ಭದ್ರಾ ಜಲಾಶಯದ ಲಕ್ಕವಳ್ಳಿ ಭಾಗದಲ್ಲಿ ಇನ್‌ಟೇಕ್ ಜಾಕ್‌ವೆಲ್ ಮತ್ತು ಟ್ಯಾಂಕ್ ನಿರ್ಮಾಣಕ್ಕಾಗಿ ನಡೆಯುತ್ತಿರುವ ಕಾಮಗಾರಿಯನ್ನು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪರಿಶೀಲಿಸಿದರು. ಬಸವರಾಜ್ ನಾಯಕ್, ಕೊಳನಳ್ಳಿ ಸತೀಶ್, ಲೋಕಿಕೆರೆ ನಾಗರಾಜ್, ಚಂದ್ರಶೇಖರ್ ಪೂಜಾರ್, ಕಡ್ಲೆಬಾಳ್ ಧನಂಜಯ್ ಇದ್ದರು. 
ಶಿವಮೊಗ್ಗ

ಭದ್ರಾ ಜಲಾಶಯ ಸನಿಹ ಜಿಲೆಟಿನ್ ಬಳಸಿ ಬಂಡೆ ಸ್ಫೋಟ | Bhadra Reservoir

ಪ್ರಮುಖ ಮುಖ್ಯಾಂಶಗಳು

  • ಕೇವಲ 800 ಮೀ. ಅಂತರದಲ್ಲಿ ಜಾಕ್‌ವೆಲ್ ಕಾಮಗಾರಿ
  • ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಪರಿಶೀಲನೆ
  • ಲಕ್ಕವಳ್ಳಿ ಭಾಗದಲ್ಲಿ ಇನ್‌ಟೇಕ್ ಜಾಕ್‌ವೆಲ್, ಟ್ಯಾಂಕ್ ನಿರ್ಮಾಣ
ಶಿವಮೊಗ್ಗ: ಭದ್ರಾ ಜಲಾಶಯದಿಂದ ಕೇವಲ 800 ಮೀಟರ್ ಅಂತರದಲ್ಲಿ ಜಿಲೆಟಿನ್ ಬಳಸಿ ಬಂಡೆಗಳನ್ನು ಸ್ಫೋಟಿಸಿ ಜಾಕ್‌ವೆಲ್ ಕಾಮಗಾರಿ ಕೈಗೊಳ್ಳುತ್ತಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ(Former Minister Renukacharya) ಬೇಸರ ವ್ಯಕ್ತಪಡಿಸಿದರು.
ಭದ್ರಾ ಜಲಾಶಯದ ಲಕ್ಕವಳ್ಳಿ ಭಾಗದಲ್ಲಿ ಇನ್‌ಟೇಕ್ ಜಾಕ್‌ವೆಲ್(Intake Jackwell) ಮತ್ತು ಟ್ಯಾಂಕ್ ನಿರ್ಮಾಣಕ್ಕಾಗಿ ನಡೆಯುತ್ತಿರುವ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿದ ಅವರು, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಜೀವನಾಡಿಯಾಗಿರುವ ಭದ್ರಾ ಜಲಾಶಯವು ಲಕ್ಷಾಂತರ ರೈತರ ಕೃಷಿ ಚಟುವಟಿಕೆ(Agricultural activity)ಗಳಿಗೆ ಹಾಗೂ ಜಿಲ್ಲೆಯ ಜನರ ಕುಡಿಯುವ ನೀರಿನ ಅವಶ್ಯಕತೆಗೆ ಆಧಾರವಾಗಿದೆ. ಆದರೆ ಜಲಾಶಯದ ಸನಿಹದಲ್ಲೇ ಸ್ಫೋಟಕ ಬಳಸುತ್ತಿರುವುದು ಸರಿಯಲ್ಲ ಎಂದರು.
ನಮ್ಮ ಹೋರಾಟವು ಯಾವುದೇ ಜಿಲ್ಲೆಯ ಜನರಿಗೆ ಕುಡಿಯುವ ನೀರು ಒದಗಿಸುವ ಯೋಜನೆಗೆ ವಿರುದ್ಧವಿಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಶುದ್ಧ ಕುಡಿಯುವ ನೀರು ಸಿಗಬೇಕಿದೆ. ಆದರೆ, ಭದ್ರಾ ಜಲಾಶಯ(Bhadra Reservoir)ದ ಸುರಕ್ಷತೆಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಸ್ಫೋಟಕಗಳನ್ನು ಬಳಸಿ ಕಾಮಗಾರಿ ನಡೆಸುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ದೂರಿದರು.
ಭದ್ರಾ ಜಲಾಶಯ ಕೇವಲ ಒಂದು ಕಟ್ಟಡವಲ್ಲ. ಅದು ದಾವಣಗೆರೆ, ಹರಿಹರ, ಹೊನ್ನಾಳಿ, ಚನ್ನಗಿರಿ, ಹರಪನಹಳ್ಳಿ ಸೇರಿ ಅನೇಕ ಭಾಗಗಳ ರೈತರ ಬದುಕಿನ ಆಶಾಕಿರಣ. ಜಲಾಶಯಕ್ಕೆ ಯಾವುದೇ ರೀತಿಯ ಹಾನಿ ಸಂಭವಿಸಿದರೆ ಅದರ ಪರಿಣಾಮ ಸಾವಿರಾರು ರೈತ ಕುಟುಂಬಗಳ ಮೇಲೆ ಬೀಳಲಿದೆ. ಆದ್ದರಿಂದ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ತಜ್ಞರಿಂದ ವೈಜ್ಞಾನಿಕ ಪರಿಶೀಲನೆ(Scientific review) ನಡೆಸಿ, ಜಲಾಶಯದ ಸುರಕ್ಷತೆಗೆ ಯಾವುದೇ ಅಪಾಯ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತರ ಹಿತಾಸಕ್ತಿ(Farmers' interests)ಯನ್ನು ಕಡೆಗಣಿಸಿ, ಭವಿಷ್ಯದಲ್ಲಿ ಅಪಾಯಕ್ಕೆ ಕಾರಣವಾಗುವ ಯಾವುದೇ ಕಾಮಗಾರಿಯನ್ನು ನಾವು ಸಹಿಸುವುದಿಲ್ಲ. ರೈತರ ಬದುಕು, ನೀರಾವರಿ ಮತ್ತು ಜಿಲ್ಲೆಯ ಜನರ ಹಿತಾಸಕ್ತಿಯ ರಕ್ಷಣೆಗೆ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು. ಮಾಜಿ ಶಾಸಕ ಬಸವರಾಜ್ ನಾಯಕ್, ರೈತ ಮುಖಂಡರಾದ ಕೊಳನಳ್ಳಿ ಸತೀಶ್, ಲೋಕಿಕೆರೆ ನಾಗರಾಜ್, ಚಂದ್ರಶೇಖರ್ ಪೂಜಾರ್, ಕಡ್ಲೆಬಾಳ್ ಧನಂಜಯ್ ಮತ್ತಿತರರು ಉಪಸ್ಥಿತರಿದ್ದರು.

