ಸೊರಬ ತಾಪಂನಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜಯಶೀಲಗೌಡ ಮಾತನಾಡಿದರು. ಕೆ.ಜಿ.ಶಶಿಧರ, ಪ್ರಭಾಕರ ಶಿಗ್ಗಾ, ಮಂಜುನಾಥ ತಲಗಡ್ಡೆ ಇತರರಿದ್ದರು. 
ಶಿವಮೊಗ್ಗ

ಮೃತರ ಖಾತೆಗೆ 2.49 ಕೋಟಿ ರೂ. ಹಣ

ಸೊರಬ: ಮರಣ ಹೊಂದಿದ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆ ವಜಾಗೊಳಿಸಬೇಕು. ಒಂದೇ ಮನೆಯಲ್ಲಿ ಎರಡ್ಮೂರು ಪಡಿತರ ಚೀಟಿ ಹೊಂದಿದ ಕುಟುಂಬಗಳಲ್ಲಿ ಹಣ ಪಡೆಯುವವರನ್ನು ಪತ್ತೆ ಹಚ್ಚುವ ಕೆಲಸ ಆಗಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಚ್.ಕೆ.ಜಯಶೀಲ ಗೌಡ ಹೇಳಿದರು.
ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ 1,066 ಮೃತರ ಖಾತೆಗೆ 2,49,72,000 ರೂ. ಜಮೆಯಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು, ಆಹಾರ ಇಲಾಖೆ ಅಧಿಕಾರಿಗಳು ಸಮಗ್ರ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಹಿಂದಿನ ಸಭೆಯಲ್ಲೇ ಸೂಚಿಸಲಾಗಿತ್ತು ಎಂದರು.
ಮರಣ ಹೊಂದಿದವರ ಖಾತೆಯಿಂದ ಹಣ ಹಿಂಪಡೆಯಲು ಇಲಾಖೆಗೆ ಬರುವುದಿಲ್ಲ. ಸಂಬಂಧಪಟ್ಟ ಬ್ಯಾಂಕ್‌ನಲ್ಲಿ ಮಾಹಿತಿ ಇರುತ್ತದೆ. ಅವರು ಮೇಲಧಿಕಾರಿಗಳ ಅನುಮತಿ ಪಡೆದು ಮಾಡಬಹುದು. ಆದರೆ  ಮರಣ ಹೋಂದಿದವರ ಖಾತೆ ವಜಾ ಮಾಡಿದ್ದೇವೆ. ಏಪ್ರಿಲ್‌ವರೆಗೆ ಅರ್ಹ ಫಲಾನುಭವಿಗಳ ಖಾತೆಗೆ ಹಣ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದರು.
ತಾಲೂಕಿನ ಜಂಬಳ್ಳಿ ಮಾರ್ಗದ ಬಸ್ ಸಮಸ್ಯೆ ಇದ್ದು, ನಿಗದಿತ ವೇಳೆಗೆ ಬರುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬರುತ್ತಿದೆ. ಸರ್ಕಾರಿ ಬಸ್ ಚಾಲಕ-ನಿರ್ವಾಹಕರು ಖಾಸಗಿ ಬಸ್ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು ನಿಗದಿತ ವೇಳೆಗೆ ಬಸ್ ವ್ಯವಸ್ಥೆ ಕಲ್ಪಿಸುತ್ತಿಲ್ಲ ಎಂಬ ಆರೋಪವಿದೆ. ಅಂಥವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಪಂ ಇಒ ಕೆ.ಜಿ.ಶಶಿಧರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಪ್ರಭಾಕರ ಶಿಗ್ಗಾ, ಮಂಜುನಾಥ್ ತಲಗಡ್ಡೆ, ಸದಸ್ಯರು, ಅಧಿಕಾರಿಗಳು ಹಾಜರಿದ್ದರು.