರಿಯಲ್ಲಿ ತಹಸೀಲ್ದಾರ್ ಕೆ.ಪುರಂದರ ಅವರ ಸಮ್ಮುಖದಲ್ಲಿ ನಡೆಯಿತು.
ಹುಣ್ಣಿಮೆ, ವಿಶೇಷ ದಿನಗಳಲ್ಲಿ ಭಕ್ತರು ಸಮರ್ಪಿಸಿದ ಕಾಣಿಕೆ ಹಣವನ್ನು ಎಣಿಕೆ ಮಾಡಲಾಯಿತು. ಮಾ.11ರಂದು ಕಾಣಿಕೆ ನಾಣ್ಯಗಳು ಮತ್ತು ನೋಟುಗಳನ್ನು ಎಣಿಸಲಾಗಿತ್ತು. ಈ ಬಾರಿ ದೇವಸ್ಥಾನದ ಹುಂಡಿಯಲ್ಲಿ ಒಟ್ಟು 33,90,580 ರೂ. ಕಾಣಿಕೆ ಹಣ ಸಂಗ್ರಹವಾಗಿದೆ. ಹುಂಡಿ ಎಣಿಕೆ ಕಾರ್ಯ ಕೊಠಡಿ ಸುತ್ತ ಸಿಸಿ ಕ್ಯಾಮರಾ ಅಳವಡಿಸಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.
ಎಣಿಕೆ ಕಾರ್ಯದಲ್ಲಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಮೀಳಾಕುಮಾರಿ, ಮುಜರಾಯಿ ಇಲಾಖೆ ವಿಷಯ ನಿರ್ವಾಹಕಿ ಶ್ರುತಿ, ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರು, ದೇವಸ್ಥಾನದ ಸಿಬ್ಬಂದಿ ಪಾಲ್ಗೊಂಡಿದ್ದರು.