ಬ್ಲಾಸ್ಟಿಂಗ್ ನಡೆಸಿಲ್ಲ; ಅಧಿಕಾರಿಗಳ ಸ್ಪಷ್ಟನೆ

ನೀರಾವರಿ ಇಲಾಖೆ ಸೇರಿ ಏಳು ಇಲಾಖೆಗಳ ಸಹಭಾಗಿತ್ವದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಭದ್ರ ಜಲಾಶಯದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಮಾಹಿತಿ ನೀಡಿದರು. ಆದರೆ ಕಾಮಗಾರಿಗೆ ಸಂಬಂಧಿಸಿದ ಅನುಮತಿ ಪತ್ರ ತೋರಿಸುವಂತೆ ಕೇಳಿದಾಗ ಅಧಿಕಾರಿಗಳು ತಕ್ಷಣ ದಾಖಲೆಗಳನ್ನು ಒದಗಿಸಲು ವಿಫಲರಾದರು. ಜಾಕ್‌ವೆಲ್ ನಿರ್ಮಾಣಕ್ಕೆ ಗ್ರಾಮಠಾಣದ ಜಾಗ ನೀಡಲಾಗಿದ್ದು, ಕಾಮಗಾರಿ ಅರಣ್ಯ ಇಲಾಖೆಯ ಬಫರ್ ವಲಯದಲ್ಲಿ ನಡೆಯುತ್ತಿದೆ ಎನ್ನಲಾಗಿದೆ. ಅಲ್ಲದೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅನುಮತಿ ಪಡೆಯದೇ ಬ್ಲಾಸ್ಟಿಂಗ್ ನಡೆಸಲಾಗುತ್ತಿದೆ ಎಂದು ರೈತ ಮುಖಂಡರು ಆರೋಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಬ್ಲಾಸ್ಟಿಂಗ್ ನಡೆಸಿಲ್ಲ, ಬದಲಾಗಿ ಯಂತ್ರಗಳ ಮೂಲಕ ಕಲ್ಲು ಒಡೆಯುವ ಕಾರ್ಯ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು. 
"

ಸರ್ಕಾರಕ್ಕೆ ಕಾಳಜಿಯಿಲ್ಲ. ಅನುಮತಿಯಿಲ್ಲದೆ ಕಾಮಗಾರಿ ನಡೆಸಲಾಗುತ್ತಿದೆ. ಕುಡಿಯುವ ನೀರಿಗೆ ಹೊಳೆಯಿಂದಲೇ ಪೂರೈಸಿಕೊಳ್ಳಬೇಕು. ಕುಡಿಯುವ ನೀರಿಗೆ ನಮ್ಮ ತಕರಾರಿಲ್ಲ. ಆದರೆ ಅನುಮತಿ ಇಲ್ಲದೆ ನಡೆಸಲಾಗುತ್ತಿದ್ದು, ಸ್ಫೋಟ ಮಾಡುವುದರಿಂದ ಮನೆಗಳು ಬಿರುಕು ಬಿಡುತ್ತಿವೆ. ಜಲಾಶಯದ ಮೇಲೂ ಪರಿಣಾಮ ಬೀರಲಿದೆ.

— ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